

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಬೆನ್ನಲ್ಲೇ ವೇಗಿ ಮೊಹಮದ್ ಸಿರಾಜ್ ಡ್ರೆಸ್ಸಿಂಗ್ ರೂಂನಲ್ಲಿ ಕುಲದೀಪ್ ಯಾದವ್ ಅವರ ಕೊರಳು ಹಿಡಿದು ಎಳೆದಾಡಿರುವ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರಿಬ್ಬರ ನಡುವೆ ವೈಮನಸ್ಯದಿಂದ ಈ ಘಟನೆ ನಡೆದಿದೆಯೇ ಎಂಬ ಬಗ್ಗೆ ಈಗ ಕೌತುಕ ಮೂಡಿದೆ.
ಕೋಚ್ ರವಿಶಾಸಿ ಅವರ ಬೆನ್ನಹಿಂದೆ ಈ ಘಟನೆ ನಡೆದಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ. ಪಂದ್ಯದಲ್ಲಿ ಆಡದಿರುವ ಇಬ್ಬರ ನಡುವೆ ಜಗಳ ಏರ್ಪಟ್ಟಿದೆಯೇ ಅಥವಾ ಗೆಳೆತನದ ಸಲುಗೆಯಿಂದ ಸಿರಾಜ್ ಹಾಗೆ ವರ್ತಿಸಿರುವರೇ ಎಂಬುದು ಸ್ಪಷ್ಟವಾಗಿಲ್ಲ. ಈ ಘಟನೆಯ ವಿವರಗಳನ್ನು ಟೀಮ್ ಇಂಡಿಯಾ ಇನ್ನೂ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ಐಪಿಎಲ್ ಹೀರೋ ರಾಹುಲ್ ತೆವಾಟಿಯಾ ನಿಶ್ಚಿತಾರ್ಥ
ಈ ನಡುವೆ ಸಿರಾಜ್ ವರ್ತನೆಯ ಬಗ್ಗೆ ಕೆಲ ಕ್ರಿಕೆಟ್ ಪ್ರೇಮಿಗಳಿಂದ ಆಕ್ಷೇಪವೂ ವ್ಯಕ್ತವಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಿಂಚಿದ ಬಳಿಕ ಸಿರಾಜ್ ‘ಆ್ಯಟಿಟ್ಯೂಡ್’ ಹೆಚ್ಚಾಗಿದೆ ಎಂದೂ ದೂರಲಾಗುತ್ತಿದೆ. ಟೀಮ್ ಇಂಡಿಯಾದ ಮಟ್ಟಿಗೆ ಕುಲದೀಪ್ ಅವರೇ ಹಿರಿಯರಾಗಿದ್ದರೆ, ಸಿರಾಜ್ ಇನ್ನೂ ಹೊಸ ಆಟಗಾರರಾಗಿದ್ದಾರೆ.
ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಪರ ಅತ್ಯಧಿಕ ವಿಕೆಟ್ ಕಬಳಿಸಿದ ನಡುವೆಯೂ ಚೆನ್ನೈ ಟೆಸ್ಟ್‌ನಿಂದ ಹೊರಗುಳಿದಿದ್ದರೆ, ಕುಲದೀಪ್ ಯಾದವ್ ಮತ್ತೊಮ್ಮೆ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಆಸೀಸ್ ಪ್ರವಾಸದುದ್ದಕ್ಕೂ ತಂಡದಲ್ಲಿದ್ದರೂ ಕುಲದೀಪ್ ಆಡಿರಲಿಲ್ಲ. ಚೆನ್ನೈನಲ್ಲಿ ಕುಲದೀಪ್ 2ನೇ ಸ್ಪಿನ್ನರ್ ಆಗಿ ಆಡುವ ನಿರೀಕ್ಷೆ ಇತ್ತು. ಆದರೆ ಕೊನೇಕ್ಷಣದಲ್ಲಿ ತಂಡಕ್ಕೆ ಸೇರ್ಪಡೆಗೊಂಡ ಮತ್ತೋರ್ವ ಸ್ಪಿನ್ನರ್ ಶಾಬಾಜ್ ನದೀಂ ಆಡುವ ಅದೃಷ್ಟ ಒಲಿಸಿಕೊಂಡಿದ್ದರು.