ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರಾಗಿ ಜಯ್ ಷಾ ( Jay Shah ) ಅವರು ಭಾನುವಾರ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ಮುಕ್ತಾಯಗೊಂಡ ಐಸಿಸಿ ಮಂಡಳಿಯ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಂಸ್ಥೆಯಲ್ಲಿ ಸ್ಥಿರತೆ ಮತ್ತು ಆಡಳಿತದ ನಿರಂತರತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಸದಸ್ಯ ರಾಷ್ಟ್ರಗಳು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ, ಜಯ್ ಷಾ ಅವರ ಹೆಸರನ್ನು ಮತ್ತೊಂದು ಮೂರು ವರ್ಷಗಳ ಅವಧಿಗೆ ಪ್ರಸ್ತಾಪಿಸಿ ಸರ್ವಾನುಮತದಿಂದ ಅನುಮೋದಿಸಲಾಯಿತು. ಇದರೊಂದಿಗೆ ವಿಶ್ವ ಕ್ರಿಕೆಟ್ನ ಅತ್ಯುನ್ನತ ಹುದ್ದೆಯಲ್ಲಿ ಜಯ್ ಷಾ ಅವರ ಹಿಡಿತ ಮತ್ತಷ್ಟು ಬಲಗೊಂಡಂತಾಗಿದೆ. ಅಲ್ಲದೆ, ಭಾರತದ ಪಾರುಪತ್ಯವೂ ಮುಂದುವರಿದಿದೆ.
2024ರ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಜಯ್ ಷಾ, ಪ್ರಸ್ತುತ ತಮ್ಮ ಎರಡನೇ ವರ್ಷದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಸಿಸಿ ನಿಯಮಗಳ ಪ್ರಕಾರ, ಒಬ್ಬ ಅಧ್ಯಕ್ಷರು ತಲಾ ಮೂರು ವರ್ಷಗಳಂತೆ ಗರಿಷ್ಠ ಎರಡು ಅವಧಿಗೆ ಮಾತ್ರ ಸೇವೆ ಸಲ್ಲಿಸಲು ಅವಕಾಶವಿದೆ. ಅದರಂತೆ, ಜಯ್ ಷಾ ಅವರ ಮೊದಲ ಅವಧಿಯು 2027ರ ಡಿಸೆಂಬರ್ನಲ್ಲಿ ಮುಕ್ತಾಯಗೊಳ್ಳಲಿದ್ದು, ತಕ್ಷಣವೇ ಅವರ ಎರಡನೇ ಅವಧಿ ಆರಂಭವಾಗಿ 2030ರ ಡಿಸೆಂಬರ್ವರೆಗೆ ಮುಂದುವರಿಯಲಿದೆ. ಈ ಮೂಲಕ ಸತತ ಆರು ವರ್ಷಗಳ ಕಾಲ ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಹೆಗ್ಗಳಿಕೆಗೆ ಜಯ್ ಷಾ ಪಾತ್ರರಾಗಲಿದ್ದಾರೆ.
ಜಯ್ ಷಾ ಅವರ ಮರು ಆಯ್ಕೆಯ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಐಸಿಸಿ, ಅವರ ನಾಯಕತ್ವದ ಮೇಲೆ ಮಂಡಳಿಯು ಸಂಪೂರ್ಣ ವಿಶ್ವಾಸ ಹೊಂದಿದೆ ಎಂದು ತಿಳಿಸಿದೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ವಿಸ್ತರಣೆ, ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ವಾಣಿಜ್ಯ ಅಭಿವೃದ್ಧಿಯಂತಹ ನಿರ್ಣಾಯಕ ಹಂತದಲ್ಲಿ ಈ ನಿರಂತರತೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಐಸಿಸಿ ಹೇಳಿದೆ. ಅಲ್ಲದೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಮತ್ತೆ ಸೇರ್ಪಡೆಯಾಗುತ್ತಿರುವುದು ಹಾಗೂ ಇತ್ತೀಚೆಗೆ ಘೋಷಿಸಲಾದ ವಿಸ್ತೃತ ದೀರ್ಘಾವಧಿಯ ಪಂದ್ಯಾವಳಿಗಳ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಜಯ್ ಷಾ ಅವರ ನಾಯಕತ್ವ ಪೂರಕವಾಗಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.
ಮರು ಆಯ್ಕೆಯ ನಂತರ ಪ್ರತಿಕ್ರಿಯಿಸಿರುವ ಜಯ್ ಷಾ, ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದು ತಮಗೆ ಸಿಕ್ಕ ದೊಡ್ಡ ಗೌರವ ಮತ್ತು ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. "ಪ್ರಪಂಚದಾದ್ಯಂತ ಕ್ರಿಕೆಟ್ ಹಿತಾಸಕ್ತಿಗಳನ್ನು ಮುಂದಕ್ಕೆ ಕೊಂಡೊಯ್ಯಲು ಸದಸ್ಯ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ನಾನು ಸದಾ ಬದ್ಧನಾಗಿದ್ದೇನೆ. ಜನರನ್ನು ಒಗ್ಗೂಡಿಸುವ ಶಕ್ತಿಯೇ ಕ್ರಿಕೆಟ್ನ ಅತಿದೊಡ್ಡ ಸಾಮರ್ಥ್ಯ ಎಂದು ನಾನು ಯಾವಾಗಲೂ ನಂಬಿದ್ದೇನೆ. ಮಂಡಳಿ ಮತ್ತು ಸದಸ್ಯರ ಬೆಂಬಲದೊಂದಿಗೆ, ನಮ್ಮ ಮಹತ್ವಾಕಾಂಕ್ಷೆಗಳನ್ನು ಕಾರ್ಯರೂಪಕ್ಕೆ ತರುವುದು ಮತ್ತು ಮುಂದಿನ ಪೀಳಿಗೆಗೆ ಶಾಶ್ವತ ಪರಂಪರೆಯನ್ನು ಬಿಟ್ಟುಹೋಗುವಂತೆ ಪ್ರಗತಿ ಸಾಧಿಸುವುದು ನಮ್ಮ ಮುಖ್ಯ ಗುರಿಯಾಗಿದೆ" ಎಂದು ಷಾ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದೇ ವೇಳೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಅವರು ಜಯ್ ಷಾ ಅವರ ಮರು ಆಯ್ಕೆಯನ್ನು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದ್ದಾರೆ. "ಮುಂಬರುವ ವರ್ಷಗಳಲ್ಲಿ ಆಟದ ಸಂಪ್ರದಾಯಗಳನ್ನು ಉಳಿಸಿಕೊಳ್ಳುವುದರ ಜತೆಗೆ ಹೊಸ ಆವಿಷ್ಕಾರಗಳು, ಹೊಸ ಪ್ರೇಕ್ಷಕರು ಮತ್ತು ಬದಲಾಗುತ್ತಿರುವ ವಾಣಿಜ್ಯ ವ್ಯವಸ್ಥೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಬಹಳ ನಿರ್ಣಾಯಕವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಸುಸ್ಥಿರ ದಿಕ್ಕನ್ನು ನೀಡುವಲ್ಲಿ ಐಸಿಸಿ ಪ್ರಮುಖ ಪಾತ್ರ ವಹಿಸುತ್ತದೆ. ಜಯ್ ಷಾ ಅವರ ಮರು ನೇಮಕಕ್ಕೆ ನನ್ನ ಅಭಿನಂದನೆಗಳು, ಆಟದ ಈ ಮಹತ್ವದ ಮುಂದಿನ ಹಂತದಲ್ಲಿ ಅವರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಥಾಂಪ್ಸನ್ ತಿಳಿಸಿದ್ದಾರೆ, (ಏಜೆನ್ಸೀಸ್).