ಬೆಂಗಳೂರು: ವಿಶ್ವ ಕೆಡೆಟ್ ಚೆಸ್ ಚೆಸ್ ಚಾಂಪಿಯನ್ಶಿಪ್ 8 ವರ್ಷದೊಳಗಿನವರ ಪ್ರಶಸ್ತಿ ವಿಜೇತರಾಗಿರುವ ಕರ್ನಾಟಕದ ಚಾರ್ವಿಗೆ ಕ್ರೀಡಾ ಸಚಿವ ನಾರಾಯಣಗೌಡ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.
ಜಾರ್ಜಿಯದ ಬಟುಮಿಯಲ್ಲಿ ನಡೆದ ವಿಶ್ವ ಕೆಡೆಟ್ಸ್ ಚೆಸ್ ಚೆಸ್ ಚಾಂಪಿಯನ್ಶಿಪ್ನ ಬಾಲಕಿಯರ 8 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದು, ರಾಜ್ಯಕ್ಕೆ ಕೀರ್ತಿ ತಂದಿರುವ ಚಾರ್ವಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಚಾರ್ವಿ ಅಪಾರ ಪ್ರತಿಭೆ ಹೊಂದಿದ್ದು, ಚಿಕ್ಕ ವಯಸ್ಸಿನಲ್ಲೇ ಅಪ್ರತಿಮ ಸಾಧನೆ ಮಾಡುತ್ತಿದ್ದಾಳೆ. ಮುಂದಿನ ತಿಂಗಳು ಇಂಡೊನೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲೂ ಆಕೆ ದೇಶವನ್ನು ಪ್ರತಿನಿಧಿಸುವಳು. ನವೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಚೆಸ್ ಕೂಟದಲ್ಲೂ ಪಾಲ್ಗೊಳ್ಳಲಿದ್ದಾಳೆ. ಈ ಬಾಲ ಪ್ರತಿಭೆಗೆ ಎಲ್ಲಾ ರೀತಿಯ ನೆರವು ನೀಡಲಿದ್ದು, 5 ಲಕ್ಷ ರೂ. ನಗದು ಪುರಸ್ಕಾರ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ ಎಂದು ಸಚಿವ ಡಾ.ನಾರಾಯಣಗೌಡ ತಿಳಿಸಿದರು.