ವೈಭವ್​ IPL​ ಹರಾಜಿಗೆ ಎಂಟ್ರಿ ಕೊಟ್ರೆ ಇಷ್ಟೊಂದು ಹಣ ಸಿಗುತ್ತಾ!? ಸ್ಫೋಟಕ ಭವಿಷ್ಯ ನುಡಿದ ಆಕಾಶ್​ ಚೋಪ್ರಾ! Vaibhav Suryavanshi

ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಯುಎಇ ವಿರುದ್ಧ ವೈಭವ್ ಐತಿಹಾಸಿಕ ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ ಬೆನ್ನಲ್ಲೇ ಆಕಾಶ್ ಚೋಪ್ರಾ ಈ ಮಹತ್ವದ ಹೇಳಿಕೆ ನೀಡಿದ್ದು, ವೈಭವ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vaibhav Suryavanshi
ಭಾರತದ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ
Published on: 

ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಅಚ್ಚರಿಯ ಉತ್ತರ ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಚೋಪ್ರಾ, ಭಾರತದ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ( Vaibhav Suryavanshi ) ಭವಿಷ್ಯದ ಐಪಿಎಲ್ ಹರಾಜು ಅಥವಾ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿಗಳವರೆಗೆ ಮೊತ್ತವನ್ನು ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಯುಎಇ ವಿರುದ್ಧ ವೈಭವ್ ಐತಿಹಾಸಿಕ ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ ಬೆನ್ನಲ್ಲೇ ಆಕಾಶ್ ಚೋಪ್ರಾ ಈ ಮಹತ್ವದ ಹೇಳಿಕೆ ನೀಡಿದ್ದು, ವೈಭವ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶಕ್ತಿಯನ್ನು ಕೊಂಡಾಡಿರುವ ಆಕಾಶ್ ಚೋಪ್ರಾ, ಒಂದು ವೇಳೆ ವೈಭವ್ ಐಪಿಎಲ್ ಹರಾಜಿಗೆ ಬಂದರೆ ಅಥವಾ ಫ್ರಾಂಚೈಸಿಗಳು ಅವರನ್ನು ಉಳಿಸಿಕೊಳ್ಳಲು (Retention) ಮುಂದಾದರೆ, ಅವರೇ ಅತ್ಯಂತ ದುಬಾರಿ ಆಟಗಾರನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ ಆಕಾಶ್​ ಚೋಪ್ರಾ.

Also Read
ಪಾಕಿಸ್ತಾನದಲ್ಲಾಗಿದ್ರೆ 15 ವರ್ಷದ ಆಟಗಾರನನ್ನು...ವೈಭವ್​ ಬಗ್ಗೆ ಅಚ್ಚರಿ ಮಾತುಗಳಾಡಿದ ಪಾಕ್​ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್! Vaibhav Suryavanshi
Vaibhav Suryavanshi

ಜಸ್ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ದಿಗ್ಗಜರು ಆಡುವ ಈ ಬೃಹತ್ ಲೀಗ್‌ನಲ್ಲಿ, ವೈಭವ್ ತಾವು ಆಡುವ ದಿನ ಇಡೀ ಪಂದ್ಯದ ದಿಕ್ಕನ್ನೇ ಬದಲಿಸುವ ತಾಕತ್ತು ಹೊಂದಿದ್ದಾರೆ ಎಂದು ಚೋಪ್ರಾ ಬಣ್ಣಿಸಿದ್ದಾರೆ. ಈ ರೀತಿಯ ಏಕಾಂಗಿ ಆಟವಾಡುವ ಸಾಮರ್ಥ್ಯ ಬೇರೆ ಯಾವ ಆಟಗಾರನಿಗೂ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೈದಾನದಲ್ಲಿ ಇತರ ಆಟಗಾರರು ತಂಡವನ್ನು ಗೆಲುವಿನತ್ತ ಕೊಂಡೊಯ್ದರೆ, ವೈಭವ್ ಸೂರ್ಯವಂಶಿ ಒಬ್ಬಂಟಿಯಾಗಿ ಇಡೀ ಪಂದ್ಯವನ್ನೇ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಅಸಾಮಾನ್ಯ ಪ್ರತಿಭೆ ಹೊಂದಿದ್ದಾರೆ ಎಂದು ಚೋಪ್ರಾ ವಿಶ್ಲೇಷಿಸಿದ್ದಾರೆ. ಹೀಗಾಗಿ, ಅವರು ಐಪಿಎಲ್ ಹರಾಜಿನ ಅಂಗಳಕ್ಕೆ ಇಳಿದರೆ ಖಂಡಿತವಾಗಿಯೂ 40 ಕೋಟಿ ರೂಪಾಯಿ ಬಾಚಿಕೊಳ್ಳುವ ಮೊದಲ ಆಟಗಾರನಾಗಬಹುದು ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ.

ವೈಭವ್ ಸ್ವತಃ ತಮಗೆ ಇಷ್ಟೊಂದು ದೊಡ್ಡ ಮೊತ್ತ ಬೇಕೆಂದು ಕೇಳದಿದ್ದರೂ, ಅವರ ಆಟದ ವೈಖರಿಯೇ ಫ್ರಾಂಚೈಸಿಗಳ ನಡುವೆ ಪೈಪೋಟಿ ಹುಟ್ಟುಹಾಕಿ ಅವರನ್ನು ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರನನ್ನಾಗಿ ಮಾಡಲಿದೆ. ಏಕೆಂದರೆ, 'ಇತಿಹಾಸ ಬದಲಿಸುವುದು' ಮತ್ತು 'ಇತಿಹಾಸ ಸೃಷ್ಟಿಸುವುದು' ಎಂಬ ಪದಗಳು ಅವರ ವೃತ್ತಿಜೀವನದುದ್ದಕ್ಕೂ ಜತೆಯಾಗಿರಲಿವೆ ಎಂದು ಆಕಾಶ್ ಚೋಪ್ರಾ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

Also Read
52 ಎಸೆತ, 28 ಸಿಕ್ಸರ್​, 204 ರನ್​... ವೈಭವ್ ಆರ್ಭಟದ​ ಬಗ್ಗೆ ಅಖ್ತರ್​ ಆಡಿದ ಮಾತುಗಳಿಗೆ ತಲೆಬಾಗಿದ ಕ್ರೀಡಾ ಜಗತ್ತು! Vaibhav Suryavanshi
Vaibhav Suryavanshi

ಪ್ರಸ್ತುತ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ಪರ ಆಡುತ್ತಿದ್ದು, ಸದ್ಯಕ್ಕೆ ಅವರಿಗೆ 1.10 ಕೋಟಿ ರೂಪಾಯಿ ವೇತನ ನೀಡಲಾಗುತ್ತಿದೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರ ಹೆಸರಿನಲ್ಲಿದ್ದು, ಲಖನೌ ಸೂಪರ್ ಜೈಂಟ್ಸ್ ತಂಡವು 27.5 ಕೋಟಿ ರೂಪಾಯಿ ನೀಡಿ ಪಂತ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ, ವೈಭವ್ ಅವರ ಇತ್ತೀಚಿನ ಸ್ಫೋಟಕ ಫಾರ್ಮ್ ಗಮನಿಸಿದರೆ, ಮುಂಬರುವ ದಿನಗಳಲ್ಲಿ ಪಂತ್ ಅವರ ಈ ದಾಖಲೆಯೂ ಸುಲಭವಾಗಿ ಮುರಿದುಬೀಳುವ ಲಕ್ಷಣಗಳು ಗೋಚರಿಸುತ್ತಿವೆ, (ಏಜೆನ್ಸೀಸ್​).