ನವದೆಹಲಿ: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಟೂರ್ನಿಯ ಹೊಸ ಆವೃತ್ತಿಯಿಂದ ಪಾಕಿಸ್ತಾನ ಚಾಂಪಿಯನ್ಸ್ ತಂಡವು ಇದೀಗ ಅಧಿಕೃತವಾಗಿ ಹೊರನಡೆದಿದೆ. ಈ ಕಟು ನಿರ್ಧಾರಕ್ಕೆ ಮೂಲ ಕಾರಣವೇ ಟೀಮ್ ಇಂಡಿಯಾ ಆಟಗಾರರು ಎಂಬುದು ಸದ್ಯ ಕ್ರಿಕೆಟ್ ಪ್ರಿಯರ ಅಚ್ಚರಿಗೆ ಕಾರಣವಾಗಿದೆ.
ಟೀಮ್ ಇಂಡಿಯಾ ಆಟಗಾರರು ನಮಗೆ ಲಿಖಿತ ರೂಪದಲ್ಲಿ ಕ್ಷಮಾಪಣೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದ ಬೇಡಿಕೆಯನ್ನು ಟೂರ್ನಿಯ ಆಯೋಜಕರು ತಿರಸ್ಕರಿಸಿದ್ದೇ ತಡ ಅವಮಾನ ಸಹಿಸಲಾರದ ಪಾಕ್, ನಮ್ಮ ಡಿಮಾಂಡ್ ಈಡೇರಲಿಲ್ಲ ಎಂದಮೇಲೆ ನಾವಿನ್ನು ಟೂರ್ನಿಯ ಭಾಗಿಯಾಗಿರಲು ಇಷ್ಟಪಡುವುದಿಲ್ಲ ಎಂದು ತಿಳಿಸಿ, ಎಕ್ಸಿಟ್ ಆಗಿದೆ ಎಂದು ಕ್ರಿಕೆಟ್ ಮೂಲಗಳು ಸ್ಪಷ್ಟಪಡಿಸಿವೆ.
ಕಳೆದ ವರ್ಷದ WCL ಸೀಸನ್ ವೇಳೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಸಾರ್ವಜನಿಕರ ಭಾವನೆ ಹಾಗೂ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಿಕೆಟಿಗರಾದ ಯುವರಾಜ್ ಸಿಂಗ್, ಸುರೇಶ್ ರೈನಾ, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್ ಅವರನ್ನೊಳಗೊಂಡ ಟೀಮ್ ಇಂಡಿಯಾ, ಪಾಕಿಸ್ತಾನ ವಿರುದ್ಧ ಆಡಲು ಸುತಾರಾಮ್ ಒಪ್ಪಲಿಲ್ಲ. ಇದರ ಪರಿಣಾಮ, ಲೀಗ್ ಹಂತದ ಪಂದ್ಯ ರದ್ದಾಗಿತ್ತು ಹಾಗೂ ಸೆಮಿಫೈನಲ್ ಪಂದ್ಯದಿಂದಲೂ ಭಾರತ ಹಿಂದೆ ಸರಿದಿದ್ದರಿಂದ ಪಾಕಿಸ್ತಾನ ಸುಲಭವಾಗಿ ಫೈನಲ್ ಪ್ರವೇಶಿಸಿತು.
ಈ ಅವಮಾನವನ್ನು ಸಹಿಸಿಕೊಳ್ಳಲಾಗದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು, ಆಟಗಾರರಿಗೆ ಎನ್‌ಒಸಿ (NOC) ನೀಡಿದ್ದೇ ಆದರೂ ಕಳೆದ ಬಾರಿಯ ಘಟನೆಗೆ ಸಂಬಂಧಿಸಿದಂತೆ ಭಾರತ ತಂಡದಿಂದ ನಮಗೆ ಲಿಖಿತ ರೂಪದಲ್ಲಿ ಕ್ಷಮಾಪಣೆ ಕೊಡಿಸುವಂತೆ ಆಯೋಜಕರ ಬಳಿ ಮೊದಲೇ ಕಂಡೀಷನ್ ಹಾಕಿತ್ತು. ಆದರೆ, ಪಾಕಿಸ್ತಾನದ ಈ ಬೇಡಿಕೆಯನ್ನು ಎಡಗಾಲಿನಲ್ಲಿ ಒದೆಯುವ ಮೂಲಕ ಆಯೋಜಕರು ತಿರಸ್ಕರಿಸಿದ್ದಾರೆ. ಇದರಿಂದ ತೀರ ಸಿಡಿಮಿಡಿಗೊಂಡ ಪಿಸಿಬಿ, ನಮ್ಮ ಡಿಮಾಂಡ್ ಈಡೇರಿಸಲು ಆಗದಿದ್ದ ಮೇಲೂ ನಾವಿನ್ನು ಈ ಟೂರ್ನಿಯಲ್ಲಿ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತಾಗಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೊಸ ಪೋಸ್ಟ್ ಕೂಡ ಹಂಚಿಕೊಂಡಿರುವ ಡಬ್ಲ್ಯೂಸಿಎಲ್, ಈ ಬಾರಿ ಒಟ್ಟು ಭಾರತ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಬಾಂಗ್ಲಾದೇಶ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡಗಳು ಮಾತ್ರ ಭಾಗವಹಿಸಲಿವೆ. ಅನಿವಾರ್ಯ ಕಾರಣಗಳಿಂದ ಪಾಕಿಸ್ತಾನ ಲೀಗ್ನಿಂದ ಹೊರಗುಳಿದಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ,(ಏಜೆನ್ಸೀಸ್).