

ಚೆನ್ನೈ: ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ನಿನ್ನೆ ನಡೆದ ಜೋಡಿ ಕೊಲೆ ( School Reunion ) ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಂಜಯ್ ಗಾಂಧಿ (35) ಎಂದು ಗುರುತಿಸಲಾಗಿದೆ.
ಕೊಲೆಯಾದ ಇಬ್ಬರಲ್ಲಿ ಓರ್ವ ಮಹಿಳೆಯಾಗಿದ್ದು, ಆಕೆಯ ಹೆಸರು ಮಾಲಿನಿ (31) ಎಂದು ತಿಳಿದುಬಂದಿದೆ. ಮಾಲಿನಿ ಅವರು ತಿರುವಣ್ಣಾಮಲೈನ ಶಾಲೆಯೊಂದರಲ್ಲಿ ಸಂಜಯ್ಗೆ ಸಹಪಾಠಿಯಾಗಿದ್ದರು. ಕಳೆದ ವರ್ಷ ನಡೆದ ಶಾಲಾ ಸ್ನೇಹಕೂಟದಲ್ಲಿ (ರೀ-ಯೂನಿಯನ್) ಇಬ್ಬರೂ ಭೇಟಿಯಾಗಿದ್ದರು. ಆ ಬಳಿಕ ಇಬ್ಬರ ನಡುವೆ ಮತ್ತೆ ಸ್ನೇಹ ಬೆಳೆದಿತ್ತು. ಕಳೆದ ಒಂದು ವರ್ಷದಿಂದ ಇಬ್ಬರು ಸಂಬಂಧದಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಲಿನಿ ಅವರಿಗೆ ಈಗಾಗಲೇ ವಿವಾಹವಾಗಿದ್ದರೂ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು ಎನ್ನಲಾಗಿದೆ.
ಹೀಗಿರುವಾಗ ಕಳೆದ ಕೆಲವು ಸಮಯದಿಂದ ಮಾಲಿನಿ ಅವರು ಸಂಜಯ್ ಅವರಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದರು. ಇದನ್ನು ಸಹಿಸದ ಸಂಜಯ್, ಮಾಲಿನಿಯನ್ನು ಹತ್ಯೆ ಗೈದಿದ್ದಾನೆ ಎನ್ನಲಾಗಿದೆ. ತನ್ನನ್ನು ಬಿಟ್ಟು ಅವಿವಾಹಿತ ಯುವಕನಾಗಿದ್ದ ಹಾಗೂ ಸಂಜಯ್ ಅವರ ಅಕ್ಕನ ಸಂಬಂಧಿಯೂ ಆಗಿದ್ದ ರಂಜಿತ್ ಕುಮಾರ್ (30) ಜತೆ ಮಾಲಿನಿ ಹೆಚ್ಚು ಆಪ್ತವಾಗಿದ್ದಳು ಎನ್ನಲಾಗಿದೆ.
ರಂಜಿತ್ ಜತೆ ಸಂಬಂಧ ಬೆಳೆಸಿ ತನ್ನನ್ನು ಕಡೆಗಣಿಸುತ್ತಿದ್ದಾಳೆ ಎಂದು ಸಂಜಯ್ ನಂಬಿದ್ದ. ಇದರಿಂದ ಆಕ್ರೋಶಗೊಂಡ ಆತ ಇಬ್ಬರನ್ನೂ ಮುಗಿಸಲು ನಿರ್ಧರಿಸಿದನು. ಸ್ಥಳವೊಂದಕ್ಕೆ ಭೇಟಿ ನೀಡಲು ಕಾರಿನಲ್ಲಿ ಬಂದಿದ್ದ ಮಾಲಿನಿ ಮತ್ತು ರಂಜಿತ್ ಅವರು ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ ಸಂಜಯ್ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸದ್ಯ ಆರೋಪಿ ಸಂಜಯ್‌ನನ್ನು ಬಂಧಿಸಿರುವ ಪೊಲೀಸರು ಕೊಲೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ಈ ಭೀಕರ ಜೋಡಿ ಕೊಲೆ ಘಟನೆಯ ಬೆನ್ನಲ್ಲೇ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಪಕ್ಷದ ನಾಯಕರೂ ಆಗಿರುವ ಉದಯನಿಧಿ ಸ್ಟಾಲಿನ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರವಾಗಿ ಮುಖ್ಯಮಂತ್ರಿ ವಿಜಯ್ ಅವರು ನೇರ ಹೊಣೆ ಹೊರಬೇಕು ಎಂದೂ ಸ್ಟಾಲಿನ್ ಆಗ್ರಹಿಸಿದ್ದಾರೆ. ಆರೋಪ-ಪ್ರತ್ಯಾರೋಪಗಳನ್ನು ಮಾಡುವುದು ಹಾಗೂ ರೀಲ್ಸ್ ಪ್ರದರ್ಶನವನ್ನು ಬಿಟ್ಟು, ಕಾನೂನು ಸುವ್ಯವಸ್ಥೆ ಸ್ಥಾಪಿಸಲು 'ಡಮ್ಮಿ ಮುಖ್ಯಮಂತ್ರಿ' ಮುಂದಾಗಬೇಕು ಎಂದು ಉದಯನಿಧಿ ಕಟುವಾಗಿ ಟೀಕಿಸಿದ್ದಾರೆ. ಮತ್ತೊಂದೆಡೆ, ಆರೋಪಿ ಸಂಜಯ್, ತಿರುವಣ್ಣಾಮಲೈನಲ್ಲಿ ಟಿವಿಕೆ (TVK) ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ.
ಹಳೆಯ ಸ್ನೇಹಕೂಟದಲ್ಲಿ ಮತ್ತೆ ಬೆಸೆದ ಸಂಬಂಧವು ಅಂತಿಮವಾಗಿ ಇಬ್ಬರ ಜೀವವನ್ನೇ ಬಲಿ ಪಡೆದಿರುವುದು ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವೈಯಕ್ತಿಕ ದ್ವೇಷ, ಅನುಮಾನ ಹಾಗೂ ಆವೇಶದ ತುತ್ತತುದಿಯಲ್ಲಿ ನಡೆದ ಈ ಕೃತ್ಯವು ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದ್ದು, ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ಕೇಳಿಬರುತ್ತಿರುವ ನಡುವೆಯೇ, ಕೊಲೆಯ ಹಿಂದಿನ ನಿಖರ ಉದ್ದೇಶಗಳು ಮತ್ತು ಇತರ ಆಯಾಮಗಳ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ, (ಏಜೆನ್ಸೀಸ್).