ಕ್ರೀಡೆ

ಹ್ಯಾರಿಸ್ ರೌಫ್, ಫರ್ಹಾನ್ ವಿರುದ್ಧ ಐಸಿಸಿಗೆ ದೂರು ನೀಡಿದ ಬಿಸಿಸಿಐ: ಪಾಕ್​ ಆಟಗಾರರಿಗೆ ಬ್ಯಾನ್​ ಭೀತಿ! BCCI

BCCI : ಪ್ರತಿಷ್ಠಿತ ಏಷ್ಯಾ ಕಪ್ ಟೂರ್ನಿಯ ಸೂಪರ್-4 ರ ಭಾಗವಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ಭಾನುವಾರ (ಸೆ. 21) ಹೈವೋಲ್ಟೇಜ್​ ಪಂದ್ಯದ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಜಯ ದಾಖಲಿಸಿತು. ಅಲ್ಲದೇ, ಇದೇ ಪಂದ್ಯ ಸಾಕಷ್ಟು ವಿವಾದಗಳಿಗೂ ಕಾರಣವಾಯಿತು.

ಈ ಪಂದ್ಯದಲ್ಲಿ ಪಾಕಿಸ್ತಾನಿ ಆಟಗಾರರಾದ ಹ್ಯಾರಿಸ್ ರೌಫ್ ಮತ್ತು ಸಾಹಿಬ್ಜಾದಾ ಫರ್ಹಾನ್ ಪ್ರಚೋದನಕಾರಿ ಸನ್ನೆಗಳನ್ನು ಪ್ರದರ್ಶಿಸಿದರು. ಈಗಾಗಲೇ ಅವರ ವಿರುದ್ಧ ಎಲ್ಲೆಡೆ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಭಾರತೀಯರನ್ನು ಪ್ರಚೋದಿಸುವಂತೆ ಸನ್ನೆ ಮಾಡಿದ ಇಬ್ಬರು ಆಟಗಾರರ ವಿರುದ್ಧ ಬಿಸಿಸಿಐ ಆಕ್ರೋಶಗೊಂಡಿದೆ. ಹೀಗಾಗಿ, ಅವರಿಬ್ಬರ ವಿರುದ್ಧ ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ ಆರೋಪದ ಮೇಲೆ ಬಿಸಿಸಿಐ, ಐಸಿಸಿಗೆ ದೂರು ನೀಡಿದೆ.

ಬಿಸಿಸಿಐ ಇಮೇಲ್ ರೂಪದಲ್ಲಿ ದೂರು ದಾಖಲಿಸಿದೆ ಎಂದು ವರದಿಯಾಗಿದೆ. ಐಸಿಸಿ ಈ ಇಬ್ಬರು ಆಟಗಾರರಿಂದ ಲಿಖಿತ ವಿವರಣೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ವಲಯಗಳು ತಿಳಿಸಿವೆ. ಇಬ್ಬರೂ ಲಿಖಿತ ವಿವರಣೆಯನ್ನು ನೀಡಲು ನಿರಾಕರಿಸಿದರೆ, ಅವರು ಐಸಿಸಿ ಎಲೈಟ್ ಪ್ಯಾನಲ್ ರೆಫರಿ ರಿಚಿ ರಿಚರ್ಡ್ಸನ್ ಅವರ ಮುಂದೆ ಹಾಜರಾಗಬೇಕಾಗುತ್ತದೆ. ಒಂದು ವೇಳೆ ಅವರಿಬ್ಬರ ನಡೆ ಸರಿಯಲ್ಲ ಎಂಬುದು ಮನವರಿಕೆಯಾದರೆ ಐಸಿಸಿ ಇಬ್ಬರು ಆಟಗಾರರನ್ನು ಬ್ಯಾನ್​ ಮಾಡುವ ಸಾಧ್ಯತೆ ಇದೆ.

ನಡೆದಿದ್ದೇನು?

ಸೆಪ್ಟೆಂಬರ್ 21 ರಂದು ಭಾರತ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ನಂತರ, ಫರ್ಹಾನ್ ತಮ್ಮ ಬ್ಯಾಟ್‌ ಅನ್ನು ಎಕೆ 47 ರೀತಿಯಲ್ಲಿ ಹಿಡಿದುಕೊಂಡು ಗುಂಡು ಹಾರಿಸುವ ರೀತಿಯಲ್ಲಿ ಸನ್ನೆ ಮಾಡಿದರು. ಎರಡೂ ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಸಮಯದಲ್ಲೇ ಫರ್ಹಾನ್​ ನಡೆದುಕೊಂಡ ರೀತಿ ತೀವ್ರ ಟೀಕೆಗೆ ಕಾರಣವಾಯಿತು. ಆ ಸಮಯದಲ್ಲಿ ನನಗೆ ಅನಿಸಿದ್ದನ್ನು ನಾನು ಮಾಡಿದ್ದೇನೆ ಮತ್ತು ಯಾರೂ ಏನು ಯೋಚಿಸುತ್ತಾರೆಂದು ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಫರ್ಹಾನ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ಹ್ಯಾರಿಸ್ ರೌಫ್ ಬಗ್ಗೆ ಹೇಳುವುದಾದರೆ, ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಜೆಟ್‌ ವಿಮಾನಗಳು ನೆಲಕ್ಕೆ ಅಪ್ಪಳಿಸಿದಂತೆ 6-0 ಎಂಬ ಸನ್ನೆಯನ್ನು ಮಾಡಿದರು. ಆಪರೇಷನ್ ಸಿಂಧೂರ ಸಮಯದಲ್ಲಿ ಆರು ಭಾರತೀಯ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ಪಾಕಿಸ್ತಾನ ಸರ್ಕಾರ ಹೇಳಿಕೊಂಡಿದೆ. ಆದರೆ, ವಾಸ್ತವಕ್ಕೆ ಇದು ಬಹಳ ದೂರ ಇದೆ ಎಂಬುದು ಜಗತ್ತಿಗೆ ತಿಳಿದಿರುವ ಸಂಗತಿಯೇನಲ್ಲ. ಹ್ಯಾರಿಸ್ ತೋರಿದ ವರ್ತನೆಯು ಪಾಕ್​ ವಾದವನ್ನು ನೆನಪಿಸುತ್ತದೆ ಎಂಬ ಟೀಕೆಗಳು ಇದ್ದವು. ಇದಲ್ಲದೆ, ಅವರು ಮೈದಾನದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮ ಮತ್ತು ಶುಭಮನ್ ಗಿಲ್ ಅವರೊಂದಿಗೆ ವಾಗ್ವಾದಕ್ಕೂ ಇಳಿದರು.

ಅವರಿಬ್ಬರ ಈ ವರ್ತನೆಯಿಂದ ಅಸಮಾಧಾನಗೊಂಡಿರುವ ಬಿಸಿಸಿಐ, ಪ್ರಚೋದನಾಕಾರಿ ಸನ್ನೆ ಮಾಡಿದ್ದಕ್ಕೆ ಅವರಿಬ್ಬರ ವಿರುದ್ಧ ಕ್ರಮಕೈಗೊಳ್ಳುವಂತೆ ಐಸಿಸಿಗೆ ದೂರು ಸಲ್ಲಿಸಿದೆ. ಈ ವಿಚಾರದಲ್ಲಿ ಐಸಿಸಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)