ವೈಭವಯುತ ಆಟ ನೋಡಲು ಕೊನೆಗೂ ಕೂಡಿಬಂತು ಕಾಲ 
ಕ್ರಿಕೆಟ್

'ವೈಭವ'ಯುತ ಆಟ ನೋಡಲು ಕೊನೆಗೂ ಕೂಡಿಬಂತು ಕಾಲ...ಸೂರ್ಯವಂಶಿ ಎಂಟ್ರಿ ಬಗ್ಗೆ ಮಹತ್ವದ ಸುಳಿವು ನೀಡಿದ ಬ್ಯಾಟಿಂಗ್ ಕೋಚ್! | Vaibhav Sooryavanshi

Vaibhav Sooryavanshi: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಕ್ರಿಕೆಟ್ ಸರಣಿಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಟೀಮ್​ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ತಂಡದಲ್ಲಿ ಸ್ಥಾನ ಪಡೆಯಲು ಇನ್ನೂ ಸ್ವಲ್ಪ ಕಾಲ ಕಾಯಬೇಕಾಗುತ್ತದೆ ಎಂದು ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿಕೆ ನೀಡಿದ ಕೇವಲ ಎರಡು ದಿನಗಳ ಬಳಿಕ ವೈಭವ್​ ಗುಡ್​​​ನ್ಯೂಸ್​ ಸಿಕ್ಕಿದೆ.

Vaibhav Sooryavanshi: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಕ್ರಿಕೆಟ್ ಸರಣಿಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಟೀಮ್​ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ತಂಡದಲ್ಲಿ ಸ್ಥಾನ ಪಡೆಯಲು ಇನ್ನೂ ಸ್ವಲ್ಪ ಕಾಲ ಕಾಯಬೇಕಾಗುತ್ತದೆ ಎಂದು ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿಕೆ ನೀಡಿದ ಕೇವಲ ಎರಡು ದಿನಗಳ ಬಳಿಕ ವೈಭವ್​ ಗುಡ್​​​ನ್ಯೂಸ್​ ಸಿಕ್ಕಿದೆ.

ವೈಭವ್​ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಅವಕಾಶ ದೊರೆಯುವ ಸಾಧ್ಯತೆ ದಟ್ಟವಾಗಿದೆ. ತಂಡದ ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ಅಗ್ರಕ್ರಮಾಂಕದಲ್ಲಿ ಅವಕಾಶವಿಲ್ಲದ ಕಾರಣದಿಂದಾಗಿ ಅವರು ಮೊದಲ ಪಂದ್ಯದಲ್ಲಿ ಬೆಂಚ್ ಕಾಯಬೇಕಾಗಿ ಬಂದಿತ್ತು. ಆದರೆ ಈಗ ಇಶಾನ್ ಕಿಶನ್ ಗಾಯದ ಸಮಸ್ಯೆಯಿಂದ ಹೊರಗುಳಿಯುವ ಸಾಧ್ಯತೆಯಿರುವುದರಿಂದ ವೈಭವ್‌ಗೆ ಅದೃಷ್ಟ ಒಲಿದುಬಂದಿದೆ.

ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದ ಮುಕ್ತಾಯದ ಬಳಿಕ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್, ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರಿಗೆ ತೊಡೆಯ ಗಾಯದ ಸಮಸ್ಯೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರು ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿರುವ ಮುಂದಿನ ಎರಡನೇ ಪಂದ್ಯದಲ್ಲಿ ಆಡುವುದು ಅತ್ಯಂತ ಅನುಮಾನ ಎಂದು ತಿಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಅವರನ್ನು ಎಂದಿನಂತೆ 3ನೇ ಕ್ರಮಾಂಕದಲ್ಲಿ ಕಳುಹಿಸಲಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು.

ಇದನ್ನೂ ಓದಿ:ನಮ್ಮ ನಮ್ಮಲ್ಲೇ ಜಗಳ, 2007ರ ವರ್ಲ್ಡ್ ಕಪ್ ಸೋಲಿಗೆ ಅವನು ಸೃಷ್ಟಿಸಿದ್ದ ಕಿಚ್ಚೇ ಕಾರಣ!...ಹರ್ಭಜನ್ ಸ್ಫೋಟಕ ಆರೋಪ! | Harbhajan Singh

ಆರಂಭದಲ್ಲಿ ಇದು ಟೀಮ್ ಇಂಡಿಯಾದ ಮತ್ತೊಂದು ತಂತ್ರಗಾರಿಕೆಯ ಪ್ರಯೋಗವಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ತಿಲಕ್ ವರ್ಮಾ ಅವರು ತಮ್ಮ ಹಳೆಯ 3ನೇ ಕ್ರಮಾಂಕದಲ್ಲೇ ಕ್ರೀಸ್‌ಗಿಳಿದರು. ನಂತರ ಇಶಾನ್ ಕಿಶನ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರಾದರೂ, ಕೇವಲ ಮೂರು ಎಸೆತಗಳನ್ನು ಎದುರಿಸಿ ವಿಕೆಟ್ ಒಪ್ಪಿಸಿದರು. ಆರನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ಅವರು, ಫಿನ್ ಅಲೆನ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್, ಇಶಾನ್ ಕಿಶನ್‌ಗೆ ತೊಡೆಯ ನರಗಳ ಸೆಳೆತದ ಸಮಸ್ಯೆಯಿದೆ, ಅದಕ್ಕಾಗಿಯೇ ತಿಲಕ್ ವರ್ಮಾ ಅವರನ್ನು ಮೇಲಕ್ಕೆ ಬಡ್ತಿ ನೀಡಲಾಗಿತ್ತು. ವೈದ್ಯಕೀಯ ತಂಡವು ಸಂಪೂರ್ಣ ಚೇತರಿಕೆಯ ಪ್ರಮಾಣಪತ್ರ ನೀಡುವವರೆಗೆ ಇಶಾನ್ ಆಡುವುದು ಅನುಮಾನ. ಅವರು ಆಡದಿದ್ದರೆ ಆ ಸ್ಥಾನದ ಸ್ಪರ್ಧೆಯಲ್ಲಿ ಸೂರ್ಯವಂಶಿ ಮುಂದಿದ್ದು, ಬಹುಶಃ ಅವರಿಗೆ ಚಾನ್ಸ್ ಸಿಗಬಹುದು ಎಂದು ಕೋಟಕ್​ ಮುನ್ಸೂಚನೆ ನೀಡಿದ್ದಾರೆ.

ಅವನಿನ್ನು ಚಿಕ್ಕವನು ಅಂದಿದ್ದ ಐಯ್ಯರ್​!

ಮೊದಲ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಿಂದ ಹೊರಗುಳಿದಿದ್ದ ವೈಭವ್ ಸೂರ್ಯವಂಶಿಗೆ ಈ ಬೆಳವಣಿಗೆಯು ದೊಡ್ಡ ಅವಕಾಶವನ್ನು ತಂದುಕೊಡುವ ಸಾಧ್ಯತೆಯಿದೆ. ಜಪಾನ್​ನಲ್ಲಿ ನಡೆದ ಏಷ್ಯನ್ ಗೇಮ್ಸ್ ಫೈನಲ್‌ ಬಳಿಕ ಅವರಿಗೆ ಯಾವುದೇ ಪಂದ್ಯದಲ್ಲೂ ಅವಕಾಶ ಸಿಕ್ಕಿರಲಿಲ್ಲ. ಈ ವಿಷಯವಾಗಿ ಮಾಧ್ಯಮಗಳಲ್ಲಿ ಮತ್ತು ಕ್ರಿಕೆಟ್ ವಲಯಗಳಲ್ಲಿ ಚರ್ಚೆಗಳು ಹೆಚ್ಚಾದಾಗ, ನಾಯಕ ಶ್ರೇಯಸ್ ಅಯ್ಯರ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಆಟಗಾರನಿಗೆ ತುಸು ಸಂಯಮದಿಂದ ಇರುವಂತೆ ಸಲಹೆ ನೀಡಿದ್ದರು. ಅವರು ತುಂಬಾ ಚಿಕ್ಕವರು, ಅವಕಾಶಗಳನ್ನು ಪಡೆಯಲು ಅವರಿಗೆ ಇನ್ನೂ ಸಾಕಷ್ಟು ಸಮಯವಿದೆ. ನಮ್ಮ ಆರಂಭಿಕ ಆಟಗಾರರು ಈಗಾಗಲೇ ಉತ್ತಮವಾಗಿ ಬ್ಯಾಟ್​ ಬೀಸುತ್ತಿರುವುದರಿಂದ ತುಸು ಸ್ಪರ್ಧೆ ಇದೆ ಎನ್ನುವುದನ್ನು ಶ್ರೇಯಸ್ ಒಪ್ಪಿಕೊಂಡಿದ್ದರು.

ಅಕ್ಟೋಬರ್ 24 ರಂದು ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿರುವ ಟೀಮ್​ ಇಂಡಿಯಾ 1-0 ಮುನ್ನಡೆ ಕಾಯ್ದುಕೊಂಡಿದ್ದು, ಇಂದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಂತಿಮ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಕುತೂಹಲ ಮೂಡಿದೆ(ಏಜೆನ್ಸೀಸ್​).