ಕ್ರೀಡೆ

ಪಕ್ಕಾ ಆರ್​ಸಿಬಿ ಪ್ಲೇಆಫ್​ಗೆ ಹೋಗೋದಿಲ್ಲ! ಹೇಗೆ ಅಂತೀರಾ? ಇಲ್ಲಿದೆ ನೋಡಿ ಲೆಕ್ಕಾಚಾರ

ಬೆಂಗಳೂರು: ಉತ್ತಮ ನಿರೀಕ್ಷೆಯೊಂದಿಗೆ ಐಪಿಎಲ್-2024 ಅಭಿಯಾನ ಆರಂಭಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತನ್ನ ಮೊದಲ ಪಂದ್ಯದಲ್ಲೇ ಸೋಲಿನಿಂದ ಲೀಗ್ ಪ್ರಾರಂಭಿಸಿತು. ಬಳಿಕ ಚೇತರಿಸಿಕೊಂಡು ಎರಡನೇ ಪಂದ್ಯ ಪಂಜಾಬ್ ವಿರುದ್ಧ ಗೆದ್ದು ಭರವಸೆ ಮೂಡಿಸಿತು. ಆದರೆ, ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಪಡೆ ಸತತ 6 ಪಂದ್ಯಗಳಲ್ಲಿ ಸೋಲುವ ಮೂಲಕ ಈ ಒಂದು ಹಂತದಲ್ಲಿ ಟ್ರೋಫಿ ಗೆಲ್ಲುವ ಆಸೆಯನ್ನೇ ಕೈ ಚೆಲ್ಲಿತ್ತು. ಆದರೆ, ಜಾದುವಿನಂತೆ ಲೀಗ್‌ನ ದ್ವಿತೀಯಾರ್ಧದಲ್ಲಿ ಪುಟಿದೆದ್ದ ಆರ್​ಸಿಬಿ, ಸತತ 5 ಗೆಲುವಿನೊಂದಿಗೆ ಇಂದಿಗೂ ತಮ್ಮ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಪ್ಲೇಆಫ್​ಗೆ ಆರ್​ಸಿಬಿ ಅರ್ಹತೆ ಗಿಟ್ಟಿಸಿಕೊಳ್ಳಬೇಕೆಂದರೆ ನಿಜಕ್ಕೂ ಪವಾಡವೇ ನಡೆಯಬೇಕಿದೆ. ಆದರೂ ಅದು ಅಷ್ಟು ಸುಲಭವಲ್ಲ.

ಆರ್​ಸಿಬಿ ಪ್ಲೇಆಫ್​ ಕನಸು ಈವರೆಗೂ ಜೀವಂತವಾಗಿದೆ. ಆದರೆ, ಮುಂದೆ? ಹೇಗೆ, ಏನು ಎಂಬ ಹತ್ತಾರು ಪ್ರಶ್ನೆಗಳು, ಅನುಮಾನಗಳು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿಯವರೆಗೆ 13 ಪಂದ್ಯಗಳನ್ನು ಆಡಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪಡೆ 12 ಪಾಯಿಂಟ್​ಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಸತತ ಗೆಲುವಿನಿಂದ ತಂಡದಲ್ಲಿ ಭಾರೀ ಉತ್ಸಾಹ ಹೆಚ್ಚಿದ್ದು, ಇನ್ನೊಂದು ಪಂದ್ಯ ಗೆದ್ದರೆ ಪ್ಲೇಆಫ್​ಗೆ ಹೋಗುತ್ತೀವಿ ಎಂದು ಅಭಿಮಾನಿಗಳು ದೊಡ್ಡ ಭರವಸೆಯನ್ನೇ ಇಟ್ಟುಕೊಂಡಿದ್ದಾರೆ. ಆದರೆ, ಅದೆಲ್ಲವೂ ಈ ಲೆಕ್ಕಚಾರಗಳನ್ನು ಒಮ್ಮೆ ನೋಡಿದ್ರೆ ಕೇವಲ ಕನಸಾಗಿಯೇ ಉಳಿಯುತ್ತದೆನೋ ಅಂತ ಅನಿಸುವುದು ಪಕ್ಕಾ!

ಐಪಿಎಲ್​ 2024ರ ಪ್ಲೇಆಫ್​ಗೆ ಆರ್​ಸಿಬಿ ಎಂಟ್ರಿ ಕೊಡಬಹುದಾ?

ಹೌದು, ಖಂಡಿತಾ ಪ್ಲೇಆಫ್​ಗೆ ಆರ್​ಸಿಬಿ ಎಂಟ್ರಿ ಕೊಡಬಹುದು. ಕಳೆದ ಪಂದ್ಯಗಳಲ್ಲಿ ತಂಡ ಆಡುತ್ತಿರುವ ವೈಖರಿ ನೋಡಿದ್ರೆ, ತಲುಪುವ ಎಲ್ಲಾ ಸಾಧ್ಯತೆಗಳಿವೆ. ಆದರೆ, ಕೇವಲ ಮುಂದಿನ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸಾಧಾರಣ ಜಯ ಸಾಧಿಸಿದ್ರೆ ಸಾಲದು. 14 ಪಾಯಿಂಟ್​ಗಳ ಜತೆ ಜತೆಗೆ ಅತ್ಯಧಿಕ ರನ್​ರೇಟ್​ ಅಗತ್ಯವಿದೆ. ಸಿಎಸ್​ಕೆ ತಂಡವನ್ನು 18 ರನ್​ಗಳ ಅಂತರದಿಂದ ಮಣಿಸಬೇಕು (ಮೊದಲು ಬ್ಯಾಟ್ ಮಾಡಿ) ಅಥವಾ 11 ಬಾಲ್​ ಉಳಿದಿರುವ ಮುನ್ನವೇ ಪಂದ್ಯ ಗೆಲ್ಲಬೇಕು. ಇದು ಆರ್​ಸಿಬಿಗೆ ಮತ್ತಷ್ಟು ಬಲ ತುಂಬುವುದೇನೋ ನಿಜ. ಆದರೆ, ಇದಷ್ಟೇ ಸಾಲಲ್ಲ.

ಆರ್​ಸಿಬಿ ಪ್ಲೇಆಫ್​ಗೆ ಹೋಗಬೇಕಾದ್ರೆ ಇಷ್ಟೆಲ್ಲಾ ನಡೆಯಬೇಕು

DC vs LSG: ಈ ಪಂದ್ಯದಲ್ಲಿ ಎರಡು ತಂಡಗಳಲ್ಲಿ ಯಾರೇ ಗೆಲ್ಲಲಿ, ಕಡಿಮೆ ಮಾರ್ಜಿನ್​ನಿಂದಲೇ ಗೆಲ್ಲಬೇಕು.

SRH vs GT: ಈ ಮ್ಯಾಚ್​ನ ಖಂಡಿತವಾಗಿ ಗುಜರಾತ್ ಟೈಟನ್ಸ್ ಗೆಲ್ಲಬೇಕು.

MI vs LSG: ಇಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಪಡೆಯುವುದು ಆರ್​ಸಿಬಿಗೆ ಅನಿವಾರ್ಯ. ಅಕಸ್ಮಾತ್​, ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ಗೆದ್ರೆ, ಇಲ್ಲಿ ಮುಂಬೈ ಗೆಲ್ಲಬೇಕು.

RCB vs CSK: ಇನ್ನು ಈ ಪಂದ್ಯ ಬಹಳ ಮುಖ್ಯವಾಗಿದ್ದು, ಇಲ್ಲಿ ಆರ್​ಸಿಬಿ 18 ರನ್​ಗಳ ಅಂತರದಿಂದ ಸಿಎಸ್​ಕೆಯನ್ನು ಮಣಿಸಬೇಕು (ಮೊದಲು ಬ್ಯಾಟ್ ಮಾಡಿ) ಅಥವಾ 11 ಬಾಲ್​ ಉಳಿದಿರುವ ಮುನ್ನವೇ ಪಂದ್ಯ ಗೆಲ್ಲಬೇಕು.

ಮೇಲೆ ತಿಳಿಸಿದ ಅಷ್ಟು ವಿಷಯಗಳು ಸಂಭವಿಸಿದರೆ ಮಾತ್ರ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಪ್ಲೇಆಫ್​ ಕನಸು ಈಡೇರುತ್ತದೆ. ಆದರೆ, ಇದೆಲ್ಲವೂ ಅಂದುಕೊಂಡಂತೆ ಆಗಬೇಕು ಎಂದರೆ ನಿಜಕ್ಕೂ ಪವಾಡ ನಡೆಯಲೇಬೇಕಿದೆ. ಏನೇ ಉತ್ಸಾಹದಲ್ಲಿ ಪ್ಲೇಆಫ್​ ಹೋಗ್ತೀವಿ ಎಂದು ಹೇಳಿದರೂ ಸಹ ವಾಸ್ತವವಾಗಿ ಇದು ಬಹುತೇಕ ಡೌಟ್​! ಕಷ್ಟಸಾಧ್ಯ ಎಂದರೆ ತಪ್ಪಾಗಲಾರದು.

ಇನ್ನು ಮೇ.18 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಪಂದ್ಯದ ಮೇಲೆ ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮೂಡಿದ್ದು, ಯಾರಿಗೆ ಪ್ಲೇಆಫ್ ಕನಸು ಈಡೇರುತ್ತದೆ? ಯಾರಿಗೆ ಲೀಗ್​ನಿಂದ ಗೇಟ್ ಪಾಸ್ ಸಿಗುತ್ತದೆ ಎಂಬ ಕೌತಕ ನೋಡುಗರಲ್ಲಿ ಬಿಟ್ಟುಬಿಡದಂತೆ ಕಾಡುತ್ತಿದೆ. ಒಟ್ಟಿನಲ್ಲಿ ಅಂದಿನ ಪಂದ್ಯಕ್ಕೆ ಭಾರೀ ಕುತೂಹಲ ಕೆರಳಿದ್ದು, ಪ್ಲೇಆಫ್ ಭವಿಷ್ಯ ಮೇ.18ರ ರಾತ್ರಿಯೇ ನಿರ್ಧಾರವಾಗಲಿದೆ,(ಏಜೆನ್ಸೀಸ್).