ನವದೆಹಲಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್(Shama Mohamed), ಒಬ್ಬ ಆಟಗಾರನಾಗಿ ರೋಹಿತ್ ಶರ್ಮಾ ದಪ್ಪಗಿದ್ದಾರೆ, ಅವನು ತೂಕ ಇಳಿಸಿಕೊಳ್ಳಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಅದೇ ಸಮಯದಲ್ಲಿ ರೋಹಿತ್ ಅವರ ನಾಯಕತ್ವವನ್ನು 'ಪರಿಣಾಮಕಾರಿಯಲ್ಲ' ಎಂದು ಟೀಕಿಸಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲ ಸೃಷ್ಟಿಸಿತು.
ಇದನ್ನು ಓದಿ: ಗೆಳತಿಯನ್ನು ಕೊಂದಿದ್ದು ಈ ಕಾರಣಕ್ಕಾಗಿ..; ಪೊಲೀಸರ ಮುಂದೆ ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರೋಪಿ| Kerala Mass Murder
ಅವರ ಹೇಳಿಕೆಗಳನ್ನು ಬಿಜೆಪಿ ತೀವ್ರವಾಗಿ ಖಂಡಿಸಿತು, ಕಾಂಗ್ರೆಸ್ ‘ಬಾಡಿ ಶೇಮಿಂಗ್’ ಮತ್ತು ವಿಶ್ವಕಪ್ ವಿಜೇತರನ್ನು ಅಗೌರವಿಸಿದೆ ಎಂದು ಆರೋಪಿಸಿತು. ಕಾಂಗ್ರೆಸ್ ಜತೆಗಿನ ಸಂಬಂಧವನ್ನು ಮುರಿದು ಬಿಜೆಪಿ ಸೇರಿದ ಬಿಜೆಪಿ ನಾಯಕಿ ರಾಧಿಕಾ ಖೇರಾ, ತಮ್ಮ ಹಿಂದಿನ ಪಕ್ಷವು ದಶಕಗಳಿಂದ ಕ್ರೀಡಾಪಟುಗಳನ್ನು ಅವಮಾನಿಸಿದೆ ಎಂದು ಆರೋಪಿಸಿದರು. ಅಲ್ಲದೆ ಕ್ರಿಕೆಟ್ ಅಭಿಮಾನಿಗಳು ಶಮಾ ಮೊಹಮ್ಮದ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾದ ನಂತರ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ರೋಹಿತ್ ಶರ್ಮಾ ಅವರ ಫಿಟ್ನೆಸ್ ಟೀಕಿಸುವ ಪೊಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಈ ಕುರಿತು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಪಕ್ಷವು ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಶಮಾ ಮೊಹಮ್ಮದ್ ಅವರಿಗೆ ಸೂಚಿಸಿದೆ ಎಂದ ಹೇಳಿದರು.
ನಾನು ಅದನ್ನು ಸಾಮಾನ್ಯ ರೀತಿಯಲ್ಲಿ ಹೇಳಿದ್ದೇನೆ ಎಂದು ಹೇಳುವ ಮೂಲಕ ಶಮಾ ಮೊಹಮ್ಮದ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಪ್ರಜಾಪ್ರಭುತ್ವದಲ್ಲಿ ನಮಗೆ ಮಾತನಾಡುವ ಹಕ್ಕಿಲ್ಲ ಅಂತ ನನಗೆ ಅರ್ಥವಾಗುತ್ತಿಲ್ಲ. ಕ್ರೀಡಾಪಟು ಫಿಟ್ ಆಗಿರಬೇಕು ಎಂದು ತಾನು ಭಾವಿಸುವುದರಿಂದ ಸಾಮಾನ್ಯ ರೀತಿಯಲ್ಲಿ ಪೋಸ್ಟ್‌ಗಳನ್ನು ಮಾಡಿದ್ದೇನೆ. ರೋಹಿತ್ ಶರ್ಮಾ ಅವರ "ದೇಹಕ್ಕೆ ಅವಮಾನ"(ಬಾಡಿ ಶೇಮಿಂಗ್) ಮಾಡುವ ಉದ್ದೇಶ ನನಗಿಲ್ಲ. ಬದಲಿಗೆ ಅವರ ಫಿಟ್ನೆಸ್ ಬಗ್ಗೆ ಕಾಮೆಂಟ್ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಒಬ್ಬ ಕ್ರೀಡಾಪಟು ಫಿಟ್ ಆಗಿರಬೇಕು ಎಂದು ನಾನು ಯಾವಾಗಲೂ ನಂಬಿದ್ದೆ ಆದರೆ ರೋಹಿತ್ ಶರ್ಮಾ ಅವರು ಸ್ವಲ್ಪ ಅಧಿಕ ತೂಕ ಹೊಂದಿದ್ದಾರೆ ಎಂದು ನನಗೆ ಅನಿಸಿತು, ಆದ್ದರಿಂದ ನಾನು ಅದರ ಬಗ್ಗೆ ಟ್ವೀಟ್ ಮಾಡಿದ್ದೇನೆ. ಯಾವುದೇ ಕಾರಣವಿಲ್ಲದೆ ನನ್ನ ಮೇಲೆ ದಾಳಿ ಮಾಡಲಾಗಿದೆ. ನಾನು ಆತನನ್ನು ಹಿಂದಿನ ನಾಯಕರೊಂದಿಗೆ ಹೋಲಿಸಿದಾಗ ಒಂದು ಹೇಳಿಕೆಯನ್ನು ನೀಡಿದ್ದೇನೆ. ನನಗೆ ಹಕ್ಕಿದೆ, ಹೇಳುವುದರಲ್ಲಿ ತಪ್ಪೇನಿದೆ? ಇದು ಪ್ರಜಾಪ್ರಭುತ್ವ ಎಂದು ತಿಳಿಸಿದರು.
ಶಮಾ ಮೊಹಮ್ಮದ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಕ್ರಿಕೆಟ್ ದಂತಕಥೆಯ ಬಗ್ಗೆ ಶಮಾ ಮೊಹಮ್ಮದ್ ಮಾಡಿದ ಹೇಳಿಕೆಗಳು ಪಕ್ಷದ ಅಧಿಕೃತ ದೃಷ್ಟಿಕೋನವನ್ನು ಪ್ರತಿನಿಧಿಸುವುದಿಲ್ಲ ಎಂದು ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಮತ್ತು ವಕ್ತಾರ ಪವನ್ ಖೇರಾ ಹೇಳಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕ್ರೀಡಾ ದಂತಕಥೆಗಳ ಕೊಡುಗೆಯನ್ನು ಅತ್ಯುನ್ನತ ಗೌರವದಲ್ಲಿ ಹೊಂದಿದೆ ಮತ್ತು ಅವರ ಪರಂಪರೆಯನ್ನು ದುರ್ಬಲಗೊಳಿಸುವ ಯಾವುದೇ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್)