ಕ್ರೀಡೆ

ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯಿಂದ ಬುಮ್ರಾ, ಸಿರಾಜ್​ ಔಟ್​! ಸ್ಟಾರ್ ವೇಗಿಗಳ ಬದಲಿಗೆ ಈ ಇಬ್ಬರು ಅಖಾಡಕ್ಕೆ | INDvsENG

INDvsENG: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಾರ್ಡರ್​-ಗವಾಸ್ಕರ್​ ಟ್ರೋಫಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ರೋಹಿತ್ ಶರ್ಮ ಪಡೆ ಹೀನಾಯ ಸೋಲು ಕಂಡಿತು. ಆತಿಥೇಯರ ವಿರುದ್ಧ ಸರಣಿ ಗೆಲ್ಲುವಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ ಸೋಲಿಗೆ ದಿಗ್ಗಜ ಆಟಗಾರರ ಕಳಪೆ ಪ್ರದರ್ಶನ ಎಂದು ಒಂದು ವರ್ಗ ಹೇಳಿದರೆ, ಮತ್ತೊಂದು ವರ್ಗ ತಂಡದ ನಾಯಕ ರೋಹಿತ್ ಶರ್ಮರ ಅತ್ಯಂತ ಕಳಪೆ ಪ್ರದರ್ಶನ ಹಾಗೂ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ ರೀತಿ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ದೂರಿದ್ದಾರೆ. ಆಸೀಸ್​ ಎದುರು ಹೀನಾಯ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಗೆ ಭಾರತ ಸಜ್ಜಾಗಿದೆ.

ಟಿ20 ಸ್ಪೆಷಲಿಸ್ಟ್

ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಗೆಲ್ಲಲು ಟೀಮ್ ಇಂಡಿಯಾ ಸಕಲ ಎದುರುನೋಡುತ್ತಿದ್ದು, ಯಾರೆಲ್ಲಾ ತಂಡದಲ್ಲಿ ಇರಬೇಕು ಎಂಬುದು ಮಾತ್ರ ಇನ್ನೂ ನಿರ್ಧಾರವಾಗಿಲ್ಲ. ಸ್ಟಾರ್​ ಆಟಗಾರರನ್ನು ಅಖಾಡಕ್ಕೆ ಇಳಿಸುವ ಮುನ್ನ ಹತ್ತು ಬಾರಿ ಯೋಚಿಸುತ್ತಿರುವ ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​, ಟಿ20 ಸ್ಪೆಷಲಿಸ್ಟ್​ಗಳನ್ನೇ ಆಡಿಸುವ ಲೆಕ್ಕಾಚಾರದಲ್ಲಿ ತೊಡಗಿದೆ. ಇದೇ ಕಾರಣದಿಂದ ತಂಡದ ಅಂತಿಮ ಪಟ್ಟಿ ಇನ್ನೂ ಪ್ರಕಟಿಸಿಲ್ಲ.

ಬುಮ್ರಾ ಮತ್ತು ಸಿರಾಜ್​ಗೆ ವಿಶ್ರಾಂತಿ?

ಇದೆಲ್ಲದರ ಮಧ್ಯೆ ವರದಿಯೊಂದು ಟೀಮ್ ಇಂಡಿಯಾದ ಸ್ಟಾರ್​ ವೇಗಿಗಳಾದ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್​ ಸಿರಾಜ್​ರನ್ನು ಇಂಗ್ಲೆಂಡ್​ ವಿರುದ್ಧದ ಸರಣಿಯಿಂದ ಕೈಬಿಟ್ಟಿರುವುದಾಗಿ ತಿಳಿಸಿದೆ. ಇವರಿಬ್ಬರಿಗೂ ತಂಡದಲ್ಲಿ ಅವಕಾಶ ಕೊಡುವುದು ಬೇಡ ಎಂದು ದೃಢವಾಗಿ ನಿರ್ಧರಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಟಿ20 ವಿಶ್ವಕಪ್​ ಟ್ರೋಫಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಬಹುತೇಕ ಆಟಗಾರರೇ ಇಲ್ಲಿಯೂ ಇರಲಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾಗವಹಿಸಿದ್ದ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್​ಗೆ ವಿಶ್ರಾಂತಿ ಕೊಡುವ ನಿಟ್ಟಿನಲ್ಲಿ ಮ್ಯಾನೇಜ್​ಮೆಂಟ್​ ಈ ನಿರ್ಧಾರ ಕೈಗೊಂಡಿರಬಹುದು ಎಂದು ಹೇಳಲಾಗಿದೆ.

ಮೊಹಮ್ಮದ್​ ಸಿರಾಜ್​ ಮತ್ತು ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಮೊಹಮ್ಮದ್​ ಶಮಿ ಹಾಗೂ ಅರ್ಷದೀಪ್ ಸಿಂಗ್​ರನ್ನು ಆಡಿಸಲು ಮ್ಯಾನೇಜ್​ಮೆಂಟ್ ನಿರ್ಧರಿಸಿದೆ. ಇವರಿಬ್ಬರ ಜತೆ ಟಿ20 ಪಂದ್ಯಗಳಿಗೆ ಶತಕ ವೀರ ನಿತೀಶ್​ ಕುಮಾರ್​ ರೆಡ್ಡಿಯನ್ನು ಆಯ್ಕೆ ಮಾಡಲು ತಂಡ ಮುಂದಾಗಿದ್ದು, ಏಕದಿನ ಪಂದ್ಯದಿಂದ ಕೈಬಿಡಲು ಚಿಂತಿಸಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).