ಕ್ರೀಡೆ

Yusuf Pathan | ಸೆಲೆಬ್ರೆಟಿಗಳು ಕಾನೂನಿಗೆ ಮೀರಿದವರಲ್ಲ..; ಯೂಸೂಫ್​ ಪಠಾಣ್​​ಗೆ ಜಾಗ ತೆರವುಗೊಳಿಸುವಂತೆ ಸೂಚನೆ ನೀಡಿದ ಗುಜರಾತ್​​ ಹೈಕೋರ್ಟ್​​!

Yusuf Pathan: ಯಾವುದೇ ಸೆಲೆಬ್ರಿಟಿಯೂ ಕಾನೂನನ್ನು ಮೀರಿರಲು ಸಾಧ್ಯವಿಲ್ಲ ಮತ್ತು ಅದರಿಂದ ವಿನಾಯಿತಿ ನೀಡುವುದು ಸಾರ್ವಜನಿಕ ವಲಯಕ್ಕೆ ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆ ಎಂದು ಗುಜರಾತ್ ಹೈಕೋರ್ಟ್, ತೃಣಮೂಲ ಕಾಂಗ್ರೆಸ್ ಸಂಸದ ಯೂಸುಫ್ ಪಠಾಣ್​​ಗೆ ತಿಳಿಸಿದೆ.

ವಡೋದರಾದ ತಂಡಲ್ಜಾದಲ್ಲಿ ತಮ್ಮ ಬಂಗಲೆಯ ಪಕ್ಕದಲ್ಲಿರುವ ಜಮೀನಿನ ನಿಯಂತ್ರಣವನ್ನು ತಮ್ಮದಾಗಿಸಿಕೊಳ್ಳುವಂತೆ ಪಠಾಣ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಮೋನಾ ಭಟ್ ನೇತೃತ್ವದ ಏಕಸದಸ್ಯ ಪೀಠ, ವಿವಾದಿತ ಜಾಗವನ್ನು ತೆರವುಗೊಳಿಸಲು ಆದೇಶ ನೀಡಿದೆ.

ಸಾರ್ವಜನಿಕ ವ್ಯಕ್ತಿಯಾಗಿರುವ ಪಠಾಣ್, ಕಾನೂನನ್ನು ಪಾಲಿಸುವ ಜವಾಬ್ದಾರಿ ಸ್ಥಾನದಲ್ಲಿದ್ದಾರೆ, ಸೆಲೆಬ್ರಿಟಿಗಳು ತಮ್ಮ ಖ್ಯಾತಿ ಮತ್ತು ಸಾರ್ವಜನಿಕ ಉಪಸ್ಥಿತಿಯಿಂದಾಗಿ, ತಮ್ಮ ನಡವಳಿಕೆಗಳ ಮೂಲಕ ಜನರ ಮೇಲೆ ಆಳವಾದ ಪರಿಣಾಮ ಬೀರುತ್ತಾರೆ. ಕಾನೂನನ್ನು ಉಲ್ಲಂಘಿಸಿದರು ಕೂಡ ಅಂತಹ ವ್ಯಕ್ತಿಗಳಿಗೆ ರಿಯಾಯಿತಿ ನೀಡಿದರೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನೆ ಹಾಳು ಮಾಡಿದಂತಾಹುತ್ತದೆ ಎಂದು ಸುಪ್ರೀಂ ಕೋರ್ಟ್​​​ನ ಈ ಹಿಂದಿನ ತೀರ್ಪನ್ನು ಉಲ್ಲೇಖಿಸಿ ಗುಜರಾತ್​​ ನ್ಯಾಯಾಲಯ ಈ ಆದೇಶ ನೀಡಿದೆ.

ಘಟನೆ ಏನು..?

2012 ರಲ್ಲಿ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್, ಸಂಸದ ಪಠಾಣ್​ ಆಕ್ರಮಿಸಿಕೊಂಡಿರುವ ಸರ್ಕಾರಿ ಭೂಮಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದಾಗ ಈ ವಿವಾದ ಆರಂಭವಾಗಿದ್ದು,. ಪಠಾಣ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರು. ವಾದ ವಿವಾದ ಆಲಿಸಿರುವ ನ್ಯಾಯಾಲಯ ಆ ಜಮೀನನ್ನು ಅನಧಿಕೃತವಾಗಿ ಪಡೆಯಲಾಗಿದೆ ಎಂದು ತಿಳಿಸಿದೆ.

ತಮ್ಮ ಕುಟುಂಬದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರು ಮತ್ತು ಅವರ ಸಹೋದರ, ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಅವರಿಗೆ ಭೂಮಿಯನ್ನು ಖರೀದಿಸಲು ಅನುಮತಿ ನೀಡಬೇಕೆಂದು ಯೂಸುಫ್ ಪಠಾಣ್ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

ಪಠಾಣ್​​ ತಮ್ಮ ಅರ್ಜಿಯಲ್ಲಿ, ತಾನು ಮತ್ತು ತನ್ನ ಸಹೋದರ ಇರ್ಫಾನ್ ಪಠಾಣ್ ಇಬ್ಬರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧ ಕ್ರೀಡಾ ವ್ಯಕ್ತಿಗಳಾಗಿದ್ದು, ಅವರ ಕುಟುಂಬದ ಭದ್ರತೆಯನ್ನು ಪರಿಗಣಿಸಿ, ಆ ನಿವೇಶನವನ್ನು ಅವರಿಗೆ ಮಂಜೂರು ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಯಿಂದ ನಿವೇಶನ ಖರೀದಿಸಲು ಅನುಮತಿ ಕೋರಿದರು. ಪುರಸಭೆ ಅಧಿಕಾರಿಗಳು ಯೂಸುಫ್ ಪಠಾಣ್ ಅವರ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿದ್ದರು, ಅಂತಿಮವಾಗಿ 2014 ರಲ್ಲಿ ಗುಜರಾತ್​​ ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿತು.(ಏಜೆನ್ಸೀಸ್​​)