ಚೆನ್ನೈ: ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಕೊನೆಗೂ ಕರೊನಾ ಕಾಲದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸುವ ಅವಕಾಶ ಕೂಡಿ ಬಂದಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ಫೆಬ್ರವರಿ 13ರಿಂದ ಚೆನ್ನೈನಲ್ಲೇ ನಡೆಯಲಿರುವ 2ನೇ ಟೆಸ್ಟ್ ಪಂದ್ಯವನ್ನು ಶೇ. 50 ಪ್ರೇಕ್ಷಕರು ವೀಕ್ಷಿಸಲಿದ್ದು, ಸೋಮವಾರದಿಂದ ಟಿಕೆಟ್ ಮಾರಾಟ ಪ್ರಕ್ರಿಯೆ ನಡೆಯಲಿದೆ.
ಎಂಎ ಚಿದಂಬರಂ ಕ್ರೀಡಾಂಗಣದ ಐ, ಜೆ ಮತ್ತು ಕೆ ಸ್ಟಾೃಂಡ್ 2012ರ ಬಳಿಕ ಮೊದಲ ಬಾರಿಗೆ ಪ್ರೇಕ್ಷಕರಿಗೆ ಓಪನ್ ಆಗುತ್ತಿದೆ. 2011ರ ವಿಶ್ವಕಪ್ ಬಳಿಕ ಸ್ಥಳೀಯಾಡಳಿತದ ಜತೆಗಿನ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಬಿಕ್ಕಟ್ಟಿನಿಂದಾಗಿ ಈ 3 ಸ್ಟಾೃಂಡ್‌ಗಳು ಬಂದ್ ಆಗಿದ್ದವು. 2016ರ ಟಿ20 ವಿಶ್ವಕಪ್ ಮತ್ತು ಐಪಿಎಲ್ ಪಂದ್ಯಗಳ ವೇಳೆಯೂ ತಲಾ 4 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಈ 3 ಸ್ಟಾೃಂಡ್‌ಗಳು ಖಾಲಿ ಉಳಿದಿದ್ದವು.
ಇದನ್ನೂ ಓದಿ: ಟೀಮ್ ಇಂಡಿಯಾದ ಸಭೆಯಲ್ಲಿ ರೈತರ ಬಗ್ಗೆ ಚರ್ಚೆ!
2ನೇ ಟೆಸ್ಟ್ ಪಂದ್ಯದ 15 ಸಾವಿರ ಟಿಕೆಟ್‌ಗಳು ಸಾರ್ವಜನಿಕರಿಗೆ ಮಾರಾಟವಾಗಲಿದ್ದು, ಆನ್‌ಲೈನ್‌ನಲ್ಲಿ ಮಾತ್ರ ಟಿಕೆಟ್ ಖರೀದಿಗೆ ಲಭ್ಯವಿರಲಿದೆ. ಸೋಮವಾರ ಬೆಳಗ್ಗೆ 10 ಗಂಟೆಯಿಂದ ಪೇಟಿಎಂ ಆ್ಯಪ್‌ನಲ್ಲಿ ಟಿಕೆಟ್ ಮಾರಾಟವಾಗಲಿದೆ. ಕೌಂಟರ್ ಟಿಕೆಟ್ ಮಾರಾಟ ಇರುವುದಿಲ್ಲ. ಪ್ರತಿದಿನದ ಟಿಕೆಟ್‌ಗೆ ಕನಿಷ್ಠ 100 ರೂ. ಇದ್ದು, 150 ಮತ್ತು 200 ರೂ. ಬೆಲೆಯ ಟಿಕೆಟ್ ಕೂಡ ಮಾರಾಟಕ್ಕಿಡಲಾಗುತ್ತಿದೆ. ಸರಣಿಯ ಮೊದಲ ಟೆಸ್ಟ್ ಪಂದ್ಯ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.