ಕ್ರೀಡೆ

ಟೀಮ್​ ಇಂಡಿಯಾ ವೇಗಿಗಳಿಗೆ ಕರೊನಾ ಲಸಿಕೆ

ನವದೆಹಲಿ: ಟೀಮ್​ ಇಂಡಿಯಾದ ವೇಗದ ಬೌಲರ್​ಗಳಾದ ಮೊಹಮದ್​ ಶಮಿ ಮತ್ತು ಟಿ. ನಟರಾಜನ್​ ಕರೊನಾ ಲಸಿಕೆಯ ಮೊದಲ ಡೋಸ್​ ಅನ್ನು ಗುರುವಾರ ತೆಗೆದುಕೊಂಡಿದ್ದಾರೆ. ಇಬ್ಬರೂ ಟ್ವಿಟರ್​ನಲ್ಲಿ ಚಿತ್ರವನ್ನು ಪ್ರಕಟಿಸುವ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ.

ಇಂಗ್ಲೆಂಡ್​ ಪ್ರವಾಸಕ್ಕೆ ಪೂರ್ವಭಾವಿಯಾಗಿ ಮುಂಬೈನಲ್ಲಿ ಹೋಟೆಲ್​ ಕ್ವಾರಂಟೈನ್​ನಲ್ಲಿರುವ ಮೊಹಮದ್​ ಶಮಿ, ಅಲ್ಲೇ ಕರೊನಾ ಲಸಿಕೆ ತೆಗೆದುಕೊಂಡಂತಿದೆ. ನನ್ನ ಮೊದಲ ಡೋಸ್​ ಹಾಕಿಸಿಕೊಂಡೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಕೇಳಿಕೊಳ್ಳುವೆ ಎಂದು ಮೊಹಮದ್​ ಶಮಿ ಟ್ವಿಟರ್​ನಲ್ಲಿ ಬರೆದಿದ್ದಾರೆ. ಕ್ವಾರಂಟೈನ್​ ವೇಳೆ ಬಿಸಿಸಿಐ, ಇದುವರೆಗೆ ಲಸಿಕೆ ಹಾಕಿಕೊಳ್ಳದ ಆಟಗಾರರಿಗೆ ಮೊದಲ ಡೋಸ್​ ವ್ಯವಸ್ಥೆ ಮಾಡಿದೆ ಎನ್ನಲಾಗಿದೆ.

ಇನ್ನು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸನ್​ರೈಸರ್ಸ್​ ತಂಡದ ಎಡಗೈ ವೇಗಿ ಟಿ. ನಟರಾಜನ್​, ಇವತ್ತು ಬೆಳಗ್ಗೆ ಕರೊನಾ ಲಸಿಕೆ ಹಾಕಿಸಿಕೊಂಡೆ. ಆರೋಗ್ಯ ಸಿಬ್ಬಂದಿಗೆ ಲಾಂತರ ಧನ್ಯವಾದಗಳು. ನಮ್ಮ ಜನರ ಜೀವಕ್ಕಾಗಿ ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಟಿ. ನಟರಾಜನ್​ ಜುಲೈನಲ್ಲಿ ಭಾರತದ 2ನೇ ಸ್ತರದ ತಂಡದೊಂದಿಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.