ಕ್ರೀಡೆ

ಐಪಿಎಲ್​ನಿಂದ ಹೊರ ನಡೆಯುವ ಮುನ್ನ 8-9 ದಿನ ನಿದ್ದೆ ಮಾಡಿರಲಿಲ್ಲ ಅಶ್ವಿನ್​!

ನವದೆಹಲಿ: ಐಪಿಎಲ್​ 14ನೇ ಆವೃತ್ತಿ ಮೊಟಕುಗೊಳ್ಳುವುದಕ್ಕೆ ಮುನ್ನವೇ ಹಿರಿಯ ಸ್ಪಿನ್ನರ್​ ಆರ್​. ಅಶ್ವಿನ್​ ಟೂರ್ನಿಯಿಂದ ಹಿಂದೆ ಸರಿದಿದ್ದರು. ಚೆನ್ನೈನಲ್ಲಿರುವ ಅವರ ಕುಟುಂಬದ ಸದಸ್ಯರಿಗೂ ಕರೊನಾ ಸೋಂಕು ಕಾಣಿಸಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಐಪಿಎಲ್​ನಿಂದ ಹಿಂದೆ ಸರಿಯಲು ತಾವು ಎದುರಿಸಿದ ಅನಿವಾರ್ಯ ಪರಿಸ್ಥಿತಿಯ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆಟಗಾರ ಅಶ್ವಿನ್​ ಈಗ ವಿವರಣೆ ನೀಡಿದ್ದಾರೆ.

ಇಂಗ್ಲೆಂಡ್​ ಪ್ರವಾಸಕ್ಕೆ ಮುನ್ನ ಮುಂಬೈನಲ್ಲಿ ಟೀಮ್​ ಇಂಡಿಯಾದ ಕ್ವಾರಂಟೈನ್​ನಲ್ಲಿರುವ ಅಶ್ವಿನ್​, ಕುಟುಂಬದ ಸದ್ಯರಿಗೆ ಕರೊನಾ ಸೋಂಕು ಕಾಣಿಸಿಕೊಂಡ ಬಳಿಕ 8-9 ದಿನಗಳ ಕಾಲ ನಿದ್ದೆಯನ್ನೇ ಮಾಡಿರಲಿಲ್ಲವಂತೆ. ನಿದ್ದೆಯಿಲ್ಲದ ರಾತ್ರಿಗಳಿಂದಾಗಿ ಅವರು ತೀವ್ರ ಬಳಲಿಕೆ ಎದುರಿಸುತ್ತಿದ್ದರು. ನಿದ್ದೆಯನ್ನೇ ಮಾಡುವುದು ಐಪಿಎಲ್​ ಪಂದ್ಯಗಳನ್ನು ಆಡುವುದು ಕಠಿಣವಾಗಿತ್ತು. ಹೀಗಾಗಿ ಕೊನೆಗೆ ಟೂರ್ನಿಯನ್ನೇ ತ್ಯಜಿಸಿ ಮನೆಗೆ ತೆರಳಲು ನಿರ್ಧರಿಸಿದೆ ಎಂದು ಅಶ್ವಿನ್​ ವಿವರಿಸಿದ್ದಾರೆ.

ಕ್ವಾರಂಟೈನ್​ನಲ್ಲಿರುವುದು ಎಷ್ಟು ಕಠಿಣ ಎಂಬ ಬಗ್ಗೆಯೂ ಮಾತನಾಡಿರುವ ಅಶ್ವಿನ್​, ಐಷಾರಾಮಿ ಪಂಚತಾರಾ ಹೋಟೆಲ್​ನಲ್ಲಿ ನಾವಿರುವುದು ಹೊರಗಿನವರಿಗೆ ಕಷ್ಟಕರವಲ್ಲದಂತೆ ಕಾಣಿಸಬಹುದು. ಆದರೆ ಇದು ಸುಲಭವಾದುದಲ್ಲ. 14 ದಿನಗಳ ಕಾಲ ಹೋಟೆಲ್​ನಲ್ಲೇ ಇರಬೇಕು. ಪ್ರತಿ 2 ದಿನಕ್ಕೊಮ್ಮೆ ಕರೊನಾ ಪರೀಕ್ಷೆ ಎದುರಿಸಬೇಕು. ಕ್ವಾರಂಟೈನ್​ ವೇಳೆ ಸಮಯ ಕಳೆಯುವುದೇ ದೊಡ್ಡ ಸಾಹಸ ಎಂದು ಹೇಳಿದ್ದಾರೆ.

ಭಾರತ ತಂಡದ ಇತರೆಲ್ಲ ಆಟಗಾರರು ಈಗಾಗಲೆ ಕೋವಿಶೀಲ್ಡ್​ ಲಸಿಕೆಯ ಮೊದಲ ಡೋಸ್​ ಹಾಕಿಸಿಕೊಂಡಿದ್ದರೆ, ಅಶ್ವಿನ್​ ಅವರು ಭಾರತದ್ದೇ ಆದ ಲಸಿಕೆ ಕೋವ್ಯಾಕ್ಸಿನ್​ ತೆಗೆದುಕೊಂಡಿದ್ದಾರೆ. ಕೋವ್ಯಾಕ್ಸಿನ್​ ಲಸಿಕೆಯ ಎರಡೂ ಡೋಸ್​ಗಳನ್ನು ಈಗಾಗಲೆ ತೆಗೆದುಕೊಂಡಿರುವೆ ಎಂದೂ ಅಶ್ವಿನ್​ ತಿಳಿಸಿದ್ದಾರೆ.