ಬೌಲರ್ಸ್‌ ಪರಾಕ್ರಮ, ಭಾರತ ಐತಿಹಾಸಿಕ ಸರಣಿ ವಿಕ್ರಮ: 7 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಕಿವೀಸ್

ಎಡಗೈ ವೇಗಿ ಅರ್ಷದೀಪ್ ಸಿಂಗ್ (30ಕ್ಕೆ 3) ಸಹಿತ ಯುವ ಬೌಲಿಂಗ್ ವಿಭಾಗದ ಶಿಸ್ತಿನ ದಾಳಿಯ ನೆರವಿನಿಂದ ಭಾರತ ತಂಡ, ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 22 ರನ್‌ಗಳ ಜಯಭೇರಿ ಕಂಡಿತು. ಈ ಮೂಲಕ ಟೀಮ್ ಇಂಡಿಯಾ 3-1 ಅಂತರದಿಂದ ಸರಣಿ ಒಲಿಸಿಕೊಂಡಿದ್ದು, ಹಾಲಿ ಪ್ರವಾಸದ ಎರಡೂ (ಟಿ20, ಏಕದಿನ) ಸೀಮಿತ ಓವರ್‌ಗಳ ಸರಣಿ ಗೆದ್ದಂತಾಗಿದೆ. ಜತೆಗೆ ತವರಿನಲ್ಲಿ ನ್ಯೂಜಿಲೆಂಡ್ ತಂಡದ ಏಳು ವರ್ಷಗಳ ಸತತ 11 ಏಕದಿನ ಸರಣಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತ ತಂಡ, 2024ರಲ್ಲಿ ತವರಿನಲ್ಲಿ ಕಂಡಿದ್ದ ಟೆಸ್ಟ್ ಸರಣಿ ಸೋಲಿಗೆ ಮುಯ್ಯಿ ತೀರಿಸಿದ ಸಮಾಧಾನ ಕಂಡಿದೆ.
ಸರಣಿ ಗೆದ್ದ ಸಂಭ್ರಮದಲ್ಲಿ ಟೀಮ್ ಇಂಡಿಯಾ
ಸರಣಿ ಗೆದ್ದ ಸಂಭ್ರಮದಲ್ಲಿ ಟೀಮ್ ಇಂಡಿಯಾಏಜೆನ್ಸಿ
Published on: 

ಮೌಂಟ್ ಮೌಂಗನುಯಿ: ಎಡಗೈ ವೇಗಿ ಅರ್ಷದೀಪ್ ಸಿಂಗ್ (30ಕ್ಕೆ 3) ಸಹಿತ ಯುವ ಬೌಲಿಂಗ್ ವಿಭಾಗದ ಶಿಸ್ತಿನ ದಾಳಿಯ ನೆರವಿನಿಂದ ಭಾರತ ತಂಡ, ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 22 ರನ್‌ಗಳ ಜಯಭೇರಿ ಕಂಡಿತು. ಈ ಮೂಲಕ ಟೀಮ್ ಇಂಡಿಯಾ 3-1 ಅಂತರದಿಂದ ಸರಣಿ ಒಲಿಸಿಕೊಂಡಿದ್ದು, ಹಾಲಿ ಪ್ರವಾಸದ ಎರಡೂ (ಟಿ20, ಏಕದಿನ) ಸೀಮಿತ ಓವರ್‌ಗಳ ಸರಣಿ ಗೆದ್ದಂತಾಗಿದೆ. ಜತೆಗೆ ತವರಿನಲ್ಲಿ ನ್ಯೂಜಿಲೆಂಡ್ ತಂಡದ ಏಳು ವರ್ಷಗಳ ಸತತ 11 ಏಕದಿನ ಸರಣಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತ ತಂಡ, 2024ರಲ್ಲಿ ತವರಿನಲ್ಲಿ ಕಂಡಿದ್ದ ಟೆಸ್ಟ್ ಸರಣಿ ಸೋಲಿಗೆ ಮುಯ್ಯಿ ತೀರಿಸಿದ ಸಮಾಧಾನ ಕಂಡಿದೆ. ಇದಕ್ಕೆ ಮುನ್ನ ಶ್ರೇಯಸ್ ಅಯ್ಯರ್ ಪಡೆ 3-2ರಿಂದ ಚುಟುಕು ಸರಣಿ ಗೆದ್ದಿತ್ತು. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರುವ ನಿಟ್ಟಿನಲ್ಲಿ ಮಹತ್ವದ್ದಾಗಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಯಶಸ್ಸು ಕಾಣುವತ್ತ ಭಾರತ ಗಮನಹರಿಸಲಿದೆ.

ಭಾನುವಾರ ಬೇ ಓವಲ್‌ನಲ್ಲಿ ಭಾನುವಾರ ನಡೆದ ನಿರ್ಣಾಯಕ ಕಾದಾಟದಲ್ಲಿ ಟಾಸ್ ಗೆದ್ದ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡರು. ಜೇಕಬ್ ಡಫಿ (60ಕ್ಕೆ 3) ಹಾಗೂ ಮ್ಯಾಥ್ಯೂ ಫಿಶರ್ (28ಕ್ಕೆ 2) ದಾಳಿಗೆ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಮತ್ತೆ ವೈಲ್ಯ ಕಂಡರು. ಆಗ, ಆಲ್ರೌಂಡರ್ ಅಕ್ಷರ್ ಪಟೇಲ್ (46) ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ (46) ಜೋಡಿ ಒದಗಿಸಿದ ಚೇತರಿಕೆ ಜತೆಗೆ ಕೆಳ ಕ್ರಮಾಂಕ ಬ್ಯಾಟರ್‌ಗಳ ಉಪಯುಕ್ತ ಆಟದಿಂದ 200ರ ಗಡಿದಾಟಿತು. ಅಂತಿಮವಾಗಿ ಭಾರತ 42.1 ಓವರ್‌ಗಳಲ್ಲಿ 209 ರನ್‌ಗಳ ಗೌರವಯುತ ಮೊತ್ತಕ್ಕೆ ಆಲೌಟ್ ಆಯಿತು.

ಪ್ರತಿಯಾಗಿ ಚೇಸಿಂಗ್‌ನಲ್ಲಿ ಉತ್ತಮ ಆರಂಭದ ನಡುವೆಯೂ ಭಾರತೀಯ ಬೌಲರ್ಸ್‌ ದಾಳಿಗೆ ತತ್ತರಿಸಿದ ಕಿವೀಸ್ 48.1 ಓವರ್‌ಗಳಲ್ಲಿ 187 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಮನೆ ಅಂಗಣದಲ್ಲಿ ಏಳು ವರ್ಷಗಳ ನಂತರ ಏಕದಿನ ಸರಣಿ ಸೋಲಿನ ಮುಖಭಂಗ ಎದುರಿಸಿತು. 2019ರಲ್ಲಿ ಭಾರತದ ಎದುರೇ ಕೊನೆಯದಾಗಿ ಏಕದಿನ ಸರಣಿ ಕೈಚೆಲ್ಲಿತ್ತು.

ಅಗ್ರ ಕ್ರಮಾಂಕ ಪರದಾಟ

ಸರಣಿಯಲ್ಲಿ ಪ್ರವಾಸಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಪರದಾಟ ಮುಂದುವರಿದರೆ, ಆರಂಭವೂ ಆತಂಕಕಾರಿಯಾಗಿತ್ತು. 86 ರನ್‌ಗೆ 4 ವಿಕೆಟ್ ಕಳೆದುಕೊಂಡ ಭಾರತ ಆಘಾತ ಎದುರಿಸಿತು. ರನ್ ಬರ ಮುಂದುವರಿಸಿದ 39 ವರ್ಷದ ರೋಹಿತ್ ಶರ್ಮ (7), ಮ್ಯಾಥ್ಯೂ ಫಿಶರ್‌ಗೆ ವಿಕೆಟ್ ಒಪ್ಪಿಸಿದರೆ, ಸರಣಿಯಲ್ಲಿ ಭಾರತ ಪರ ಏಕೈಕ ಅರ್ಧಶತಕ ಸಿಡಿಸಿದ ಬ್ಯಾಟರ್ ವಿರಾಟ್ ಕೊಹ್ಲಿ (5) ಸಹ 8ನೇ ಓವರ್‌ನಲ್ಲಿ ಫಿಶರ್ ಗಾಳಕ್ಕೆ ಸಿಲುಕಿ ಪೆವಿಲಿಯನ್ ಸೇರಿದರು. ನಂತರ ಲಯದಲ್ಲಿ ಕಾಣಿಸಿದ ಋತುರಾಜ್ ಗಾಯಕ್ವಾಡ್ (18) ಹಾಗೂ ನಾಯಕ ಶ್ರೇಯಸ್ ಅಯ್ಯರ್ (22) ನಿರೀಕ್ಷೆ ಹುಸಿಗೊಳಿಸಿದರು.

ಋತು ನಿರ್ಗಮನದ ಬಳಿಕ ಶ್ರೇಯಸ್ ಜತೆಯಾದ ಅಕ್ಷರ್ ಪಟೇಲ್ (46) 4ನೇ ವಿಕೆಟ್‌ಗೆ 55 ಎಸೆತಗಳಲ್ಲಿ 52 ರನ್ ಸೇರಿಸಿ ಆಸರೆಯಾದರು. ಬ್ಲೇರ್ ಟಿಕ್ನರ್ ಶಾರ್ಟ್ ಬಾಲ್‌ಗೆ ಶ್ರೇಯಸ್ ವಿಕೆಟ್ ನೀಡಿದರು. ನಂತರ ಅಕ್ಷರ್ ಪಟೇಲ್-ಇಶಾನ್ ಕಿಶನ್ (46) ಜೋಡಿ 5ನೇ ವಿಕೆಟ್‌ಗೆ 46 ಎಸೆತಗಳಲ್ಲಿ 35 ರನ್‌ಗಳಿಸಿದರು. ಅಕ್ಷರ್ ಔಟಾದ ನಂತರ ಇಶಾನ್ ಮತ್ತು ನಮನ್ ಧೀರ್ (22) ಜೋಡಿ 6ನೇ ವಿಕೆಟ್‌ಗೆ 50 ಎಸೆತಗಳಲ್ಲಿ ಉಪಯುಕ್ತ 36 ರನ್ ಸೇರಿಸಿತು. ಡಫಿ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿ ಮಿಂಚಿದ ಕಿಶನ್ ಅರ್ಧಶತಕದ ಸನಿಹದಲ್ಲಿ ಎಡವಿದರು.

ಸಿರಾಜ್-ಅರ್ಷದೀಪ್ ಗೆಲುವಿನಾಟ

ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ (47ಕ್ಕೆ 3) ಕೆಳ ಕ್ರಮಾಂಕಕ್ಕೆ ಕಡಿವಾಣ ಹೇರಿದಾಗ ಭಾರತ 200 ರನ್ ಕಲೆಹಾಕುವುದು ಅಸಾಧ್ಯ ಎನಿಸಿತ್ತು. ಇಶಾನ್ ಕಿಶನ್ ಜತೆಯಾಗಿ 9ನೇ ವಿಕೆಟ್‌ಗೆ 27 ಎಸೆತಗಳಲ್ಲಿ 17 ರನ್ ಸೇರಿಸಲು ಮೊಹಮದ್ ಸಿರಾಜ್ (14) ನೆರವಾದರು. ಕೊನೆಯಲ್ಲಿ ಅರ್ಷದೀಪ್ ಸಿಂಗ್ (14*) ಮತ್ತು ಸಿರಾಜ್ ನಡೆಸಿದ ಬಿರುಸಿನ ಆಟದಿಂದ ಭಾರತ 209 ರನ್‌ಗಳ ಗೌರವಯುತ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಇವರಿಬ್ಬರು 10ನೇ ವಿಕೆಟ್‌ಗೆ 10 ಎಸೆತಗಳಲ್ಲಿ 26 ರನ್‌ಗಳಿಸಿದರು. ಇದು ಕೊನೆಗೆ ಭಾರತದ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತು.

ಅರ್ಷದೀಪ್-ಸಿರಾಜ್ ಕಡಿವಾಣ

ಹಗಲಿಗಿಂತ ಹೊನಲು ಬೆಳಕಿನಲ್ಲಿ ಚೆಂಡು ಹೆಚ್ಚಿನ ಸ್ವಿಂಗ್ ಜತೆಗೆ ಹೆಚ್ಚಿನ ಬೌನ್ಸ್ ಪಡೆಯಿತು. ಇದರಿಂದ ರಕ್ಷಣಾತ್ಮಕ ಆಟಕ್ಕೆ ಮೊರಹೊದ ಟಿಮ್ ಸೈರ್ಟ್ (14) ಹಾಗೂ ವಿಲ್ ಯಂಗ್ (22) ಮೊದಲ ವಿಕೆಟ್‌ಗೆ 33 ಎಸೆತಗಳಲ್ಲಿ 26 ರನ್ ಸೇರಿಸಿದರು. 6ನೇ ಓವರ್‌ನಲ್ಲಿ ಸೈರ್ಟ್ ವಿಕೆಟ್ ಪಡೆದು ಸಿರಾಜ್ ಭಾರತಕ್ಕೆ ಮೊದಲ ಯಶಸ್ಸು ಒದಗಿಸಿದರು. 2ನೇ ವಿಕೆಟ್‌ಗೆ ವಿಲ್ ಯಂಗ್ ಜತೆಯಾದ ನಿಕ್ ಕೆಲ್ಲಿ (24) ಭಾರತಕ್ಕೆ ಸವಾಲೊಡ್ಡಿದರು. 17ನೇ ಓವರ್‌ನಲ್ಲಿ ಅರ್ಷದೀಪ್ ಶಾರ್ಟ್ ಪಿಚ್ ಎಸೆತವನ್ನು ಪುಲ್ ಮಾಡಲು ಯತ್ನಿಸಿದ ಯಂಗ್, ಋತುರಾಜ್ಗೆ ಕ್ಯಾಚ್ ನೀಡಿದರು. ಇದು ಪಂದ್ಯಕ್ಕೆ ತಿರುವು ನೀಡಿದರೆ, ಕಿವೀಸ್ ಬ್ಯಾಟರ್‌ಗಳು ನಿರಂತರ ವಿಕೆಟ್ ಕೈಚೆಲ್ಲಿದರು. ಇದರ ಬೆನ್ನಲ್ಲೇ ಅರ್ಷದೀಪ್ ಬೆನ್ನಲ್ಲೇ ಅರ್ಷದೀಪ್, ನಿಕ್ ಕೆಲ್ಲಿ ವಿಕೆಟ್ ಪಡೆದರೆ, ಅಪಾಯಕಾರಿ ಫಿನ್ ಅಲೆನ್‌ರನ್ನು (1) ಸಿರಾಜ್ ಕ್ಲೀನ್‌ಬೌಲ್ಡ್ ಮಾಡಿದರು.

83 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆತಿಥೇಯರಿಗೆ ಡೀನ್ ಫಾಕ್ಸ್‌ಕ್ರಾಫ್ಟ್ೃ (31) ಮತ್ತು ಮೈಕಲ್ ಬ್ರೇಸ್‌ವೆಲ್ (19) ಆಸರೆಯಾದರು. ಭಾರತೀಯ ಫೀಲ್ಡರ್‌ಗಳು ನೀಡಿದ ಜೀವದಾನದ ಲಾಭ ಪಡೆದ ಈ ಜೋಡಿ 5ನೇ ವಿಕೆಟ್‌ಗೆ 38 ರನ್ ಸೇರಿಸಿತು. ಆದರೆ, ಎರಡು ಓವರ್‌ಗಳ ಅಂತರದಲ್ಲಿ ಬ್ರೇಸ್‌ವೆಲ್ ಮತ್ತು ಫಾಕ್ಸ್‌ಕ್ರಾಫ್ಟ್ೃ ವಿಕೆಟ್ ಕಬಳಿಸಿದ ಭಾರತ ಚೇಸಿಂಗ್‌ಗೆ ಬ್ರೇಕ್ ಹಾಕಿತು. ನಂತರ ಏಳನೇ ವಿಕೆಟ್‌ಗೆ 58 ಎಸೆತಗಳಲ್ಲಿ 39 ರನ್‌ಗಳಿಸಿದ ಸ್ಯಾಂಟ್ನರ್ (24)-ಕ್ರಿಸ್ಟಿಯನ್ ಕ್ಲಾರ್ಕ್ (16) ಭಾರತದ ಗೆಲುವು ವಿಳಂಬಗೊಳಿಸಿದರು. ನಮನ್ ಧೀರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಸ್ಯಾಂಟ್ನರ್, ಅರ್ಷದೀಪ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಭಾರತದ ಹಾದಿ ಸುಲಭಗೊಂಡಿತು. 49ನೇ ಓವರ್‌ನಲ್ಲಿ ಜೇಕಬ್ ಡಫಿ (9) ವಿಕೆಟ್ ಪಡೆದ ಅಕ್ಷರ್ ಪಟೇಲ್, ಬ್ಯಾಟಿಂಗ್ ನಂತರ ಬೌಲಿಂಗ್‌ನಲ್ಲೂ ಗಮನಸೆಳೆದರು.

3. ಭಾರತ ತಂಡ ನ್ಯೂಜಿಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದ ಮೂರನೇ ದೃಷ್ಟಾಂತ ಇದಾಗಿದೆ. ಇದಕ್ಕೆ ಮುನ್ನ 2009ರಲ್ಲಿ ಧೋನಿ ನೇತೃತ್ವದಲ್ಲಿ 3-1 ಅಂತರ, 2019ರಲ್ಲಿ ಕೊಹ್ಲಿ ಸಾರಥ್ಯದಲ್ಲಿ 4-1ರಿಂದ ಜಯಿಸಿತ್ತು.

209. ನ್ಯೂಜಿಲೆಂಡ್ ಎದುರು ಏಕದಿನದಲ್ಲಿ ಭಾರತ ತಂಡ ಯಶಸ್ವಿಯಾಗಿ ರಕ್ಷಿಸಿಕೊಂಡ ಮೂರನೇ ಕನಿಷ್ಠ ಮೊತ್ತ ಇದಾಗಿದ್ದು, ಒಟ್ಟಾರೆ 2015ರ ನಂತರ 225ಗಿಂತ ಕಡಿಮೆ ರನ್ ಪೇರಿಸಿಯೂ ಗೆದ್ದ ಮೂರನೇ ದೃಷ್ಟಾಂತ ಎನಿಸಿದೆ.

2. ಅರ್ಷದೀಪ್ ಸಿಂಗ್ (2) 11ನೇ ಕ್ರಮಾಂಕದಲ್ಲಿ ಭಾರತ ಪರ ಏಕದಿನ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ವೆಂಕಟೇಶ್ ಪ್ರಸಾದ್, ಮೊಹಮದ್ ಶಮಿ ದಾಖಲೆ ಸರಿಗಟ್ಟಿದರು.

1. ಗೌತಮ್ ಗಂಭೀರ್‌ಗೆ ಕೋಚ್ ಆಗಿ ತವರಿನಾಚೆ ಮೊದಲ ಏಕದಿನ ಸರಣಿ ಗೆಲುವು ಇದಾಗಿದೆ.