ತಂದೆಯೊಂದಿಗೆ ಹೋಲಿಕೆ ಮಾಡುವವರಿಗೆ ವಿಶೇಷ​ ಸಂದೇಶ ರವಾನಿಸಿದ ಸೆಹ್ವಾಗ್ ಪುತ್ರ!  
ಕ್ರಿಕೆಟ್

ನಾನಿಲ್ಲಿಗೆ ಬಂದಿರುವುದು... ತಂದೆಯೊಂದಿಗೆ ಹೋಲಿಕೆ ಮಾಡುವವರಿಗೆ ವಿಶೇಷ​ ಸಂದೇಶ ರವಾನಿಸಿದ ಸೆಹ್ವಾಗ್ ಪುತ್ರ! Aryavir Sehwag

ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್ಯವೀರ್, ಆ ನಿರ್ಣಾಯಕ ಪಂದ್ಯದಲ್ಲೂ ಅತ್ಯುಪಯುಕ್ತ ಅರ್ಧಶತಕ ಸಿಡಿಸಿ ಮಿಂಚಿದ್ದರು.

ನವದೆಹಲಿ: ಕ್ರಿಕೆಟ್ ದಂತಕಥೆ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ( Aryavir Sehwag ) ತಮ್ಮದೇಯಾದ ಪ್ರತ್ಯೇಕ ಗುರುತನ್ನು ಸೃಷ್ಟಿಸಿಕೊಳ್ಳುವ ಮೂಲಕ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಅಂಡರ್-19 ಏಷ್ಯಾ ಕಪ್ 2026ರಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿ ಟೂರ್ನಿಶ್ರೇಷ್ಠ ಪ್ರಶಸ್ತಿ ಪಡೆದಿರುವ ಆರ್ಯವೀರ್, ತಂದೆಯೊಂದಿಗೆ ಆಗುವ ನಿರಂತರ ಹೋಲಿಕೆಗಳ ಬಗ್ಗೆ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಯಾರೊಬ್ಬರು ನನ್ನನ್ನು 'ಸೆಹ್ವಾಗ್ 2.0' ಎಂದು ಕರೆಯುವುದು ಇಷ್ಟವಾಗುವುದಿಲ್ಲ, ಬದಲಿಗೆ 'ಆರ್ಯವೀರ್ ಸೆಹ್ವಾಗ್' ಆಗಿ ಬೆಳೆಯಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಅಂಡರ್-19 ಏಷ್ಯಾ ಕಪ್‌ನಲ್ಲಿ ಭಾರತ ತಂಡದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರನೆಂಬ ಕೀರ್ತಿಗೆ ಆರ್ಯವೀರ್ ಭಾಜನರಾಗಿದ್ದಾರೆ. ಟೂರ್ನಿಯಲ್ಲಿ ಒಟ್ಟು 361 ರನ್‌ಗಳನ್ನು ಕಲೆಹಾಕಿರುವ ಇವರು, 90.25ರ ಭರ್ಜರಿ ಸರಾಸರಿ ಹೊಂದಿದ್ದು, ಅದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್ಯವೀರ್, ಆ ನಿರ್ಣಾಯಕ ಪಂದ್ಯದಲ್ಲೂ ಅತ್ಯುಪಯುಕ್ತ ಅರ್ಧಶತಕ ಸಿಡಿಸಿ ಮಿಂಚಿದ್ದರು.

ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ಪಂದ್ಯಾವಳಿಯ ವೇಳೆ ಆರ್ಯವೀರ್ ಆಡಿದ ಕೆಲವು ಆಕ್ರಮಣಕಾರಿ ಶಾಟ್‌ಗಳು ಅವರ ತಂದೆ ವೀರೇಂದ್ರ ಸೆಹ್ವಾಗ್ ಅವರು ಆಡುತ್ತಿದ್ದ ಶೈಲಿಯನ್ನು ನೆನಪಿಸಿದ್ದವು. ಅಂದಿನಿಂದಲೇ ಕ್ರಿಕೆಟ್ ವಿಶ್ಲೇಷಕರು ಮತ್ತು ಅಭಿಮಾನಿಗಳು ಆರ್ಯವೀರ್ ಅವರ ಬ್ಯಾಟಿಂಗ್ ಶೈಲಿಯನ್ನು ತಂದೆಯೊಂದಿಗೆ ಹೋಲಿಸಲು ಆರಂಭಿಸಿದರು. ಯಾವುದೇ ಕ್ರಿಕೆಟಿಗರ ಮಗ ಕ್ರೀಡಾಂಗಣಕ್ಕೆ ಕಾಲಿಟ್ಟಾಗ ಇಂತಹ ಹೋಲಿಕೆಗಳು ಸಾಮಾನ್ಯವಾಗಿದ್ದರೂ, ಇದು ತನ್ನ ಮೇಲೆ ಯಾವುದೇ ಹೆಚ್ಚುವರಿ ಒತ್ತಡ ಹೇರುವುದಿಲ್ಲ ಎಂದು ಯುವ ಆಟಗಾರ ಸ್ಪಷ್ಟಪಡಿಸಿದ್ದಾರೆ.

ನಾನು ಸೆಹ್ವಾಗ್ 2.0 ಅಲ್ಲ, ನನ್ನದೇ ಆದ ವಿಶಿಷ್ಟ ಗುರುತಿದೆ

ತಮ್ಮ ಮೇಲಿನ ಹೋಲಿಕೆಗಳ ಕುರಿತು ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿದ ಆರ್ಯವೀರ್, ತಾನು ತಂದೆಯ ನೆರಳಿನಿಂದ ಹೊರಬರಲು ಇಷ್ಟಪಡುವುದಾಗಿ ತಿಳಿಸಿದ್ದಾರೆ. ನನ್ನ ವೃತ್ತಿಜೀವನದುದ್ದಕ್ಕೂ ತಂದೆಯೊಂದಿಗೆ ಹೋಲಿಕೆ ಮಾಡಲಾಗುತ್ತದೆ ಎಂಬುದನ್ನು ನಾನು ಬಹಳ ಹಿಂದೆಯೇ ಒಪ್ಪಿಕೊಂಡಿದ್ದೇನೆ, ಅದು ಅನಿವಾರ್ಯ. ಆದರೆ, ನಾನು 'ಸೆಹ್ವಾಗ್ 2.0' ಆಗಲು ಇಲ್ಲಿಗೆ ಬಂದಿಲ್ಲ, ಬದಲಿಗೆ 'ಆರ್ಯವೀರ್ ಸೆಹ್ವಾಗ್' ಆಗಲು ಬಯಸುತ್ತೇನೆ" ಎಂದು ಪ್ರಬುದ್ಧತೆಯ ಮಾತುಗಳನ್ನಾಡಿದ್ದಾರೆ.

ತಮ್ಮ ಬ್ಯಾಟಿಂಗ್ ಶೈಲಿಯ ಬಗ್ಗೆ ಮಾತನಾಡಿರುವ ಆರ್ಯವೀರ್, ತಾನೇನು ಕೇವಲ ಒಬ್ಬ ಸ್ಟ್ರೋಕ್ ಪ್ಲೇಯರ್ ಎಂದು ಯಾವುದೇ ಮುದ್ರೆಯನ್ನು ಒತ್ತಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿಯಾಗಿರುವ ಇವರು, ಮೈದಾನದಲ್ಲಿ ವೈಯಕ್ತಿಕ ದಾಖಲೆಗಳಿಗಿಂತ ತಂಡದ ಅಗತ್ಯಕ್ಕೆ ತಕ್ಕಂತೆ, ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವುದೇ ತನ್ನ ಮುಖ್ಯ ಗುರಿ ಎಂದು ತಿಳಿಸಿದ್ದಾರೆ. ಓಮನ್‌ನ ಕಠಿಣ ಪಿಚ್‌ಗಳಲ್ಲಿ ಆರಂಭಿಕ 10-15 ಓವರ್‌ಗಳಲ್ಲಿ ಚೆಂಡು ಸ್ವಿಂಗ್ ಮತ್ತು ಟರ್ನ್ ಆಗುತ್ತಿದ್ದರೂ, ಕ್ರೀಸ್‌ನಲ್ಲಿ ನಿಂತು ರನ್ ಗಳಿಸಿದ್ದು ತಮಗೆ ಅತ್ಯಂತ ತೃಪ್ತಿ ತಂದಿದೆ ಎಂದಿದ್ದಾರೆ.

ಅಂಡರ್-19 ಏಷ್ಯಾ ಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಆರ್ಯವೀರ್ ಸೆಹ್ವಾಗ್ ತನ್ನ ಪ್ರತಿಭೆಯನ್ನು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಿದ್ದಾರೆ. ತಂದೆಯ ಹೆಸರಿನ ದೊಡ್ಡ ಪರಂಪರೆ ಬೆನ್ನಿಗಿದ್ದರೂ, ಅದನ್ನು ಮೆಟ್ಟಿ ನಿಂತು ಸ್ವಂತ ಪರಿಶ್ರಮದಿಂದ ಬೆಳೆಯುವ ಇವರ ಛಲವು ಭಾರತೀಯ ಕ್ರಿಕೆಟ್‌ನ ಭವಿಷ್ಯದ ದಿಕ್ಸೂಚಿಯನ್ನು ಸೂಚಿಸುತ್ತದೆ. ಕೇವಲ ಹೋಲಿಕೆಗಳ ಹಿಂದೆ ಬೀಳದೆ, ತನ್ನದೇ ಆದ ಆಟದ ಶೈಲಿಯ ಮೂಲಕ ಕನ್ನಡಿಗರ ಹಾಗೂ ದೇಶದ ಕ್ರಿಕೆಟ್ ಪ್ರೇಮಿಗಳ ಮನ ಗೆಲ್ಲುವಲ್ಲಿ ಯುವ ಪ್ರತಿಭೆ ಯಶಸ್ವಿಯಾಗಿದ್ದಾರೆ, (ಏಜೆನ್ಸೀಸ್​).