ಟೀಮ್​ ಇಂಡಿಯಾ ಯುವ ಬ್ಯಾಟರ್​ ವೈಭವ್ ಸೂರ್ಯವಂಶಿ ಹಾಗೂ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ 
ಕ್ರಿಕೆಟ್

ವೈಭವ್​​ ಸೂರ್ಯವಂಶಿ ಯಾರಿಂದಲೂ ಆಗದ ಈ ದಾಖಲೆ ಬರೆಯುವುದು ಖಚಿತ: ಸ್ಫೋಟಕ ಭವಿಷ್ಯ ನುಡಿದ ಕ್ರಿಸ್ ಗೇಲ್! Vaibhav Suryavanshi

ವೈಭವ್ ಸೂರ್ಯವಂಶಿ ಅವರ ಇನ್ನಿಂಗ್ಸ್ ಕುರಿತು ಮಾತನಾಡಿರುವ ಕ್ರಿಸ್ ಗೇಲ್, ಆ ಕ್ಷಣದಲ್ಲಿ ತಮಗಾದ ಅಚ್ಚರಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ವೈಭವ್ ಅವರ ಈ ಸ್ಫೋಟಕ ಬ್ಯಾಟಿಂಗ್ ಸುದ್ದಿ ಹೊರಬಿದ್ದ ತಕ್ಷಣ ತಮ್ಮ ಫೋನ್ ನಿರಂತರವಾಗಿ ರಿಂಗಣಿಸಲು ಆರಂಭಿಸಿತು, ಮೊದಲಿಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದೇ ತಮಗೆ ಅರ್ಥವಾಗಲಿಲ್ಲ ಎಂದು ಗೇಲ್ ಹೇಳಿದ್ದಾರೆ.

ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ 'ಯೂನಿವರ್ಸ್ ಬಾಸ್' ಎಂದೇ ಖ್ಯಾತಿಯಾಗಿರುವ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಅವರಿಗೆ ಈಗ ಭಾರತದ 15 ವರ್ಷದ ವಂಡರ್​ ಕಿಡ್​ ವೈಭವ್ ಸೂರ್ಯವಂಶಿ ( Vaibhav Suryavanshi ) ಅವರ ಬ್ಯಾಟಿಂಗ್ ಆರ್ಭಟ ಕಂಡು ಅಚ್ಚರಿಯಾಗಿದೆ. ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ ಸಿಡಿಸಿದ ದಾಖಲೆಯ ದ್ವಿಶತಕ ಹಾಗೂ ಸಿಕ್ಸರ್‌ಗಳ ಸುರಿಮಳೆಗೆ ಮನಸೋತಿರುವ ಕ್ರಿಸ್ ಗೇಲ್, ಈ ಯುವ ಬ್ಯಾಟರ್ ಮುಂದೊಂದು ದಿನ ಏಕದಿನ ಕ್ರಿಕೆಟ್‌ನಲ್ಲಿ ಬರೋಬ್ಬರಿ 300 ರನ್‌ಗಳ ಐತಿಹಾಸಿಕ ಮೈಲಿಗಲ್ಲನ್ನು ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಕತಾರ್​ನ ದೋಹಾದಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಯುಎಇ ವಿರುದ್ಧ ವೈಭವ್ ಆಡಿದ ಅಸಾಧಾರಣ ಇನ್ನಿಂಗ್ಸ್ ಕಂಡು ಸ್ವತಃ ಕ್ರಿಸ್ ಗೇಲ್ ಅವರೇ ನಿಬ್ಬೆರಗಾಗಿದ್ದಾರೆ. ಕೇವಲ 53 ಎಸೆತಗಳಲ್ಲಿ ದ್ವಿಶತಕ ಪೂರೈಸಿ, ಒಂದೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 28 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ವೈಭವ್ ಸಾಹಸ ನನ್ನನ್ನು ವಿಸ್ಮಯಕ್ಕೆ ದೂಡಿದೆ ಎಂದು ಗೇಲ್ ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಹುಡುಗನ ಆಟವನ್ನು ನೋಡುತ್ತಿದ್ದರೆ ಅಂತಾರಾಷ್ಟ್ರೀಯ ಏಕದಿನ (ODI) ಕ್ರಿಕೆಟ್‌ನಲ್ಲಿ ಶೀಘ್ರದಲ್ಲೇ ವೈಯಕ್ತಿಕ 300 ರನ್‌ಗಳ ವಿಶ್ವದಾಖಲೆ ದಾಖಲಾಗುವುದು ಖಚಿತ ಎಂದು ಗೇಲ್ ಭವಿಷ್ಯ ನುಡಿದಿದ್ದಾರೆ.

ವೈಭವ್ ಸೂರ್ಯವಂಶಿ ಅವರ ಇನ್ನಿಂಗ್ಸ್ ಕುರಿತು ಮಾತನಾಡಿರುವ ಕ್ರಿಸ್ ಗೇಲ್, ಆ ಕ್ಷಣದಲ್ಲಿ ತಮಗಾದ ಅಚ್ಚರಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ವೈಭವ್ ಅವರ ಈ ಸ್ಫೋಟಕ ಬ್ಯಾಟಿಂಗ್ ಸುದ್ದಿ ಹೊರಬಿದ್ದ ತಕ್ಷಣ ತಮ್ಮ ಫೋನ್ ನಿರಂತರವಾಗಿ ರಿಂಗಣಿಸಲು ಆರಂಭಿಸಿತು, ಮೊದಲಿಗೆ ಅಲ್ಲಿ ಏನು ನಡೆಯುತ್ತಿದೆ ಎಂಬುದೇ ತಮಗೆ ಅರ್ಥವಾಗಲಿಲ್ಲ ಎಂದು ಗೇಲ್ ಹೇಳಿದ್ದಾರೆ.

ಕೇವಲ 12 ಓವರ್‌ಗಳ ಒಳಗೆ ಬ್ಯಾಟರ್ ಒಬ್ಬ ದ್ವಿಶತಕ ಬಾರಿಸಿದ್ದಾನೆ ಎಂದು ತಿಳಿದಾಗ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಆರಂಭದಲ್ಲಿ ಅದು ಟಿ20 ಪಂದ್ಯವಾಗಿರಬಹುದು ಎಂದು ಭಾವಿಸಿದ್ದೆ, ಆದರೆ ಅದು 50 ಓವರ್‌ಗಳ ಪಂದ್ಯ ಎಂದು ಗೊತ್ತಾದಾಗ ಇನ್ನಷ್ಟು ಶಾಕ್ ಆಯಿತು ಎಂದು ಗೇಲ್ ತಿಳಿಸಿದ್ದಾರೆ. ಇಂತಹ ಸ್ಫೋಟಕ ಬ್ಯಾಟಿಂಗ್ ನೋಡಿದ ಮೇಲೆ ಏಕದಿನ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸುವುದು ಅಸಾಧ್ಯವೇನಲ್ಲ ಎಂದು ಕ್ರಿಸ್​ ಗೇಲ್​ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ವಿಶೇಷ ಛಾಪು ಮೂಡಿಸಿದ್ದ ಕ್ರಿಸ್ ಗೇಲ್, ಇದೀಗ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್​ ಆರ್ಭಟಕ್ಕೆ ಮನಸೋತು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ವೈಭವ್ ಅವರು ಕ್ರಿಕೆಟ್ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ ಎಂದು ಶ್ಲಾಘಿಸಿರುವ ಗೇಲ್, ಈ ಯುವ ಪ್ರತಿಭೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅವಕಾಶಗಳು ಸಿಗಲಿ ಎಂದು ಶುಭ ಹಾರೈಸಿದ್ದಾರೆ. ದಿಗ್ಗಜ ಬೌಲರ್‌ಗಳನ್ನೇ ನಡುಗಿಸುತ್ತಿದ್ದ ಗೇಲ್ ಅವರಂತಹ ದೈತ್ಯ ಆಟಗಾರರೇ ಇಂದು 15 ವರ್ಷದ ಬಾಲಕನ ಬ್ಯಾಟಿಂಗ್ ಪರಾಕ್ರಮಕ್ಕೆ ತಲೆಬಾಗಿರುವುದು ನಿಜಕ್ಕೂ ವಿಶೇಷವಾಗಿದೆ.

ಇನ್ನು ವೈಭವ್ ಸೂರ್ಯವಂಶಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಇನ್ನೂ ಸಾಬೀತುಪಡಿಸಬೇಕಿದೆ. ಇದುವರೆಗೂ ತಮಗೆ ಸಿಕ್ಕಿರುವ ಸೀಮಿತ ಅಂತಾರಾಷ್ಟ್ರೀಯ ಅವಕಾಶಗಳಲ್ಲಿ ವೈಭವ್​ ಅವರು ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲದಿದ್ದರೂ, ದೇಶೀಯ ಹಾಗೂ ಎ-ತಂಡದ ಪಂದ್ಯಗಳಲ್ಲಿ ಅಬ್ಬರಿಸುತ್ತಿದ್ದಾರೆ. ಆದಾಗ್ಯೂ, ಕೇವಲ 15ನೇ ವಯಸ್ಸಿನಲ್ಲಿ ಕ್ರಿಸ್ ಗೇಲ್ ಅವರಂತಹ ವಿಶ್ವ ಕ್ರಿಕೆಟ್‌ ದಿಗ್ಗಜರಿಂದ ಪ್ರಶಂಸೆ ಪಡೆಯುತ್ತಿರುವುದೇ ವೈಭವ್ ಅವರ ಅಸಾಧಾರಣ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.

ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ವೈಭವ್ ಸೂರ್ಯವಂಶಿ ಇದೇ ರೀತಿಯ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರೆ, ಭಾರತೀಯ ಕ್ರಿಕೆಟ್ ಲೋಕಕ್ಕೆ ಮತ್ತೊಬ್ಬ 'ಸೂಪರ್ ಸ್ಟಾರ್' ಸಿಕ್ಕಂತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಕಿರಿಯ ವಯಸ್ಸಿನಲ್ಲೇ ಬೌಲರ್‌ಗಳ ನಿದ್ದೆಗೆಡಿಸುತ್ತಿರುವ ಈ ಪೋರ, ಮುಂದಿನ ದಿನಗಳಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್‌ನ ಹಲವು ಹಳೆಯ ದಾಖಲೆಗಳನ್ನು ಅಳಿಸಿಹಾಕಿ ಹೊಸ ಇತಿಹಾಸ ಬರೆಯಲಿದ್ದಾನೆ ಎಂಬ ನಿರೀಕ್ಷೆ ಕ್ರೀಡಾಭಿಮಾನಿಗಳಲ್ಲಿ ಮೂಡಿದೆ, (ಏಜೆನ್ಸೀಸ್​).