18 ವರ್ಷಗಳ ಸುದೀರ್ಘ ಪಯಣ ಮುಗಿಸಿ ತಂಡದಿಂದ ಹೊರನಡೆದ ಫ್ಲೆಮಿಂಗ್
- ಐಪಿಎಲ್ ಇತಿಹಾಸದಲ್ಲೇ ಬಿಗ್ ಶಾಕ್!
- ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ತಂಡದಿಂದ ಹೊರಕ್ಕೆ
- 18 ವರ್ಷಗಳ ಸುದೀರ್ಘ ಪಯಣ ಮುಗಿಸಿ ತಂಡದಿಂದ ಹೊರನಡೆದ ಫ್ಲೆಮಿಂಗ್
ಚೆನ್ನೈ: ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಕ್ಯಾಂಪ್‌ನಿಂದ ಇಡೀ ಕ್ರಿಕೆಟ್ ಜಗತ್ತೇ ಬೆಚ್ಚಿಬೀಳುವ ಸುದ್ದಿಯೊಂದು ಹೊರಬಿದ್ದಿದೆ.
ಕಳೆದ 18 ವರ್ಷಗಳಿಂದ ತಂಡದ ಬೆನ್ನೆಲುಬಾಗಿ ನಿಂತು, ಎಂ.ಎಸ್. ಧೋನಿ ಜೊತೆ ಸೇರಿ ಸಿಎಸ್‌ಕೆಯನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ (Stephen Fleming Left CSK) ತಂಡದಿಂದ ಅಧಿಕೃತವಾಗಿ ಹೊರನಡೆದಿದ್ದಾರೆ. ಸೋಮವಾರ (ಜು.13) ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಹಾಗೂ ಫ್ಲೆಮಿಂಗ್ ನಡುವೆ ನಡೆದ ಮುಕ್ತ ಮತ್ತು ನೇರ ಚರ್ಚೆಯ ಬಳಿಕ ಈ ಐತಿಹಾಸಿಕ ಬಾಂಧವ್ಯಕ್ಕೆ ಪೂರ್ಣವಿರಾಮ ಬಿದ್ದಿದೆ.
18 ವರ್ಷಗಳ ಸುವರ್ಣ ಯುಗ ಮುಕ್ತಾಯ!
2008ರಲ್ಲಿ ಆಟಗಾರನಾಗಿ ಸಿಎಸ್‌ಕೆ ಸೇರಿದ ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್, 2009ರಲ್ಲಿ ತಂಡದ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಅಲ್ಲಿಂದ ಆರಂಭವಾದ ಇವರ ಕೋಚಿಂಗ್ ಜರ್ನಿ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪವಾಗಿತ್ತು.
ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಸಿಎಸ್‌ಕೆ 5 ಐಪಿಎಲ್ ಟ್ರೋಫಿ, 2 ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿ ಗೆದ್ದುಕೊಂಡಿದ್ದಲ್ಲದೆ, ದಾಖಲೆಯ 12 ಬಾರಿ ಪ್ಲೇಆಫ್ ಹಾಗೂ 10 ಬಾರಿ ಫೈನಲ್ ತಲುಪಿ ಐಪಿಎಲ್ನಲ್ಲಿ ಚಕ್ರ್ರಾಧಿಪತ್ಯವನ್ನು ನಡೆಸಿತ್ತು ಎಂದರೆ ಸುಳ್ಳಲ್ಲ.
ತಂಡದಿಂದ ಹೊರಹೋಗುವಾಗ ಭಾವುಕರಾದ ಫ್ಲೆಮಿಂಗ್, ಕ್ರೀಡಾ ಜಗತ್ತಿನಲ್ಲಿ 18 ವರ್ಷಗಳು ಎಂದರೆ ಒಂದು ಜೀವಿತಾವಧಿಗೆ ಸಮ. ನಾನು ಅತ್ಯಂತ ಕೃತಜ್ಞತೆಯಿಂದ ಇಲ್ಲಿಂದ ಹೊರಡುತ್ತಿದ್ದೇನೆ. ಸಿಎಸ್‌ಕೆ ಜೊತೆಗಿನ ನನ್ನ ಸಮಯ ನನ್ನ ಕೋಚಿಂಗ್ ವೃತ್ತಿಜೀವನದ ಅತ್ಯಂತ ಶ್ರೇಷ್ಠ ಸಮಯವಾಗಿತ್ತು, ನಾವು ಗೆದ್ದ ಮರೆಯಲಾಗದ ಪಂದ್ಯಗಳು, ಎದುರಿಸಿದ ಕಷ್ಟಗಳು ಮತ್ತು ನಿರ್ಮಿಸಿದ ನೆನಪುಗಳು ನನ್ನೊಂದಿಗೆ ಶಾಶ್ವತವಾಗಿ ಇರಲಿವೆ. ಸಿಎಸ್‌ಕೆ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ ಎಂದು ಹೇಳಿದ್ದಾರೆ.
ಫ್ಲೆಮಿಂಗ್ ಔಟ್ ಆಗಿದ್ದಕ್ಕೆ ಅಸಲಿ ಕಾರಣವೇನು?
ಮೇಲ್ನೋಟಕ್ಕೆ ಇದು ಗೌರವಯುತ ವಿದಾಯ ಎನ್ನಲಾಗುತ್ತಿದ್ದರೂ, ಇದರ ಹಿಂದೆ ದೊಡ್ಡದೊಂದು ಬೇಸರದ ಕಥೆಯಿದೆ. ಕಳೆದ ಮೂರು ಐಪಿಎಲ್ ಸೀಸನ್‌ಗಳಲ್ಲಿ ಸಿಎಸ್‌ಕೆ ಒಂದೂ ಬಾರಿಯೂ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆಯದೆ ಭಾರಿ ಮುಖಭಂಗ ಅನುಭವಿಸಿತ್ತು. ತಂಡದ ಈ ಸತತ ಸೋಲು ಮತ್ತು ಕಳಪೆ ಪ್ರದರ್ಶನವೇ ಫ್ಲೆಮಿಂಗ್ ವೃತ್ತಿಜೀವನಕ್ಕೆ ಕುತ್ತು ತಂದಿದೆ ಎಂದು ಹೇಳಲಾಗುತ್ತಿದೆ.
ವಯಸ್ಸಾದ ಆಟಗಾರರ ಮೇಲೆ ಅತಿಯಾಗಿ ಅವಲಂಬಿತವಾಗಿರುವುದು ಇತ್ತೀಚಿನ ದಿನಗಳಲ್ಲಿ ಸಿಎಸ್‌ಕೆ ಕ್ಯಾಂಪ್‌ನಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಮಾಜಿ ನಾಯಕ ಎಂ.ಎಸ್. ಧೋನಿ ಅವರ ಗಾಯದ ಸಮಸ್ಯೆ ಮತ್ತು ಮೈದಾನದಲ್ಲಿ ಅವರ ಅತಿಯಾದ ಹಸ್ತಕ್ಷೇಪ ತಂಡದ ಪ್ರದರ್ಶನದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತಿದೆ ಎಂದು ವಿಮರ್ಶಕರು ಬಹಿರಂಗವಾಗಿಯೇ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ತಂಡಕ್ಕೆ ಹೊಸ ರೂಪ ನೀಡಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದ್ದರಿಂದ ಈ ಬೇರ್ಪಡಿಕೆ ಅನಿವಾರ್ಯವಾಗಿದೆ.
ಸಿಎಸ್‌ಕೆ ‘ಹೃದಯ ಬಡಿತ’ ಸ್ತಬ್ಧ!
ಫ್ರಾಂಚೈಸಿ ಮಾಲೀಕೆ ರೂಪಾ ಗುರುನಾಥ್ ಮಾತನಾಡಿ, ಸುಮಾರು ಎರಡು ದಶಕಗಳಿಂದ ಸ್ಟೀಫನ್ ಫ್ಲೆಮಿಂಗ್ ನಮ್ಮ ತರಬೇತಿ ವ್ಯವಸ್ಥೆಯ ಹೃದಯ ಬಡಿತವಾಗಿದ್ದರು. ನಮ್ಮ ಸಿಎಸ್‌ಕೆ ತಂಡದ ಗುರುತು ಮತ್ತು ಶ್ರೇಷ್ಠತೆಯನ್ನು ರೂಪಿಸಿದ್ದೇ ಅವರು. ಅವರ ಅಚಲ ಬದ್ಧತೆ ಮತ್ತು ನಾಯಕತ್ವಕ್ಕೆ ನಾವು ಸದಾ ಕೃತಜ್ಞರು ಎಂದು ಕೊಂಡಾಡಿದ್ದಾರೆ. ಇತ್ತ ಸಿಎಸ್‌ಕೆ ಎಂಡಿ ಕಾಶಿ ವಿಶ್ವನಾಥನ್ ಸಹ ಫ್ಲೆಮಿಂಗ್ ಅವರ ಸೌಮ್ಯ ಸ್ವಭಾವ ಮತ್ತು ಆಟಗಾರರಿಂದ ಅತ್ಯುತ್ತಮ ಪ್ರದರ್ಶನ ಹೊರತೆಗೆಯುವ ಅದ್ಭುತ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್).