

ನವದೆಹಲಿ: ಕತಾರ್ನ ದೋಹಾದಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ 2026 ಟೂರ್ನಿಯಲ್ಲಿ ಕೇವಲ 52 ಎಸೆತಗಳಲ್ಲಿ ಐತಿಹಾಸಿಕ ದ್ವಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ( Vaibhav Suryavanshi ) ಅವರ ಅಮೋಘ ಆಟಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಮನಸೋತಿದ್ದಾರೆ. ಈ ಯುವ ಪ್ರತಿಭೆಯ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಭಾರತೀಯ ಕ್ರಿಕೆಟ್ ವ್ಯವಸ್ಥೆಯ ದೂರದೃಷ್ಟಿಯನ್ನು ಕೊಂಡಾಡುವ ಮೂಲಕ ತಮ್ಮದೇ ದೇಶದ ಕ್ರಿಕೆಟ್ ಮಂಡಳಿಯ ಕಾರ್ಯವೈಖರಿಗೆ ಕನ್ನಡಿ ಹಿಡಿದಿದ್ದಾರೆ.
ಯೂಟ್ಯೂಬ್ ಕಾರ್ಯಕ್ರಮ 'ದಿ ಗೇಮ್‌ಪ್ಲಾನ್'ನಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್, ವೈಭವ್ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇತರ ಆಟಗಾರರು 25 ಅಥವಾ 30ನೇ ವಯಸ್ಸಿನಲ್ಲಿ ಗಳಿಸುವ ಖ್ಯಾತಿ ಮತ್ತು ಸಾಧನೆಯನ್ನು ಈ ಹುಡುಗ ಕೇವಲ 15ನೇ ವಯಸ್ಸಿನಲ್ಲಿ ಸಾಧಿಸಿದ್ದಾನೆ. ಆತನ ಪ್ರಬುದ್ಧತೆ ಮತ್ತು ಆಟದ ಶೈಲಿ ನಿಜಕ್ಕೂ ಅದ್ಭುತ" ಎಂದು ಅಕ್ಮಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ವ್ಯವಸ್ಥೆಯ ದೂರದೃಷ್ಟಿಯನ್ನು ಕೊಂಡಾಡಿದ ಕಮ್ರಾನ್ ಅಕ್ಮಲ್, ಪಾಕಿಸ್ತಾನದ ಕ್ರಿಕೆಟ್ ವ್ಯವಸ್ಥೆಯೊಂದಿಗೆ ಹೋಲಿಕೆ ಮಾಡಿದ್ದಾರೆ. "ಭಾರತದಲ್ಲಿ ಅಂಡರ್-15 ಹಂತದ ಪ್ರತಿಭಾವಂತ ಆಟಗಾರನನ್ನು ಗುರುತಿಸಿ, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಆಡಲು ಅವಕಾಶ ನೀಡಿ ಬೆಳೆಸುತ್ತಿದ್ದಾರೆ. ಆದರೆ ನಮ್ಮ ಪಾಕಿಸ್ತಾನದಲ್ಲಾಗಿದ್ದರೆ 15 ವರ್ಷದ ಆಟಗಾರನನ್ನು ಅಂಡರ್-15 ಹಂತದಿಂದ ಹೊರಗೆ ಬರಲೂ ಬಿಡುತ್ತಿರಲಿಲ್ಲ ತಮ್ಮದೇ ದೇಶದ ಕ್ರಿಕೆಟ್ ವ್ಯವಸ್ಥೆಯನ್ನು ಅಕ್ಮಲ್ ಅವರು ಟೀಕಿಸಿದ್ದಾರೆ.
ಇಂತಹ ವಯಸ್ಸಿನಲ್ಲಿ ಆತ ಯಾವ ರೀತಿಯ ಕ್ರಿಕೆಟ್ ಆಡಬೇಕು ಎಂಬುದರ ಬಗ್ಗೆ ಭಾರತೀಯ ಆಯ್ಕೆಗಾರರ ಯೋಜನೆ ಮತ್ತು ಮನಸ್ಥಿತಿ ಹೇಗಿದೆ ನೋಡಿ. ಒಂದೇ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್ ಮತ್ತು 7 ಬೌಂಡರಿ ಬಾರಿಸುವುದು ತಮಾಷೆಯ ಮಾತಲ್ಲ, ಆತನನ್ನು ಎಷ್ಟು ಹೊಗಳಿದರೂ ಸಾಲದು ಎಂದು ಕಮ್ರಾನ್ ಅಕ್ಮಲ್ ಅವರು ವೈಭವ್ ಸೂರ್ಯವಂಶಿ ಅವರನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.
ಅಂದಹಾಗೆ, ಮಂಗಳವಾರ ಕತಾರ್ನ ದೋಹಾದಲ್ಲಿ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಒಂದೇ ಇನ್ನಿಂಗ್ಸ್‌ನಲ್ಲಿ ಲಿಸ್ಟ್-ಎ ಕ್ರಿಕೆಟ್‌ನ ಅತಿ ವೇಗದ ಶತಕ ಮತ್ತು ದ್ವಿಶತಕದ ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು. 2023ರಲ್ಲಿ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬಾರಿಸಿದ್ದ 29 ಎಸೆತಗಳ ವೇಗದ ಶತಕದ ದಾಖಲೆಯನ್ನು ಕೇವಲ 28 ಎಸೆತಗಳಲ್ಲಿ ಮುರಿದ ವೈಭವ್, ಬಳಿಕ 2024ರಲ್ಲಿ ಚಾಡ್ ಬೋವ್ಸ್ ನಿರ್ಮಿಸಿದ್ದ 103 ಎಸೆತಗಳ ವೇಗದ ದ್ವಿಶತಕದ ದಾಖಲೆಯನ್ನು ಕೇವಲ 52 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಧೂಳೀಪಟ ಮಾಡಿದರು. ಯುಎಇ ನೀಡಿದ್ದ 250 ರನ್‌ಗಳ ಗುರಿಯನ್ನು ಭಾರತ-ಎ ತಂಡ ಕೇವಲ 14.3 ಓವರ್‌ಗಳಲ್ಲಿ ತಲುಪುವಲ್ಲಿ ವೈಭವ್ ಅವರ 28 ಸಿಕ್ಸರ್ ಮತ್ತು 7 ಬೌಂಡರಿಗಳ ಅಬ್ಬರದ ಇನ್ನಿಂಗ್ಸ್ ಪ್ರಮುಖ ಪಾತ್ರ ವಹಿಸಿತು, (ಏಜೆನ್ಸೀಸ್).