

ತಿರುವನಂತಪುರಂ: ಕೇರಳದ ವೆಂಜರಮೂಡುವಿನಲ್ಲಿ ತನ್ನ ಕುಟುಂಬ ಸದಸ್ಯರು ಸೇರಿದಂತೆ 6 ಜನರನ್ನು ಕೊಂದ(Kerala Mass Murder) ಅಫಾನ್ ಪೊಲೀಸರ ಮುಂದೆ ಕೆಲವು ಭಯಾನಕ ವಿಷಯಗಳನ್ನು ಒಪ್ಪಿಕೊಂಡಿದ್ದಾನೆ. ತನ್ನ ಗೆಳತಿ ತನ್ನನ್ನು ಬಿಟ್ಟು ಒಂಟಿಯಾಗಿ ಬದುಕಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವಳನ್ನು ಕೊಂದಿರುವುದಾಗಿ ಅಫಾನ್ ತಿಳಿಸಿರುವುದಾಗಿ ಪೊಲೀಸರು ಹೊಸ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಆ ವ್ಯಕ್ತಿ 14 ಸಾಲಗಾರರಿಂದ 65 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಮತ್ತು ಆರಂಭದಲ್ಲಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಜಿಸಿದ್ದ. ಕೊಲೆಗಳನ್ನು ಮಾಡಿದ ನಂತರ ಯುವಕ ಅಫಾನ್ ಆತ್ಮಹತ್ಯೆ ಮಾಡಿಕೊಳ್ಳಲು ಯೋಜಿಸಿದ್ದ ಮತ್ತು ತನ್ನ ಗೆಳತಿ ತನ್ನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದು ಭಾವಿಸಿ ಅವಳನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರಂನ ವೆಂಜರಮೂಡು ಪಟ್ಟಣದ ಸುತ್ತಮುತ್ತಲಿನ ಮೂರು ಮನೆಗಳಲ್ಲಿ ಅಫಾನ್ ತನ್ನ ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, 13 ವರ್ಷದ ಸಹೋದರ ಮತ್ತು ಗೆಳತಿಯನ್ನು ಹತ್ಯೆ ಮಾಡಿದ್ದ. ಅವನು ತನ್ನ ತಾಯಿಯನ್ನು ಕೊಲ್ಲಲು ಸಹ ಪ್ರಯತ್ನಿಸಿದನು, ಆದರೆ ಅವರು ಬದುಕುಳಿದಿದ್ದಾರೆ. ಕೊಲೆ ಮಾಡಿದ ನಂತರ 23 ವರ್ಷದ ಅಫಾನ್ ವೆಂಜರಮೂಡು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಅಫಾನ್ ಅವರ ತಂದೆ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದರು ಮತ್ತು ಸಾಲದ ಕಾರಣದಿಂದಾಗಿ ಕುಟುಂಬವು ಸಾಲಗಾರರಿಂದ ಕಿರುಕುಳಕ್ಕೊಳಗಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಅಜ್ಜಿ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಿಲ್ಲ ಎಂದು ಅಫಾನ್ ಅಸಮಾಧಾನಗೊಂಡಿದ್ದ. ಮತ್ತು ಅವರು ತಮ್ಮ ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತುಕೊಂಡಾಗ ತನ್ನ ತಾಯಿ ಮತ್ತು 13 ವರ್ಷದ ಸಹೋದರನನ್ನು ತನ್ನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಿದರು ಎಂದು ಅವರು ಹೇಳಿದರು.
ಆದರೆ ಅವರ ತೀರ್ಮಾನಕ್ಕೆ ತಾಯಿ ಒಪ್ಪಲಿಲ್ಲ ಮತ್ತು ನಂತರ ಅಫಾನ್ ತನ್ನ ತಾಯಿ ಮತ್ತು ಸಹೋದರನನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದನು. ತನ್ನ ತಾಯಿಯ ಮೇಲೆ ಹಲ್ಲೆ ಮಾಡಿದ ನಂತರ ಅವಳು ಸತ್ತಿದ್ದಾಳೆಂದು ಭಾವಿಸಿ ಮನೆಯಿಂದ ಹೊರಟು ಅಜ್ಜಿಯ ಮನೆಗೆ ಹೋಗಿ, ಅಜ್ಜಿಯನ್ನು ಕೊಲೆ ಮಾಡಿ ಚಿನ್ನದ ಹಾರವನ್ನು ಕದ್ದಿದ್ದಾನೆ. ಇದಾದ ನಂತರ ಅಫಾನ್ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಮನೆಗೆ ಹೋಗಿ ಅವರನ್ನೂ ಕೊಂದನು. ಅವನು ಮನೆಗೆ ಮರಳಿದನು, ಅಲ್ಲಿ ಅವನ 13 ವರ್ಷದ ಸಹೋದರ ಮತ್ತು ಗೆಳತಿ ಫರ್ಸಾನಾ ಇದ್ದರು. ಅವನಿಲ್ಲದೆ ತನ್ನ ಗೆಳತಿ ಬದುಕಲು ಸಾಧ್ಯವಿಲ್ಲ ಎಂದು ಭಾವಿಸಿ, ತನ್ನ ಸಹೋದರನನ್ನು ಮೊದಲು ಹತ್ಯೆ ಮಾಡಿ ಬಳಿಕ ಫರ್ಸಾನಾಳನ್ನು ಕೊಂದಳು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುದರ್ಶನ್ ಹೇಳಿದರು.
ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿತ್ತು ಎಂಬುದನ್ನು ಅಫಾನ್ ತಂದೆ ತಳ್ಳಿಹಾಕಿದ್ದಾರೆ. ನಮಗೆ ಯಾವುದೇ ದೊಡ್ಡ ಆರ್ಥಿಕ ಸಮಸ್ಯೆಗಳು ಇರಲಿಲ್ಲ. ನಮ್ಮ ಕುಟುಂಬದಲ್ಲಿ ಅದು ಸಮಸ್ಯೆಯಾಗಿರಲಿಲ್ಲ. ಕೊಲೆಗಳಿಗೆ ಕಾರಣವೇನು ಎಂಬುದು ನನಗೆ ತಿಳಿದಿಲ್ಲ. ತನಿಖೆ ನಡೆಸುವುದು ಪೊಲೀಸರ ಮೇಲಿದೆ ಎಂದು ಅಫಾನ್ ತಂದೆ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಅಫಾನ್ ತನ್ನ ತಾಯಿಯ ಮೇಲೂ ಕ್ರೂರವಾಗಿ ಹಲ್ಲೆ ನಡೆಸಿದ್ದ, ಆದರೆ ಅವರು ಬದುಕುಳಿದಿದ್ದು ಪ್ರಸ್ತುತ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜ್ಜಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಯುವಕನನ್ನು ಗುರುವಾರ ಬಂಧಿಸಲಾಗಿದ್ದು, ಮಾರ್ಚ್ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.(ಏಜೆನ್ಸೀಸ್)