ಪರ್ತ್: ಇಲ್ಲಿನ ಪರ್ತ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ (Border-Gavaskar Trophy) ಟೆಸ್ಟ್ ಸರಣಿಯ ಮೊದಲ ಪಂದ್ಯ ನವೆಂಬರ್ 22ರಂದು ಆರಂಭವಾಗಲಿದೆ. ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್ವಾಷ್ ಆಗಿದ್ದ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಪುಟಿದೇಳುವ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಬೇಕೆಂದರೆ ಈ ಸರಣಿ ಗೆಲುವು ಬಹುಮುಖ್ಯವಾಗಿದೆ. ಸರಣಿಯ ಮೊದಲ ಪಂದ್ಯ ನಡೆಯುತ್ತಿರುವ ಪರ್ತ್ ಕ್ರೀಡಾಂಗಣದ (Perth Stadium) ಪಿಚ್ ಹಾಗೂ ಅಲ್ಲಿನ ವಾತಾವರಣ ಹೇಗಿರಲಿದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಕಳೆದ ಕೆಲವು ದಿನಗಳಿಂದ ಪರ್ತ್ನಲ್ಲಿ (Perth) ಮಳೆಯಾಗುತ್ತಿದ್ದು, ಪಂದ್ಯ ನಡೆಯುವ ಹಿಂದಿನ ದಿನ (ನವೆಂಬರ್ 21) ಶೇ. 40 ರಷ್ಟು ಮಳೆಯಾಗಿರುವುದಾಗಿ ವರದಿಯಾಗಿದೆ. ಇನ್ನೂ ಪಂದ್ಯ ನಡೆಯುವ ದಿನ (ನವೆಂಬರ್ 22) ಶೇ. 20ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ರಾತ್ರಿ ವೇಳೆ ಮಳೆ ಸುರಿದರೆ ಮೊದಲ ದಿನದಾಟದ ಟಾಸ್ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಮಳೆಯಿಂದಾಗಿ, ಪಿಚ್‌ನಲ್ಲಿ ತೇವಾಂಶವಿರುವ ಕಾರಣ ಇದು ಬೌಲರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ಉಳಿದಂತೆ ಪಂದ್ಯದ ಮೂರನೇ ದಿನವೂ ಶೇ.25ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪರ್ತ್ ಕ್ರೀಡಾಂಗಣದಲ್ಲಿನ ಪಿಚ್‌ನಲ್ಲಿ ಹೆಚ್ಚು ಹುಲ್ಲು ಇರಲಿದ್ದು, ಪಂದ್ಯ ಮುಗಿಯುವವರೆಗೂ ಬಿರುಕು ಬಿಡುವುದಿಲ್ಲ ಎಂದು ಹೇಳಲಾಗಿದೆ. ಪಿಚ್‌ನಲ್ಲಿ ಹೆಚ್ಚು ಬೌನ್ಸ್ ಇರಲಿದ್ದು, ಸ್ಪಿನ್ನರ್ಗಳಿಗಿಂತ ಹೆಚ್ಚಾಗಿ ವೇಗಿ ಹಾಗೂ ಬ್ಯಾಟ್ಸ್ಮನ್ಗಳಿಗೆ ನೆರವಾಗಲಿದೆ. ಪರ್ತ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಇದುವರೆಗೆ ಕೇವಲ ಒಂದು ಟೆಸ್ಟ್ ಪಂದ್ಯವನ್ನಾಡಿದೆ. 2018ರಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ 146 ರನ್‌ಗಳಿಂದ ಸೋಲನುಭವಿಸಿತ್ತು.
ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯೂ ನವೆಂಬರ್ 22ಕ್ಕೆ ಆರಂಭವಾಗಲಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.