Suresh Raina : ಸುಮಾರು ಎಂಟು ವರ್ಷಗಳ ನಂತರ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ನೆಚ್ಚಿನ ತಂಡಗಳಲ್ಲಿ ಒಂದಾಗಿ ಕಣಕ್ಕೆ ಇಳಿಯುತ್ತಿದೆ. ಫೆಬ್ರವರಿ 19 ರಿಂದ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಈ ಮೆಗಾ ಈವೆಂಟ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ತಂಡವನ್ನು ಘೋಷಿಸಿದೆ. 2012ರ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ರೋಹಿತ್ ಶರ್ಮ ಈ ಬಾರಿ ನಾಯಕನಾಗಿ ಕಣಕ್ಕೆ ಇಳಿಯಲಿದ್ದಾರೆ.
ಮತ್ತೊಂದೆಡೆ, ಆಗಿನ ನಾಯಕ ವಿರಾಟ್ ಕೊಹ್ಲಿ ಜೊತೆಗೆ, ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಮತ್ತು ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರನ್ನು ಇತ್ತೀಚಿನ ತಂಡದಲ್ಲಿ ಸೇರಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಸದ್ಯ ಟೀಮ್ ಇಂಡಿಯಾ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ಇಂದು ಎರಡನೇ ಏಕದಿನ ಪಂದ್ಯವನ್ನು ಆಡುತ್ತಿದೆ. ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಕಾಲಿನ ಗಾಯದಿಂದಾಗಿ ಹಿಂದೆ ಸರಿದರು. ಇದೀಗ ಎರಡನೇ ಪಂದ್ಯದಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.
ಮೊದಲ ಏಕದಿನ ಪಂದ್ಯದ ಸಂದರ್ಭದಲ್ಲಿ ಮಾಧ್ಯಮ ಸಂದರ್ಶನ ನೀಡಿದ್ದ ಸುರೇಶ್ ರೈನಾ, ಐಸಿಸಿ ಸರಣಿ ಬಂದರೆ ವಿರಾಟ್ ಕೊಹ್ಲಿ ಬೇರೆಯದೇ ವ್ಯಕ್ತಿಯಾಗುತ್ತಾರೆ ಎಂದು ಹೇಳಿದರು.
ಐಸಿಸಿ ಟೂರ್ನಮೆಂಟ್‌ಗಳಲ್ಲಿ ರನ್ ಗಳಿಸಲು ಆಟಗಾರರು ಹೆಣಗಾಡಿದರು ಕೂಡ ಕೊಹ್ಲಿ ದೊಡ್ಡ ಸ್ಕೋರ್‌ಗಳನ್ನು ಗಳಿಸಿರುವುದನ್ನು ನಾವು ನೋಡಿದ್ದೇವೆ. 2024ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿಯೂ ಸಹ, ಕೊಹ್ಲಿ ಅವರ ಪ್ರದರ್ಶನವು ಗೆಲುವಿಗೆ ಪ್ರಮುಖ ಕಾರಣವಾಗಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಕೊಹ್ಲಿ ಖಂಡಿತವಾಗಿ ಮೂರು ಶತಕಗಳನ್ನು ಗಳಿಸಲಿದ್ದಾರೆ. ಅಲ್ಲದೆ, ಪಂದ್ಯದ ಗೆಲುವಿನಲ್ಲಿ ಪ್ರಮುಖ ಕಾರಣರಾಗುತ್ತಾರೆ ಎಂದು ಸುರೇಶ್ ರೈನಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಕೊಹ್ಲಿ ಸಂಪೂರ್ಣ ಫಿಟ್ನೆಸ್ ಹೊಂದಿದ್ದಾರೆ. ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಆರಾಮಾಗಿ ಕ್ರಿಕೆಟ್ ಅನ್ನು ಆಡಬಹುದು. ಕೊಹ್ಲಿ 2027ರ ಏಕದಿನ ವಿಶ್ವಕಪ್‌ನಲ್ಲಿಯೂ ಆಡಬಹುದು ಎಂದು ಮಂಜ್ರೇಕರ್ ಹೇಳಿದ್ದಾರೆ.
ರೋಹಿತ್ ಶರ್ಮ (ನಾಯಕ), ವಿರಾಟ್ ಕೊಹ್ಲಿ, ಶುಭಮನ್ ಗಿಲ್ (ಉಪನಾಯಕ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಯಶಸ್ವಿ ಜೈಸ್ವಾಲ್, ಕುಲದೀಪ್ ಯಾದವ್.
ಅಂದಹಾಗೆ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆತಿಥ್ಯ ವಹಿಸಲಿದೆ. ರಾಜಕೀಯ ಸಮಸ್ಯೆಗಳಿಂದಾಗಿ, ಟೀಮ್ ಇಂಡಿಯಾ ತನ್ನ ಎಲ್ಲ ಪಂದ್ಯಗಳನ್ನು ಯುಎಇಯಲ್ಲಿ ಆಡಲಿದೆ. ಇದರೊಂದಿಗೆ ಒಂದು ಸೆಮಿಫೈನಲ್ ಪಂದ್ಯವನ್ನು ಕೂಡ ಯುಎಇಯಲ್ಲಿಯೇ ನಡೆಸಲಾಗುತ್ತದೆ. ಆದರೆ, ಫೈನಲ್ ಪಂದ್ಯಕ್ಕೆ ಇನ್ನೂ ಸ್ಥಳ ಅಂತಿಮಗೊಂಡಿಲ್ಲ. ಭಾರತ ಫೈನಲ್ಗೆ ಪ್ರವೇಶಿಸಿದರೆ, ಆ ಪಂದ್ಯವನ್ನು ಯುಎಇಯಲ್ಲಿ ನಡೆಸಲಾಗುತ್ತದೆ. ಭಾರತ ಬಿಟ್ಟು ಬೇರೆ ಯಾವುದೇ ತಂಡಗಳು ಫೈನಲ್ ತಲುಪಿದರೆ, ಪಾಕಿಸ್ತಾನದಲ್ಲೇ ಆ ಪಂದ್ಯ ನಡೆಯಲಿದೆ. (ಏಜೆನ್ಸೀಸ್)