ಐಪಿಎಲ್​ಗೂ ಎಂ.ಎಸ್​. ಧೋನಿ ವಿದಾಯ 
ಕ್ರಿಕೆಟ್

ಐಪಿಎಲ್ ವೃತ್ತಿಜೀವನದಲ್ಲಿ ಕೋಟಿ ಕೋಟಿ ಸಂಪಾದಿಸಿದ ಧೋನಿ: 2008ರಿಂದ ಇಲ್ಲಿಯವರೆಗೆ ಮಹಿಗೆ ಸಿಕ್ಕ ವೇತನವೆಷ್ಟು? MS Dhoni

ಆಟಗಾರನಾಗಿ ಐಪಿಎಲ್​ಗೆ ನಿವೃತ್ತಿ ಘೋಷಿಸಿರುವ ಧೋನಿ ಮುಂಬರುವ ಐಪಿಎಲ್ 2027ರ ಆವೃತ್ತಿಯಲ್ಲಿ ಸಿಎಸ್​ಕೆ ತಂಡದ ನೂತನ ಮೆಂಟರ್ (Mentor) ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ನವದೆಹಲಿ: ಟೀಮ್​ ಇಂಡಿಯಾದಲ್ಲಿ ಮಾತ್ರವಲ್ಲ ಐಪಿಎಲ್ ಇತಿಹಾಸದಲ್ಲೂ ಅತ್ಯಂತ ಯಶಸ್ವಿ ಹಾಗೂ ಲೆಜೆಂಡರಿ ಆಟಗಾರರಾಗಿ ಹೊರಹೊಮ್ಮಿರುವ ಎಂ.ಎಸ್. ಧೋನಿ ( MS Dhoni ) ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಐಪಿಎಲ್ ವೇತನದ ಮೂಲಕವೇ ಕೋಟ್ಯಂತರ ರೂಪಾಯಿಗಳನ್ನು ಸಂಪಾದನೆ ಮಾಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ( CSK ) ತಂಡದ ಅಭಿಮಾನಿಗಳ ಪಾಲಿಗೆ "ತಲಾ" ಎಂದೇ ಪ್ರೀತಿ ಪಾತ್ರರಾಗಿರುವ ಧೋನಿ 2008ರ ಪ್ರಥಮ ಐಪಿಎಲ್ ಹರಾಜಿನಿಂದ ಹಿಡಿದು ಇಲ್ಲಿಯವರೆಗೆ ಪಡೆದಿರುವ ವರ್ಷವಾರು ವೇತನ ವಿವರಗಳು ಮತ್ತು ಅವರ ಒಟ್ಟು ಸಂಪಾದನೆಯ ಸಂಪೂರ್ಣ ಚಿತ್ರಣ ಇಲ್ಲಿದೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರರಾಗಿ 2008ರಲ್ಲಿ ತಮ್ಮ ಪಯಣ ಆರಂಭಿಸಿದ ಧೋನಿ, ವೃತ್ತಿಜೀವನದ ವಿವಿಧ ಹಂತಗಳಲ್ಲಿ ಎಷ್ಟು ವೇತನ ಪಡೆದಿದ್ದಾರೆ ಎಂಬ ವಿವರ ಇಲ್ಲಿದೆ.

* 2008–2010: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದೊಂದಿಗೆ ಆರಂಭಿಕ ಮೂರು ಸೀಸನ್‌ಗಳಲ್ಲಿ ಪ್ರತಿ ವರ್ಷಕ್ಕೆ ₹6 ಕೋಟಿ ಸಂಭಾವನೆ ಪಡೆದರು. ಇವರ ನಾಯಕತ್ವದಲ್ಲೇ ಸಿಎಸ್‌ಕೆ ತಂಡವು 2010ರಲ್ಲಿ ತನ್ನ ಮೊದಲ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.

* 2011–2012: 2011ರ ಸೀಸನ್‌ಗೂ ಮುನ್ನ ಧೋನಿ ಅವರ ವೇತನದಲ್ಲಿ ₹2.28 ಕೋಟಿ ಹೆಚ್ಚಳವಾಗಿ, ವಾರ್ಷಿಕ ಸಂಭಾವನೆಯು ₹8.28 ಕೋಟಿಗೆ ತಲುಪಿತು. ಈ ಅವಧಿಯಲ್ಲೂ ಸಿಎಸ್‌ಕೆ ಸತತವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿತು.

* 2013–2017: 2013ರಲ್ಲಿ ಧೋನಿ ಅವರ ವೇತನವು ಭರ್ಜರಿ ಜಿಗಿತಗೊಂಡು ₹12.5 ಕೋಟಿಯಾಯಿತು. ಸಿಎಸ್‌ಕೆ ತಂಡಕ್ಕೆ ಎರಡು ವರ್ಷಗಳ ನಿಷೇಧವಿದ್ದ 2016 ಮತ್ತು 2017ರ ಅವಧಿಯಲ್ಲಿ ಧೋನಿ ಅವರು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದರು.

* 2018–2021: ಸಿಎಸ್‌ಕೆ ತಂಡದ ಕಂಬ್ಯಾಕ್ ಸೀಸನ್‌ನಿಂದ (2018) ಆರಂಭಗೊಂಡು 2021ರವರೆಗೆ ಫ್ರಾಂಚೈಸಿಯು ಧೋನಿಯನ್ನು ಪ್ರತಿ ವರ್ಷಕ್ಕೆ ₹15 ಕೋಟಿ ನೀಡಿ ಉಳಿಸಿಕೊಂಡಿತು. ಈ ಅವಧಿಯಲ್ಲಿ ಸಿಎಸ್‌ಕೆ 2021ರಲ್ಲಿ ತನ್ನ 4ನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು.

* 2022–2024: 2022ರ ಸೀಸನ್‌ನಿಂದ ಧೋನಿ ಅವರ ರಿಟೆನ್ಷನ್ ಮೊತ್ತವು ₹12 ಕೋಟಿಗೆ ಇಳಿಕೆಯಾಯಿತು. ಆದರೂ ಅವರ ನಾಯಕತ್ವದಲ್ಲಿ ತಂಡವು 2023ರಲ್ಲಿ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಯಿತು.

* 2025–2026: ತಮ್ಮ ಆಟಗಾರನ ವೃತ್ತಿಜೀವನದ ಅಂತಿಮ ಹಂತದಲ್ಲಿ, ಪರಿಷ್ಕೃತ ನಿಯಮಗಳನ್ವಯ ಧೋನಿ ಅವರು ಅನ್-ಕ್ಯಾಪ್ಡ್ ಆಟಗಾರರಾಗಿ ಪ್ರತಿ ಸೀಸನ್‌ಗೆ 4 ಕೋಟಿ ವೇತನ ಪಡೆದರು.

ಈ ಎಲ್ಲಾ ವರ್ಷಗಳ ಒಟ್ಟು ಗಳಿಕೆಯನ್ನು ಒಟ್ಟುಗೂಡಿಸಿದರೆ, ಐಪಿಎಲ್ ಮೂಲಕ ಎಂ.ಎಸ್. ಧೋನಿ ಅವರ ಅಂದಾಜು ಒಟ್ಟು ವರಮಾನವು ಬರೋಬ್ಬರಿ 201.06 ಕೋಟಿಯನ್ನು ತಲುಪಿದೆ.

ಐಪಿಎಲ್​ಗೆ ನಿವೃತ್ತಿ

ಆಟಗಾರನಾಗಿ ಐಪಿಎಲ್​ಗೆ ನಿವೃತ್ತಿ ಘೋಷಿಸಿರುವ ಧೋನಿ ಮುಂಬರುವ ಐಪಿಎಲ್ 2027ರ ಆವೃತ್ತಿಯಲ್ಲಿ ಸಿಎಸ್​ಕೆ ತಂಡದ ನೂತನ ಮೆಂಟರ್ (Mentor) ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಕುರಿತು ಸಿಎಸ್​ಕೆ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ. ದಶಕಗಳ ಕಾಲ ತಂಡವನ್ನು ಮುನ್ನಡೆಸಿ ಬಹು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿರುವ ಧೋನಿ, ಇನ್ನು ಮುಂದೆ ಮಾರ್ಗದರ್ಶಕರಾಗಿ ಸಿಎಸ್‌ಕೆ ಜೊತೆ ಹೆಜ್ಜೆ ಹಾಕಲಿದ್ದಾರೆ.

ಸಿಎಸ್‌ಕೆ ಫ್ರಾಂಚೈಸಿಯ ಮಾಲೀಕ ಎನ್. ಶ್ರೀನಿವಾಸನ್ ಅವರು ಧೋನಿಯ ಹೊಸ ಜವಾಬ್ದಾರಿಯ ಕುರಿತು ಮಾತನಾಡಿ, ತಂಡದೊಂದಿಗೆ ಧೋನಿ ಹೊಂದಿರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿದ್ದಾರೆ. "ಎಂ.ಎಸ್. ಧೋನಿ ಇಲ್ಲದೆ ಸಿಎಸ್‌ಕೆ ಇಲ್ಲ. ಕಳೆದ ಸುಮಾರು ಎರಡು ದಶಕಗಳಿಂದ ನಾವು ಏಳು-ಬೀಳುಗಳಲ್ಲಿ ಜತೆಯಾಗಿ ಬೆಳೆದಿದ್ದೇವೆ. ನಮ್ಮ ಸಂಬಂಧ ಗಟ್ಟಿಯಾಗಿರಲು ಕಾರಣ ನಾವು ಪರಸ್ಪರರ ಉದ್ದೇಶಗಳನ್ನು ಪ್ರಶ್ನಿಸುವುದಿಲ್ಲ" ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.

2008ರಲ್ಲಿ ನಾನೇ ಧೋನಿಯನ್ನು ತಂಡಕ್ಕೆ ಕರೆತಂದಿದ್ದು ತಮ್ಮ ಜೀವನದ ಅತ್ಯುತ್ತಮ ನಿರ್ಧಾರ ಎಂದಿರುವ ಶ್ರೀನಿವಾಸನ್​ ಅವರು, ಧೋನಿ ಕೇವಲ ಸಾಧನೆಗಳಿಗಾಗಿ ಮಾತ್ರವಲ್ಲದೆ ಅವರು ಒಬ್ಬ ಉತ್ತಮ ವ್ಯಕ್ತಿಯಾಗಿರುವುದರಿಂದ ತಂಡದ ನಿಜವಾದ ಗುರುತಾಗಿದ್ದಾರೆ ಎಂದಿದ್ದಾರೆ. ಐಪಿಎಲ್ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೃದಯಭಾಗವಾಗಿರುವ ಧೋನಿ, ಹಳದಿ ಜೆರ್ಸಿಯ ಸಮಾನಾರ್ಥಕವಾಗಿ ರೂಪುಗೊಂಡಿದ್ದಾರೆ. ನಾಯಕನಾಗಿ ತಂಡವನ್ನು ಹಲವು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ಧೋನಿ ಅವರು, ಇದೀಗ ಆಟಗಾರನ ಪಾತ್ರದಿಂದ ನಿವೃತ್ತರಾಗಿ ಮೆಂಟರ್ ಹುದ್ದೆಯನ್ನು ಅಲಂಕರಿಸುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಧೋನಿ ಯಾವಾಗಲೂ ನಮ್ಮ ತಂಡದ ಅಸ್ಮಿತೆಯ ಭಾಗವಾಗಿರುತ್ತಾರೆ ಮತ್ತು ಇದು ಎಂದಿಗೂ ಅವರ ಸ್ವಂತ ಮನೆಯಾಗಿರುತ್ತದೆ ಎಂದು ಎನ್. ಶ್ರೀನಿವಾಸನ್ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದೊಂದಿಗೆ 17 ಸೀಸನ್‌ಗಳ ಸುದೀರ್ಘ ಪಯಣ ನಡೆಸಿರುವ ಮಹೇಂದ್ರ ಸಿಂಗ್ ಧೋನಿ, 2008ರಲ್ಲಿ ಫ್ರಾಂಚೈಸಿಗೆ ಸೇರಿದಾಗಿನಿಂದ 5 ಐಪಿಎಲ್ ಪ್ರಶಸ್ತಿಗಳು ಹಾಗೂ 2 ಚಾಂಪಿಯನ್ಸ್ ಲೀಗ್ ಕಿರೀಟಗಳನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸಿಎಸ್‌ಕೆ ತಂಡಕ್ಕೆ ನಿಷೇಧವಿದ್ದ 2016 ಮತ್ತು 2017ರ ಅವಧಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಧೋನಿ, ತಮ್ಮ ಅದ್ಭುತ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 5439 ರನ್‌ಗಳನ್ನು ಕಲೆಹಾಕಿದ್ದು, 38.30ರ ಸರಾಸರಿ ಹಾಗೂ 137.45ರ ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ, (ಏಜೆನ್ಸೀಸ್​).