ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ದಿಗ್ಗಜೆ ಹಾಗೂ ಸಾರ್ವಕಾಲಿಕ ಶ್ರೇಷ್ಠ ನಾಯಕಿಯರಲ್ಲಿ ಒಬ್ಬರಾದ ಹರ್ಮನ್‌ಪ್ರೀತ್ ಕೌರ್ ( Harmanpreet Kaur ) ಇಂದು ಅಚ್ಚರಿಯ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಭಾರತೀಯ ಮಹಿಳಾ ತಂಡವನ್ನು ದೀರ್ಘಕಾಲ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ಅವರು, ಇನ್ನು ಮುಂದೆ ಯಾವುದೇ ಮಾದರಿಯಲ್ಲಿ (ಟೆಸ್ಟ್, ಏಕದಿನ ಹಾಗೂ ಟಿ20) ನಾಯಕಿಯಾಗಿ ಮುಂದುವರಿಯುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಒಂದು ಸುವರ್ಣಯುಗಕ್ಕೆ ತೆರೆಬಿದ್ದಂತಾಗಿದೆ. ತಂಡದ ಉಪನಾಯಕಿಯಾಗಿರುವ ಸ್ಮೃತಿ ಮಂಧನಾ ಅವರ ಕೈಗೆ ಮುಂದಿನ ನಾಯಕತ್ವದ ಅಧಿಕಾರ ಹಸ್ತಾಂತರವಾಗಲು ದಾರಿ ಸುಗಮಗೊಂಡಿದೆ. ಆದರೆ, ಹರ್ಮನ್ ಅವರು ದಿಢೀರನೇ ತಮ್ಮ ನಾಯಕತ್ವ ತ್ಯಜಿಸಿದ್ದೇಕೆ ಅನ್ನೋ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.
ತಂಡದ ಪ್ರದರ್ಶನಗಳ ಅವಲೋಕನ ಹಾಗೂ ಮುಂದಿನ ಭವಿಷ್ಯದ ರೂಪುರೇಷೆಗಳನ್ನು ಸಿದ್ಧಪಡಿಸುವ ಸಲುವಾಗಿ ಅಸ್ಸಾಂನ ಗುವಾಹಟಿಯಲ್ಲಿ ಇತ್ತೀಚೆಗಷ್ಟೇ ಬಿಸಿಸಿಐ (BCCI) ವಿಶೇಷ ಪರಾಮರ್ಶೆ ಸಭೆಯನ್ನು ನಡೆಸಿತ್ತು. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಸ್ವತಃ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧನಾ ಹಾಗೂ ಮುಖ್ಯ ಕೋಚ್ ಅಮೋಲ್ ಮುಜುಮ್ದಾರ್ ಉಪಸ್ಥಿತರಿದ್ದರು. ಈ ಸಭೆ ನಡೆದ ಕೆಲವೇ ದಿನಗಳಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು ತಮ್ಮ ನಾಯಕತ್ವದ ಹುದ್ದೆಯನ್ನು ತೊರೆದಿರುವುದು ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಭೆಯಲ್ಲಿ ಹರ್ಮನ್‌ಪ್ರೀತ್ ಅವರನ್ನು ಸ್ವತಃ ನಾಯಕತ್ವದಿಂದ ಕೆಳಗಿಳಿಯುವಂತೆ ಬಿಸಿಸಿಐ ಒತ್ತಡ ಹೇರಿತ್ತೇ ಅಥವಾ ಅವರೇ ಸ್ವಯಂಪ್ರೇರಿತರಾಗಿ ಈ ನಿರ್ಧಾರ ಕೈಗೊಂಡರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ, ಈ ನಿರ್ಧಾರ ಹೊರಬಿದ್ದ ಸಮಯ ಮಾತ್ರ ಇಡೀ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದೆ. 2016ರಲ್ಲಿ ಮೊದಲ ಬಾರಿಗೆ ಭಾರತೀಯ ತಂಡದ ಪೂರ್ಣ ಪ್ರಮಾಣದ ನಾಯಕತ್ವವನ್ನು ವಹಿಸಿಕೊಂಡು ಇತಿಹಾಸ ಸೃಷ್ಟಿಸಿದ ಹರ್ಮನ್‌ಪ್ರೀತ್ ಕೌರ್, ಎಲ್ಲಾ ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿ ತಂಡವನ್ನು ಹಲವು ಐತಿಹಾಸಿಕ ವಿಜಯಗಳತ್ತ ಕೊಂಡೊಯ್ದರು.
ತಮ್ಮ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಹಾಗೂ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಹರ್ಮನ್‌ಪ್ರೀತ್ ಕೌರ್, ಈ ನಿರ್ಧಾರ ತೆಗೆದುಕೊಳ್ಳುವುದು ತನಗೆ ಎಳ್ಳಷ್ಟೂ ಸುಲಭವಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ವರ್ಷಗಳ ನೆನಪುಗಳು, ತೀವ್ರ ಭಾವನೆಗಳು, ಹತ್ತಾರು ತ್ಯಾಗಗಳು ಹಾಗೂ ಜೀವನದುದ್ದಕ್ಕೂ ಮರೆಯಲಾಗದ ಹಲವು ಮೈಲಿಗಲ್ಲುಗಳೊಂದಿಗೆ ತಾನು ಈ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಹರ್ಮನ್‌ಪ್ರೀತ್ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ತಂಡಕ್ಕಾಗಿ ತಾನು ತನ್ನ ರಕ್ತ, ಬೆವರು, ಸಮಯ ಹಾಗೂ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಮುಡಿಪಾಗಿಟ್ಟು ದುಡಿದಿರುವುದಾಗಿ ತಮ್ಮ ಪೋಸ್ಟ್‌ನಲ್ಲಿ ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ.
ತಂಡದ ಹಿತದೃಷ್ಟಿಯಿಂದ ತಾವು ತೆಗೆದುಕೊಂಡ ಕೆಲವು ಕಠಿಣ ನಿರ್ಧಾರಗಳು ಕೆಲವೊಮ್ಮೆ ಎಲ್ಲರಿಗೂ ಅರ್ಥವಾಗದಿರಬಹುದು ಅಥವಾ ವೈಯಕ್ತಿಕವಾಗಿ ತಮಗೆ ದೊಡ್ಡ ಬೆಲೆಯನ್ನು ತೆರಬೇಕಾಗಿ ಬಂದಿರಬಹುದು ಎಂದು ಹರ್ಮನ್‌ಪ್ರೀತ್ ಅಭಿಪ್ರಾಯಪಟ್ಟಿದ್ದಾರೆ. ಆದರೆ, ತಾನು ತೆಗೆದುಕೊಂಡ ಪ್ರತಿಯೊಂದು ತೀರ್ಮಾನದ ಹಿಂದೆ ಕೇವಲ ತಂಡವನ್ನು ಬಲಪಡಿಸುವ ಮತ್ತು ಯುವ ಆಟಗಾರ್ತಿಯರಿಗೆ ಉತ್ತಮ ವೇದಿಕೆ ಕಲ್ಪಿಸುವ ಏಕೈಕ ಪ್ರಾಮಾಣಿಕ ಉದ್ದೇಶವಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ನಾಯಕತ್ವದ ಅವಧಿಯಲ್ಲಿ ಕಂಡ ಅತ್ಯುನ್ನತ ಯಶಸ್ಸುಗಳ ಜತೆಗೆ, ಅತ್ಯಂತ ಕಷ್ಟಕರ ದಿನಗಳು ಹಾಗೂ ಟೀಕೆ-ಟಿಪ್ಪಣಿಗಳನ್ನು ಧೈರ್ಯದಿಂದ ಎದುರಿಸಿದ್ದನ್ನು ಹರ್ಮನ್ ನೆನಪಿಸಿಕೊಂಡಿದ್ದಾರೆ.
ಭಾರತದ ಐತಿಹಾಸಿಕ ಏಕದಿನ ವಿಶ್ವಕಪ್ ವಿಜಯ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ನಾಯಕಿಯಾಗಿ ಮುಂಚೂಣಿಯಲ್ಲಿದ್ದ ಹರ್ಮನ್‌ಪ್ರೀತ್, ತಾನು ತಂಡಕ್ಕೆ ತನ್ನಿಂದಾಗುವ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದೇನೆ ಎಂಬ ಆತ್ಮತೃಪ್ತಿಯೊಂದಿಗೆ ನಾಯಕತ್ವದಿಂದ ಕೆಳಗೆ ಇಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಅತ್ಯಂತ ಪ್ರತಿಭಾನ್ವಿತ ಆಟಗಾರ್ತಿಯರು, ಉತ್ಸಾಹ ಮತ್ತು ಭರವಸೆಯ ಭವಿಷ್ಯದೊಂದಿಗೆ ಅತ್ಯುತ್ತಮ ಹಾದಿಯಲ್ಲಿದೆ ಎಂದು ಹರ್ಮನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾನು ತನ್ನ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂಬ ಸಮಾಧಾನದೊಂದಿಗೆ ನಾಯಕತ್ವದ ಭಾರವನ್ನು ಕೆಳಗಿಳಿಸುತ್ತಿದ್ದೇನೆ ಎಂದಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದ ಭವಿಷ್ಯದ ಕುರಿತು ಕಳೆದ ಕೆಲವು ಸಮಯದಿಂದ ಮಾಜಿ ಕ್ರಿಕೆಟಿಗರು ಹಾಗೂ ತಜ್ಞರ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಲೇ ಇದ್ದವು. ಮೈದಾನದಲ್ಲಿ ಅವರ ತಂತ್ರಗಾರಿಕೆಯ ನಿರ್ಧಾರಗಳು ಹಾಗೂ ಸ್ವತಃ ಬ್ಯಾಟಿಂಗ್‌ನಲ್ಲಿ ಅವರು ಪ್ರದರ್ಶಿಸುತ್ತಿದ್ದ ಕಳಪೆ ಫಾರ್ಮ್‌ನ ಕುರಿತು ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಆದಾಗ್ಯೂ, ನಾಯಕತ್ವದ ಭಾರದಿಂದ ಮುಕ್ತರಾಗಿರುವ ಹರ್ಮನ್‌ಪ್ರೀತ್, ಇನ್ನು ಮುಂದೆ ಕೇವಲ ಒಬ್ಬ ಆಟಗಾರ್ತಿಯಾಗಿ ತನ್ನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದತ್ತ ಮಾತ್ರ ಸಂಪೂರ್ಣ ಗಮನ ಹರಿಸಲು ಈ ನಿರ್ಧಾರವು ಅತ್ಯಂತ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ನಾಯಕತ್ವದ ಹುದ್ದೆಯನ್ನು ತೊರೆದಿದ್ದರೂ ಸಹ, ಹರ್ಮನ್‌ಪ್ರೀತ್ ಕೌರ್ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ನಾಯಕತ್ವದ ಅಧ್ಯಾಯ ಇಂದು ಮುಕ್ತಾಯಗೊಂಡಿರಬಹುದು, ಆದರೆ, ಭಾರತೀಯ ಕ್ರಿಕೆಟ್ ಮೇಲಿರುವ ನನ್ನ ಪ್ರೀತಿ ಮತ್ತು ಒಲವು ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ಹರ್ಮನ್ ದೃಢವಾಗಿ ನುಡಿದಿದ್ದಾರೆ. ತಮಗೆ ಬೆಂಬಲವಾಗಿ ನಿಂತ ಸಹ ಆಟಗಾರ್ತಿಯರು, ತರಬೇತುದಾರರು, ಸಪೋರ್ಟ್ ಸ್ಟಾಫ್, ಬಿಸಿಸಿಐ ಮಂಡಳಿ, ಕುಟುಂಬ ವರ್ಗದವರು ಹಾಗೂ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಹರ್ಮನ್ ಅವರು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ದಿಗ್ಗಜೆ ಹರ್ಮನ್‌ಪ್ರೀತ್ ಕೌರ್ ಅವರು ಮಾರ್ಚ್ 7, 2009 ರಂದು ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ಪದಾರ್ಪಣೆ ಮಾಡಿದರು. ತಮ್ಮ ಸುದೀರ್ಘ ಹಾಗೂ ಯಶಸ್ವಿ ವೃತ್ತಿಜೀವನದಲ್ಲಿ ಇದುವರೆಗೆ ಅವರು ಮೂರೂ ಮಾದರಿಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ20) ಒಟ್ಟು 350ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ, ಅತಿ ಹೆಚ್ಚು ಪಂದ್ಯಗಳನ್ನು ಆಡಿದ ವಿಶ್ವದ ಅಗ್ರಮಾನ್ಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರಲ್ಲಿ ಒಬ್ಬರಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಹೆಮ್ಮೆಯ ಆಟಗಾರ್ತಿಯಾಗಿರುವ ಹರ್ಮನ್‌ಪ್ರೀತ್ ಕೌರ್, ದೇಶದ ಪರ ದೀರ್ಘಕಾಲ ಅತಿ ಹೆಚ್ಚು ಪಂದ್ಯಗಳನ್ನು ಆಡಿ ಯಶಸ್ವಿ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಶತಕ ಸಿಡಿಸಿದ ಮೊಟ್ಟಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, 2017ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 171 ರನ್‌ಗಳ ಸಿಡಿಲಬ್ಬರದ ಇನ್ನಿಂಗ್ಸ್ ಆಡುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್‌ನ ತೂಕವನ್ನು ಹೆಚ್ಚಿಸಿದರು. ಇವರ ದಿಟ್ಟ ನಾಯಕತ್ವದಲ್ಲೇ ಭಾರತೀಯ ತಂಡವು ಐತಿಹಾಸಿಕ ಏಕದಿನ ವಿಶ್ವಕಪ್ ವಿಜಯದ ಸವಿ ಸವಿದಿರುವುದಲ್ಲದೆ, ಏಷ್ಯನ್ ಗೇಮ್ಸ್‌ನಲ್ಲಿ (Asian Games) ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಕೇವಲ ಬ್ಯಾಟರ್ ಆಗಿ ಅಷ್ಟೇ ಅಲ್ಲದೆ, ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟಿಂಗ್, ಉಪಯುಕ್ತ ಬೌಲಿಂಗ್ ಹಾಗೂ ಮೈದಾನದಲ್ಲಿನ ಆಕ್ರಮಣಕಾರಿ ಹೋರಾಟದ ಮನೋಭಾವದಿಂದ ಕೋಟ್ಯಂತರ ಯುವ ಕ್ರಿಕೆಟ್ ಆಟಗಾರ್ತಿಯರಿಗೆ ಹರ್ಮನ್‌ಪ್ರೀತ್ ಕೌರ್ ರೋಲ್ ಮಾಡೆಲ್ ಆಗಿ ನಿಂತಿದ್ದಾರೆ.
* ಏಕದಿನ ಪಂದ್ಯಗಳು (ODIs): 164 ಪಂದ್ಯಗಳಿಂದ 4,541 ರನ್‌ಗಳು (ಸರಾಸರಿ ಸುಮಾರು 37.22, ಗರಿಷ್ಠ ಸ್ಕೋರ್ 171)
* ಅಂತಾರಾಷ್ಟ್ರೀಯ ಟಿ20 ಪಂದ್ಯಗಳು (T20Is): 200ಕ್ಕೂ ಅಧಿಕ ಪಂದ್ಯಗಳಿಂದ ಸುಮಾರು 4,250ಕ್ಕೂ ಹೆಚ್ಚು ರನ್‌ಗಳು (ಗರಿಷ್ಠ ಸ್ಕೋರ್ 103)
* ಟೆಸ್ಟ್ ಪಂದ್ಯಗಳು (Tests): 8 ಪಂದ್ಯಗಳಿಂದ 304 ರನ್‌ಗಳು
ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8,800ಕ್ಕೂ ಅಧಿಕ ರನ್‌ಗಳ್ನು ಕಲೆಹಾಕುವುದರ ಮೂಲಕ ಭಾರತದ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಹರ್ಮನ್‌ಪ್ರೀತ್ ಹೊರಹೊಮ್ಮಿದ್ದಾರೆ. ಈ ಬೃಹತ್ ನಾಯಕತ್ವದ ಬದಲಾವಣೆಯು ಮುಂಬರುವ ಜಾಗತಿಕ ಕ್ರಿಕೆಟ್ ಟೂರ್ನಿಗಳಿಗೆ ಸಜ್ಜಾಗುತ್ತಿರುವ ಭಾರತೀಯ ಮಹಿಳಾ ತಂಡಕ್ಕೆ ಹೊಸತನದ ನಿರೀಕ್ಷೆಯಿದೆ. ಸ್ಮೃತಿ ಮಂಧನಾ ಅವರಂತಹ ಸಮರ್ಥ ಹಾಗೂ ಯುವ ನಾಯಕಿಯ ಕೈಗೆ ಅಧಿಕಾರ ಹಸ್ತಾಂತರವಾಗುವುದರೊಂದಿಗೆ ತಂಡವು ಹೊಸ ಹುಮ್ಮಸ್ಸಿನಿಂದ ಮುನ್ನಡೆಯಲು ಬಾಗಿಲು ತೆರೆದುಕೊಂಡಿದೆ. ರಕ್ತ, ಬೆವರು, ತ್ಯಾಗ ಹಾಗೂ ಅಪಾರ ಹೆಮ್ಮೆಯೊಂದಿಗೆ ತಂಡವನ್ನು ದೀರ್ಘಕಾಲ ಮುನ್ನಡೆಸಿದ ಹರ್ಮನ್‌ಪ್ರೀತ್ ಕೌರ್ ಅವರ ಈ ನಿರ್ಧಾರವು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ಹೊಸ ಹಾಗೂ ಮರೆಯಲಾಗದ ಮೈಲಿಗಲ್ಲಾಗಿ ನಿಲ್ಲಲಿದೆ, (ಏಜೆನ್ಸೀಸ್).