

ಹಾವೇರಿ: ನಗರದ ಹುಕ್ಕೇರಿ ಮಠದ ಜಾತ್ರೆಯಲ್ಲಿ ಬೊಂಬಾಯಿ ಮಿಠಾಯಿ (ಕಾಟನ್ ಕ್ಯಾಂಡಿ)ಗೆ ನಿಷೇಧಿತ ಕೃತಕ ಬಣ್ಣ ಬಳಸಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಐದು ಸಾವಿರ ರೂ. ದಂಡ ವಿಧಿಸಲಾಗಿದೆ.
ಶುಕ್ರವಾರ ಹುಬ್ಬಳ್ಳಿಯಿಂದ ಆಗಮಿಸಿ ಕೆಲವು ಬೊಂಬಾಯಿ ಮಿಠಾಯಿ ವ್ಯಾಪಾರಿಗಳು ನಿಷೇಧಿತ ಕೃತಕ ಬಣ್ಣ ಬಳಸಿ ಮಾರಾಟ ಮಾಡುತ್ತಿದ್ದರು. ವಿಷಯ ತಿಳಿದ ಆಹಾರ ಸುರಕ್ಷತಾಧಿಕಾರಿ ಶ್ರೀಧರ ಅಗಸಿಬಾಗಿಲ ಮಾರಾಟಗಾರರನ್ನು ಪತ್ತೆಹಚ್ಚಿ ದಂಡವಿಧಿಸಿದ್ದಾರೆ. ನಿಷೇಧಿತ ಕೃತಕ ಬಣ್ಣ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಾದ್ಯಾಂತ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ವಿಶೇಷ ಅಭಿಯಾನ ನಡೆಸಿ, ಕೃತಕ ಬಣ್ಣಗಳ ಬಳಕೆ ನಿಷೇಧ ಕುರಿತು ವ್ಯಾಪಾರಸ್ಥರಿಗೆ ನೋಟಿಸ್ ನೀಡಲಾಗುತ್ತಿದೆ. ಸಂಶಯಾಸ್ಪದ ಆಹಾರ ಮಾದರಿಗಳನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಣೆಗೆ ಒಳಪಡಿಸಿ, ಅಸುರಕ್ಷಿತ ಎಂದು ಕಂಡುಬಂದ ಪ್ರಕರಣಗಳಲ್ಲಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಜಿಲ್ಲಾ ಅಂಕಿತಾಧಿಕಾರಿಗಳ ಹಂತದಲ್ಲಿ ದಂಡ ವಿಧಿಸಲಾಗಿದೆ.
ಸಾರ್ವಜನಿಕರು ಯಾವುದೇ ಬಣ್ಣ ಮಿಶ್ರಿತ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಇವು ಅತ್ಯಂತ ಕಳಪೆ ಮಟ್ಟಣದ ಬಣ್ಣಗಳಾಗಿದ್ದು, ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಜಿಲ್ಲಾ ಅಂಕಿತಾಧಿಕಾರಿ ಡಾ.ನಾಗರಾಜ ಜಿ.ಎಚ್. ತಿಳಿಸಿದ್ದಾರೆ.