Harbhajan Singh: ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಆ ವ್ಯಕ್ತಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ ಅವಧಿಯು ಅತ್ಯಂತ ಕಷ್ಟಕರ ಮತ್ತು ವಿವಾದಾತ್ಮಕವಾಗಿತ್ತು. ಈ ಕುರಿತು ಮಾತನಾಡಿರುವ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಆ ದಿನಗಳನ್ನು ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಕರಾಳ ದಿನಗಳು ಎಂದು ಕರೆದಿದ್ದಾರೆ.
2003ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್-ಅಪ್ ಆಗಿತ್ತು. ಇದರ ಬೆನ್ನಲ್ಲೇ ಜೂನ್ 2005ರಲ್ಲಿ ಗ್ರೆಗ್ ಚಾಪೆಲ್ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಕ್ರಿಕೆಟ್ ಲೋಕದ ದಿಗ್ಗಜರಲ್ಲೊಬ್ಬರಾದ ಚಾಪೆಲ್ ಆಗಮನದಿಂದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜರೊಂದಿಗೆ ಅವರು ಹೇಗೆ ಕೆಲಸ ಮಾಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು.
ಆದರೆ, ಈ ಆರಂಭಿಕ ನಿರೀಕ್ಷೆಗಳು ಸುಳ್ಳಾಗಿ, ಚಾಪೆಲ್ ಅವರ ಅಧಿಕಾರಾವಧಿಯು ವಿವಾದಗಳಿಂದ ಕೂಡಿದ್ದು, ಅಂತಿಮವಾಗಿ 2007ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಲೀಗ್ ಹಂತದಲ್ಲೇ ಹೊರಬೀಳುವ ಮೂಲಕ ದುರಂತ ಅಂತ್ಯ ಕಂಡಿತು. ಪ್ರಖರ್ ಗುಪ್ತಾ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, ಚಾಪೆಲ್ ತಂಡದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಮ್ಯಾಚ್ ಮುಗಿಸೋಕೆ ನಾವು ಆಗ್ಲೇ ಆ ಪ್ಲ್ಯಾನ್ ಮಾಡಿದ್ವಿ!....ಗೆಲುವಿನ ಗುಟ್ಟು ಬಹಿರಂಗಪಡಿಸಿದ ಸಂಜು | Sanju Samson
ದಾದಾ (ಸೌರವ್ ಗಂಗೂಲಿ) ಜತೆ ಚಾಪೆಲ್ ನಡೆದುಕೊಂಡ ರೀತಿ ಮತ್ತು ಆ ದಿನಗಳಲ್ಲಿ ಅವರು ಭಾರತೀಯ ತಂಡದೊಂದಿಗೆ ಮಾಡಿದ್ದೆಲ್ಲವೂ ಕ್ರಿಕೆಟ್ ಇತಿಹಾಸದ ಅತ್ಯಂತ ಕರಾಳ ಮತ್ತು ಕೆಟ್ಟ ಅಧ್ಯಾಯಗಳಲ್ಲಿ ಒಂದಾಗಿದೆ. ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದ್ದು ಭಾರತೀಯ ಮ್ಯಾನೇಜ್‌ಮೆಂಟ್ ಮಾಡಿದ ಅತ್ಯಂತ ಕೆಟ್ಟ ನಿರ್ಧಾರಗಳಲ್ಲಿ ಒಂದಾಗಿದೆ. ಚಾಪೆಲ್ ಒಡೆದು ಆಳುವ ನೀತಿಯನ್ನು ಜಾರಿಗೆ ತಂದರು. ತಾವೊಬ್ಬ ರಾಜನಂತೆ ಮೆರೆಯುತ್ತಾ, ಆಟಗಾರರ ನಡುವೆಯೇ ಜಗಳ ಹಚ್ಚಿದರು ಎಂದು ಹರ್ಭಜನ್ ಕಿಡಿಕಾರಿದ್ದಾರೆ.
ಚಾಪೆಲ್ ಇಡೀ ತಂಡವನ್ನು ಹಾಳುಮಾಡಿದರು. 2003ರ ಏಕದಿನ ವಿಶ್ವಕಪ್‌ನಲ್ಲಿ ಒಟ್ಟಿಗೆ ಆಡಿ ಅತ್ಯಂತ ಅನ್ಯೂನ್ಯತೆಯಿಂದ, ಒಗ್ಗಟ್ಟಿನಿಂದ ಇದ್ದ ಆಟಗಾರರು ಆ ಬಳಿಕ ಪರಸ್ಪರ ಮಾತನಾಡುವುದನ್ನೇ ನಿಲ್ಲಿಸಿದ್ದರು. ನಮ್ಮ ತಂಡದ ಎಲ್ಲಾ ಆಟಗಾರರಲ್ಲೂ ನಿಕಟ ಸಂಬಂಧ ಇತ್ತು, ಚಾಪೆಲ್ ಅದನ್ನು ಅಕ್ಷರಶಃ ಹಾಳು ಎಂದು ಭಜ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಆ ಕಾಲಘಟ್ಟದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಬಲವಾದ ಪೈಪೋಟಿ ನೀಡಬಲ್ಲ ಏಕೈಕ ತಂಡ ಅಂದ್ರೆ ಅದು ಭಾರತ. ಚಾಪೆಲ್ ಉದ್ದೇಶಪೂರ್ವಕವಾಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಡಕು ಮೂಡಿಸಿ ತಂಡವನ್ನು ದುರ್ಬಲಗೊಳಿಸಲು ಪ್ರಯತ್ನಿಸಿರಬಹುದು ಎಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ. ನನ್ನ ಪ್ರಕಾರ, ಚಾಪೆಲ್ ಮುಖ್ಯ ತಂತ್ರವೇ ಬೇರೆ ಇತ್ತು. ಆ ದಿನಗಳಲ್ಲಿ ಆಸ್ಟ್ರೇಲಿಯಾವನ್ನು ನಿರಂತರವಾಗಿ ಎದುರಿಸುತ್ತಿದ್ದ ಏಕೈಕ ತಂಡ ಭಾರತವಾಗಿತ್ತು. ನಾವು ಮೈದಾನದಲ್ಲಿ ಒಗ್ಗಟ್ಟಿನಿಂದ ಆಡಿ ಗೆಲ್ಲಬಾರದು ಎಂಬ ಕಾರಣಕ್ಕೇ ಅವರು ನಮ್ಮನ್ನು ವಿಭಜಿಸಲು ಯತ್ನಿಸಿರಬಹುದು. ಅದೇ ಕಾರಣಕ್ಕೆ 2007ರ ವಿಶ್ವಕಪ್‌ನಲ್ಲೂ ನಮಗೆ ಅದೇ ಪರಿಸ್ಥಿತಿ ಎದುರಾಯಿತು ಎಂದು ದಿಗ್ಗಜ ಸ್ಪಿನ್ನರ್ತಿಳಿಸಿದ್ದಾರೆ.
2003ರಲ್ಲಿ ಫೈನಲ್ ತಲುಪಿದ್ದ ಭಾರತ ತಂಡವು, 2007ರ ವಿಶ್ವಕಪ್‌ನಲ್ಲಿ ಹೀನಾಯವಾಗಿ ಗುಂಪು ಹಂತದಲ್ಲೇ ಹೊರಬಿತ್ತು. ಈ ಪ್ರವಾಸದಲ್ಲಿ ಬಾಂಗ್ಲಾದೇಶದ ವಿರುದ್ಧ ಎದುರಾದ ಆಘಾತಕಾರಿ ಸೋಲು ತಂಡದ ಪಾಲಿಗೆ ದೊಡ್ಡ ಹಿನ್ನಡೆಯಾಯಿತು ಮತ್ತು ಟೂರ್ನಿಯಿಂದ ಬೇಗನೆ ಹೊರಬೀಳಲು ಪ್ರಮುಖ ಕಾರಣವಾಯಿತು. ಒಟ್ಟಾರೆಯಾಗಿ, ಗ್ರೆಗ್ ಚಾಪೆಲ್ ಕೋಚಿಂಗ್ ಅವಧಿಯು ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಕಹಿ ಸತ್ಯವಾಗಿದ್ದು, ಆಟಗಾರರ ನಡುವಿನ ಒಗ್ಗಟ್ಟನ್ನು ಸಂಪೂರ್ಣವಾಗಿ ಹದಗೆಡಿಸಿತ್ತು ಎಂಬುದನ್ನು ಹರ್ಭಜನ್ ಸಿಂಗ್ ಅವರ ಮಾತುಗಳು ಸ್ಪಷ್ಟಪಡಿಸುತ್ತವೆ(ಏಜೆನ್ಸೀಸ್).