ಕ್ರಿಕೆಟ್

ವಿರಾಟ್​​ಗೆ 430...ನಂಗೆ 220 ಸಾಕು!...ಕೊಹ್ಲಿಯನ್ನು ಹಿಂದಿಕ್ಕಿದ ಅಭಿಷೇಕ್!...ಶರ್ಮಾ-ಸೂರ್ಯವಂಶಿ ಜೋಡಿಯಿಂದ ದಾಖಲೆಗಳ ಮಹಾಪೂರ | NZvIND

NZvIND: ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್‌ಚರ್ಚ್‌ನಲ್ಲಿ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಅಕ್ಷರಶಃ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 199 ರನ್‌ಗಳ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ ಆರಂಭಿಕ ಜೋಡಿ ಮೊದಲ ಓವರ್‌ನಿಂದಲೇ ಎದುರಾಳಿ ಬೌಲರ್‌ಗಳ ಬೆವರಿಳಿಸಿತು.

ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಭಾರತ ತಂಡವು ಕೇವಲ 2.2 ಓವರ್‌ಗಳಲ್ಲಿ ತಮ್ಮ ತಂಡದ ಅರ್ಧಶತಕವನ್ನು (Team 50) ಪೂರ್ಣಗೊಳಿಸುವ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಟೀಮ್ ಫಿಫ್ಟಿ ದಾಖಲೆಯನ್ನು ಸರಿಗಟ್ಟಿತು.

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ವೇಗದ ಟೀಮ್ 50ಗಳು (ಓವರ್‌ಗಳ ಪ್ರಕಾರ)

  • 2.2 ಓವರ್‌ಗಳು - ಪಪುವಾ ನ್ಯೂಗಿನಿಯಾ vs ವನುವಾಟು (ಪೋರ್ಟ್ ಮೊರೆಸ್ಬಿ, 2019)

  • 2.2 ಓವರ್‌ಗಳು - ರೊಮೇನಿಯಾ vs ಸೆರ್ಬಿಯಾ (ಸೋಫಿಯಾ, 2021)

  • 2.2 ಓವರ್‌ಗಳು - ಭಾರತ vs ನ್ಯೂಜಿಲೆಂಡ್ (ಕ್ರೈಸ್ಟ್‌ಚರ್ಚ್, 2026)

  • 2.3 ಓವರ್‌ಗಳು - ಫಿಲಿಪ್ಪೀನ್ಸ್ vs ಇಂಡೋನೇಷಿಯಾ (ಬಾಲಿ, 2023)

  • 2.4 ಓವರ್‌ಗಳು - ನ್ಯೂಜಿಲೆಂಡ್ vs ಸ್ಕಾಟ್ಲ್ಯಾಂಡ್ (ದಿ ಓವಲ್, 2009)

  • 2.4 ಓವರ್‌ಗಳು - ನ್ಯೂಜಿಲೆಂಡ್ vs ಇಂಗ್ಲೆಂಡ್ (ಆಕ್ಲೆಂಡ್, 2019)

  • 2.4 ಓವರ್‌ಗಳು - ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (ಸೆಂಚುರಿಯನ್, 2023)

ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ಭಾರತ ದಾಖಲಿಸಿರುವ ಈ ತಂಡದ ಅರ್ಧಶತಕವೇ ಅತ್ಯಂತ ವೇಗದ ದಾಖಲೆಯಾಗಿದೆ. ಒಟ್ಟಾರೆಯಾಗಿ ಎಲ್ಲಾ ಟಿ20 ಅಂತಾರಾಷ್ಟ್ರೀಯ ರಾಷ್ಟ್ರಗಳನ್ನು ಪರಿಗಣಿಸಿದರೆ, ಪಪುವಾ ನ್ಯೂಗಿನಿಯಾ (ವನುವಾಟು ವಿರುದ್ಧ) ಮತ್ತು ರೊಮೇನಿಯಾ (ಸೆರ್ಬಿಯಾ ವಿರುದ್ಧ) ತಂಡಗಳ ಹೆಸರಿನಲ್ಲಿದ್ದ ಜಂಟಿ ವಿಶ್ವ ದಾಖಲೆಯನ್ನು ಭಾರತ ಈಗ ಸರಿಗಟ್ಟಿದೆ.

ವೇಗದ ಟೀಮ್ ಶತಕ ಮತ್ತು ಪವರ್‌ಪ್ಲೇ ದಾಖಲೆ ಧೂಳೀಪಟ

ಕೇವಲ ಅರ್ಧಶತಕಕ್ಕೆ ಮಾತ್ರ ಸೀಮಿತವಾಗದೆ, ಇನ್ನಿಂಗ್ಸ್ ಮುಂದುವರಿಸಿದ ಭಾರತ ತಂಡವು ಕೇವಲ 5 ಓವರ್‌ಗಳಲ್ಲಿ (30 ಎಸೆತಗಳಲ್ಲಿ) ತಂಡದ 100 ರನ್‌ಗಳ ಗಡಿ ದಾಟುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿತು. ಈ ಹಿಂದೆ ರೊಮೇನಿಯಾ ತಂಡವು ಸೆರ್ಬಿಯಾ ವಿರುದ್ಧ 32 ಎಸೆತಗಳಲ್ಲಿ (5.2 ಓವರ್‌ಗಳಲ್ಲಿ) 100 ರನ್ ಗಳಿಸಿದ್ದೇ ದಾಖಲೆಯಾಗಿತ್ತು. ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ವಿರುದ್ಧ 5.3 ಓವರ್‌ಗಳಲ್ಲಿ ಶತಕ ದಾಖಲಿಸಿದ್ದೇ ಹಿಂದಿನ ದಾಖಲೆಯಾಗಿತ್ತು.

  • 5.0 ಓವರ್‌ಗಳು - ಭಾರತ vs ನ್ಯೂಜಿಲೆಂಡ್ (ಕ್ರೈಸ್ಟ್‌ಚರ್ಚ್, 2026)

  • 5.2 ಓವರ್‌ಗಳು - ರೊಮೇನಿಯಾ vs ಸೆರ್ಬಿಯಾ (ಸೋಫಿಯಾ, 2021)

  • 5.3 ಓವರ್‌ಗಳು - ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (ಸೆಂಚುರಿಯನ್, 2023)

  • 5.3 ಓವರ್‌ಗಳು - ಆಸ್ಟ್ರೇಲಿಯಾ vs ಸ್ಕಾಟ್ಲ್ಯಾಂಡ್ (ಎಡಿನ್‌ಬರ್ಗ್, 2024)

  • 5.5 ಓವರ್‌ಗಳು - ಜಿಂಬಾಬ್ವೆ vs ಗ್ಯಾಂಬಿಯಾ (ನೈರೋಬಿ, 2024)

  • 5.5 ಓವರ್‌ಗಳು - ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ (ಓಲ್ಡ್ ಟ್ರಾಫರ್ಡ್, 2025)

ಅಲ್ಲದೆ, ಪವರ್‌ಪ್ಲೇನ ಮೊದಲ 6 ಓವರ್‌ಗಳಲ್ಲಿ ಭಾರತ ತಂಡವು ವಿಕೆಟ್ ನಷ್ಟವಿಲ್ಲದೆ ಬರೋಬ್ಬರಿ 118 ರನ್‌ಗಳನ್ನು ಕಲೆಹಾಕುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಪವರ್‌ಪ್ಲೇ ಸ್ಕೋರ್‌ನ ವಿಶ್ವ ದಾಖಲೆಯನ್ನು ನಿರ್ಮಿಸಿತು. ಈ ಹಿಂದೆ ರೊಮೇನಿಯಾ ತಂಡವು 116/0 ಗಳಿಸಿದ್ದೇ ಇದುವರೆಗಿನ ಗರಿಷ್ಠ ದಾಖಲೆಯಾಗಿತ್ತು. ಅಂತಿಮವಾಗಿ ಅಭಿಷೇಕ್ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿ ವಿಕೆಟ್ ಒಪ್ಪಿಸಿದರೆ, ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 45 ರನ್ ಸಿಡಿಸಿ ಗಮನ ಸೆಳೆದರು.

ಕೊಹ್ಲಿ ಮತ್ತು ವಾರ್ನರ್ ದಾಖಲೆ ಮುರಿದ ಅಭಿಷೇಕ್ ಶರ್ಮಾ!

ಅಭಿಷೇಕ್ ಶರ್ಮಾರ ಈ ಸ್ಫೋಟಕ ಶತಕವು ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅವರ ಒಟ್ಟು ಶತಕಗಳ ಸಂಖ್ಯೆಯನ್ನು 11ಕ್ಕೆ ಏರಿಸಿದೆ. ಈ ಮೂಲಕ ಅವರು ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ (ತಲಾ 10 ಶತಕಗಳು) ಅವರನ್ನು ಹಿಂದಿಕ್ಕಿದ್ದಾರೆ. ಸಕ್ರಿಯ ಆಟಗಾರರ ಪಟ್ಟಿಯಲ್ಲಿ ಬಾಬರ್ ಅಜಮ್ (13 ಶತಕ) ನಂತರದ ಸ್ಥಾನದಲ್ಲಿ ಅಭಿಷೇಕ್ ಶರ್ಮಾ (11 ಶತಕ) ಇದ್ದಾರೆ. ಒಟ್ಟಾರೆ ಪಟ್ಟಿಯಲ್ಲಿ ಕ್ರಿಸ್ ಗೇಲ್ (22 ಶತಕ) ಅಗ್ರಸ್ಥಾನದಲ್ಲಿದ್ದಾರೆ(ಏಜೆನ್ಸೀಸ್)

ಶತಕ ಸಾಧನೆಯಲ್ಲಿ ಇವರೇ ಮುಂದು (ಟಿ20)

  1. 22 ಶತಕಗಳು - ಕ್ರಿಸ್ ಗೇಲ್ (463 ಇನ್ನಿಂಗ್ಸ್)

  2. 13 ಶತಕಗಳು - ಬಾಬರ್ ಅಜಮ್ (359 ಇನ್ನಿಂಗ್ಸ್)

  3. 11 ಶತಕಗಳು - ಅಭಿಷೇಕ್ ಶರ್ಮಾ (220 ಇನ್ನಿಂಗ್ಸ್)

  4. 10 ಶತಕಗಳು - ಕ್ವಿಂಟನ್ ಡಿ ಕಾಕ್ (463 ಇನ್ನಿಂಗ್ಸ್)

  5. 10 ಶತಕಗಳು - ವಿರಾಟ್ ಕೊಹ್ಲಿ (430 ಇನ್ನಿಂಗ್ಸ್)

  6. 10 ಶತಕಗಳು - ಡೇವಿಡ್ ವಾರ್ನರ್ ( 439 ಇನ್ನಿಂಗ್ಸ್)