ದುಬೈ: ಐಪಿಎಲ್ನ ಪಂಜಾಬ್ ಕಿಂಗ್ಸ್ ತಂಡದ ಮಾಜಿ ಕ್ಯಾಪ್ಟನ್ ಮತ್ತು ಕೋಚ್ ಆಗಿದ್ದ ವೀರೇಂದರ್ ಸೆಹವಾಗ್ ಅವರು, ಪಂಜಾಬ್ ತಂಡ ತನ್ನ ಆಟಗಾರರನ್ನು ಮತ್ತೆ ಮತ್ತೆ ಬದಲಿಸುವ ಅಭ್ಯಾಸವನ್ನು ತಿದ್ದುಕೊಳ್ಳಬೇಕು ಎಂದು ಹೇಳಿದ್ದಾರೆ. "ಪಂಜಾಬ್ ಕಿಂಗ್ಸ್ ತನ್ನ 11 ಆಟಗಾರರನ್ನು ಬದಲಿಸುವಷ್ಟು ಬಾರಿ ಕೂಸುಗಳು ಡೈಪರ್ ಕೂಡ ಬದಲಾಯಿಸುವುದಿಲ್ಲ" ಎಂದು ಉದ್ಗರಿಸಿದ್ದಾರೆ.
ಮಂಗಳವಾರ ದುಬೈನಲ್ಲಿ ಐಪಿಎಲ್ನ ಎರಡನೇ ಭಾಗದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ನ ಪಂದ್ಯ ನಡೆಯುವ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ್ದ ಸೆಹವಾಗ್, ಪಂಜಾಬ್ ತಂಡ ತನ್ನ ಬೌಲಿಂಗ್ ಅಟ್ಯಾಕನ್ನು ಸಶಕ್ತಗೊಳಿಸಬೇಕು ಎಂದು ಸಲಹೆ ನೀಡಿದ್ದರು. ಜೊತೆಗೇ, ಈ ತಂಡ ಮೊದಲ ಏಳು ಆಟಗಳಲ್ಲಿ ತನ್ನ ಬೌಲಿಂಗ್ಅನ್ನು ಅನೇಕ ಬಾರಿ ಬದಲಾಯಿಸಿದೆ. ಅವರು ಯಾರನ್ನು ಆಡಿಸುತ್ತಾರೆ, ಹೇಗೆ ಆಡುತ್ತಾರೆ ಎಂಬುದು ಬಹಳ ಮಹತ್ವ ಹೊಂದಿದೆ. ತಮ್ಮ ಆಟಗಾರರನ್ನು ಆಗಾಗ್ಗೆ ಬದಲಾಯಿಸುತ್ತಿರುವುದರಿಂದಲೇ ಪಂಜಾಬ್ ಕಿಂಗ್ಸ್ ತಂಡಕ್ಕೆ ಐಪಿಎಲ್ನಲ್ಲಿ ನಿಯಮಿತವಾಗಿ ಪಂದ್ಯಗಳನ್ನು ಗೆಲ್ಲುವುದು ಕಷ್ಟವಾಗುತ್ತಿದೆ ಎಂದು ಸೆಹವಾಗ್ ಹೇಳಿದ್ದರು.
ಈ ನಡುವೆ, ಐಪಿಎಲ್ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್, 6ನೇ ಸ್ಥಾನದಲ್ಲಿದ್ದ ರಾಜಸ್ತಾನ್ ರಾಯಲ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ 2 ರನ್ಗಳಿಂದ ಸೋಲಪ್ಪಿದೆ. ಈ ಸೋಲಿನೊಂದಿಗೆ ಪಂಜಾಬ್ ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣಗೊಂಡಿದ್ದರೆ, ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. (ಏಜೆನ್ಸೀಸ್)