ಲಾಹೋರ್: ಮುಂಬರುವ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಮೂರೂ ಪ್ರಕಾರದ ತಂಡವನ್ನು ಪ್ರಕಟಿಸಿದೆ. ಈ ಪೈಕಿ ಟಿ20 ತಂಡದಲ್ಲಿ ಅಜಾಮ್ ಖಾನ್ ಎಂಬ ಯುವ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 150ಕ್ಕೂ ಅಧಿಕ ಸ್ಟ್ರೆಕ್ರೇಟ್ ಹೊಂದಿದ್ದರೂ 22 ವರ್ಷದ ಈ ಆಟಗಾರನ ಆಯ್ಕೆಯನ್ನು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ಪ್ರಶ್ನಿಸಿರುವ ಬೆನ್ನಲ್ಲೇ ವಿವಾದ ಸೃಷ್ಟಿಯಾಗಿದೆ.
ಅಜಾಮ್ ಖಾನ್ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಮೊಯಿನ್ ಖಾನ್ ಅವರ ಪುತ್ರನಾಗಿದ್ದಾರೆ. ಮಗನ ಆಯ್ಕೆಯಲ್ಲಿ ತಂದೆಯ ಪ್ರಭಾವ ಇದೆ ಎಂಬುದು ಅವರ ಆಯ್ಕೆಯನ್ನು ಪ್ರಶ್ನಿಸಲು ಒಂದು ಕಾರಣವಾಗಿದ್ದರೆ, ಇನ್ನೊಂದು ಕಾರಣವಿರುವುದು ಅಜಾಮ್ ಖಾನ್ ಅವರ ದೇಹತೂಕದಲ್ಲಿ. ಹೌದು, ಅಜಾಮ್ ಖಾನ್ 100 ಕೆಜಿಗೂ ಅಧಿಕ ದೇಹತೂಕ ಹೊಂದಿದ್ದು, ಅವರ ಫಿಟ್ನೆಸ್ ಬಗ್ಗೆಯೂ ಕ್ರಿಕೆಟ್ ಪ್ರೇಮಿಗಳು ಪ್ರಶ್ನೆಗಳನ್ನು ಎತ್ತಿದ್ದಾರೆ.
ಅಜಾಮ್ ಖಾನ್ ಅವರ ತಂದೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಕೋಚ್ ಆಗಿದ್ದಾರೆ ಎಂಬ ಕಾರಣಕ್ಕೆ ಆರಿಸಲಾಗಿದೆ ಎಂದು ಕೆಲವರು ದೂರಿದ್ದರೆ, ಇನ್ನು ಕೆಲವರು 100 ಕೆಜಿಗೂ ಅಧಿಕ ದೇಹತೂಕ ಹೊಂದಿರುವ ಆಟಗಾರನ ಫಿಟ್ನೆಸ್ ಯಾವ ಮಟ್ಟದಲ್ಲಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಪಾಕಿಸ್ತಾನದ ದೇಶೀಯ ಕ್ರಿಕೆಟ್ನಲ್ಲಿ ಸದ್ಯ ಅಜಾಮ್ ಖಾನ್ಗಿಂತಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ ಎಂದು ಹೇಳಿದ್ದಾರೆ.
ಅಜಾಮ್ ಖಾನ್ ಇದುವರೆಗೆ ಕೇವಲ 1 ಪ್ರಥಮ ದರ್ಜೆ ಪಂದ್ಯವನ್ನಷ್ಟೇ ಆಡಿದ್ದು, 50 ರನ್ ಗಳಿಸಿದ್ದಾರೆ. ಇನ್ನು 15 ಲಿಸ್ಟ್ ಎ ಏಕದಿನ ಪಂದ್ಯಗಳಲ್ಲಿ 29.89ರ ಸರಾಸರಿಯಲ್ಲಿ 239 ರನ್ ಗಳಿಸಿದ್ದಾರೆ. 36 ಟಿ20 ಪಂದ್ಯಗಳಲ್ಲಿ 23.96ರ ಸರಾಸರಿಯಲ್ಲಿ 743 ರನ್ ಗಳಿಸಿದ್ದಾರೆ. ಈ ದಾಖಲೆಗಳ ಪ್ರಕಾರ ಅಜಾಮ್ ಖಾನ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬಹುದಾದಷ್ಟು ಅರ್ಹರಲ್ಲ ಎಂದೂ ಕ್ರಿಕೆಟ್ ಪ್ರೇಮಿಗಳು ದೂರಿದ್ದಾರೆ.
ಆದರೆ ಅಜಾಮ್ ಖಾನ್ ಪರವಾಗಿ ಮಾತನಾಡುವವರ ಪ್ರಕಾರ, ಸದ್ಯ ಪಾಕಿಸ್ತಾನ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅಜಾಮ್ ಖಾನ್ ಅವರಂಥ ಸ್ಫೋಟಕ ಬ್ಯಾಟ್ಸ್ಮನ್ನ ಅಗತ್ಯವಿದೆ. ಪಾಕ್ ತಂಡದ ಮಧ್ಯಮ ಕ್ರಮಾಂಕ ಈಗ ಕೇವಲ ಮೊಹಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಮ್ ಅವರನ್ನು ಮಾತ್ರ ಅವಲಂಭಿಸಿದೆ. ಅಜಾಮ್ ಖಾನ್ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಭರ್ಜರಿ ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಸಾಕಷ್ಟು ಗಮನಸೆಳೆದಿದ್ದಾರೆ.
ಆಯ್ಕೆಗಾಗಿ 30 ಕೆಜಿ ತೂಕ ಇಳಿಕೆ!
ಅಜಾಮ್ ಖಾನ್ ಫಿಟ್ನೆಸ್ ಬಗ್ಗೆ ಈ ಹಿಂದಿನಿಂದಲೂ ದೂರುಗಳಿದ್ದವು. ಹೀಗಾಗಿ ಕಳೆದ ವರ್ಷ 130 ಕೆಜಿಗೂ ಅಧಿಕ ಭಾರವಿದ್ದ ಅಜಾಮ್ ಖಾನ್ ಕಳೆದ 12 ತಿಂಗಳಲ್ಲಿ ಸುಮಾರು 30 ಕೆಜಿ ಇಳಿಸಿಕೊಂಡಿದ್ದಾರೆ. ಇದರ ಫಲವಾಗಿಯೇ ಇದೀಗ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಲಾಗಿದೆ ಎನ್ನಲಾಗುತ್ತಿದೆ.