ಕ್ರೀಡೆ

ಆಸ್ಟ್ರೇಲಿಯಾದ ಭದ್ರಕೋಟೆ ಬ್ರಿಸ್ಬೇನ್, ಭಾರತದ ಮುಂದಿದೆ ಭಾರಿ ಸವಾಲು

ಬ್ರಿಸ್ಬೇನ್: ಅಡಿಲೇಡ್‌ನಲ್ಲಿ 36 ರನ್‌ಗೆ ಕುಸಿದ ಹೊರತಾಗಿ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯುದ್ದಕ್ಕೂ ಅತ್ಯುತ್ತಮ ನಿರ್ವಹಣೆ ತೋರಿರುವ ಭಾರತ ತಂಡ ಇದೀಗ ನಿರ್ಣಾಯಕ ಕಾದಾಟಕ್ಕೆ ಸಜ್ಜಾಗುತ್ತಿದೆ. ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿದ ನಾಯಕ ವಿರಾಟ್ ಕೊಹ್ಲಿ ಗೈರು ಮತ್ತು ಕೆಲ ಪ್ರಮುಖ ಆಟಗಾರರ ಗಾಯದ ಸಮಸ್ಯೆಯ ನಡುವೆಯೂ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾಕ್ಕೆ ಸೆಡ್ಡು ಹೊಡೆಯುವಲ್ಲಿ ಯಶಸ್ವಿಯಾಗಿರುವುದು ಕಡಿಮೆ ಸಾಧನೆ ಏನಲ್ಲ. ಈ ಬಾರಿ ಗಾಬಾ ಮೈದಾನದಲ್ಲಿ ಅಜಿಂಕ್ಯ ರಹಾನೆ ಪಡೆಗೆ ಮತ್ತೊಂದು ದೊಡ್ಡ ಸವಾಲು ಎದುರಾಗಲಿದೆ. ಅದುವೇ, ಆಸ್ಟ್ರೇಲಿಯಾ ತಂಡದ 33 ವರ್ಷಗಳ ಅಜೇಯ ದಾಖಲೆಯನ್ನು ಭೇದಿಸುವುದು.

ಸದ್ಯ 1-1 ಸಮಬಲದಲ್ಲಿರುವ ಸರಣಿಯಲ್ಲಿ ಶುಕ್ರವಾರದಿಂದ ನಿರ್ಣಾಯಕ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದ್ದು, ಆತಿಥೇಯರ ಪಾರುಪತ್ಯವನ್ನೂ ಮುರಿಯುವ ಮೂಲಕ 2018-19ರ ಪ್ರವಾಸದ ಸರಣಿ ಗೆಲುವಿನ ದಾಖಲೆಯನ್ನು ಪುನರಾವರ್ತಿಸಬೇಕಾಗಿದೆ.

ಆಸೀಸ್ ತಂಡ ಬ್ರಿಸ್ಬೇನ್‌ನಲ್ಲಿ ಕೊನೆಯ ಬಾರಿ ಸೋತಿರುವುದು 1988ರಲ್ಲಿ. ಅದು ವಿರಾಟ್ ಕೊಹ್ಲಿ ಜನಿಸಿದ ವರ್ಷ! ನಂತರ ಬ್ರಿಸ್ಬೇನ್‌ನಲ್ಲಿ ಆಡಿರುವ 31 ಟೆಸ್ಟ್‌ಗಳಲ್ಲಿ 24ರಲ್ಲಿ ಜಯಿಸುವ ಆಸೀಸ್, 7ರಲ್ಲಿ ಡ್ರಾಕ್ಕೆ ತೃಪ್ತಿಪಟ್ಟಿದೆ. ಇದೇ ಅವಧಿಯಲ್ಲಿ ಭಾರತವನ್ನೂ 2 ಬಾರಿ ಸೋಲಿಸಿ, ಒಮ್ಮೆ ಡ್ರಾ ಸಾಧಿಸಿದೆ.

2013ರಿಂದ ಬ್ರಿಸ್ಬೇನ್‌ನಲ್ಲಿ ಆಡಿರುವ ಎಲ್ಲ 7 ಪಂದ್ಯಗಳಲ್ಲೂ ಗೆದ್ದಿದೆ. 2019ರಲ್ಲಿ ಆಡಿದ ಎರಡೂ ಟೆಸ್ಟ್‌ಗಳಲ್ಲಿ ಇನಿಂಗ್ಸ್ ಗೆಲುವು ಕಂಡಿತ್ತು. ಇತ್ತ, ಭಾರತ ತಂಡ ಬ್ರಿಸ್ಬೇನ್‌ನಲ್ಲಿ ಇದುವರೆಗೆ ಒಂದೂ ಗೆಲುವು ಕಂಡಿಲ್ಲ. ಆಡಿದ 6 ಟೆಸ್ಟ್‌ಗಳಲ್ಲಿ 5ರಲ್ಲಿ ಸೋತಿದ್ದು, 1ರಲ್ಲಿ ಡ್ರಾ ಸಾಧಿಸಿದೆ. ಆಸ್ಟ್ರೇಲಿಯಾದಲ್ಲೇ ಅತ್ಯಂತ ಬೌನ್ಸಿ ಪಿಚ್ ಬ್ರಿಸ್ಬೇನ್‌ನಲ್ಲಿದೆ. ಹೀಗಾಗಿ ಪ್ರವಾಸಿ ತಂಡಗಳಿಗೆ ಇಲ್ಲಿ ಆಡುವುದು ಯಾವಾಗಲೂ ಕಠಿಣ ಸವಾಲಾಗಿರುತ್ತದೆ. ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮಾತ್ರ ಇಲ್ಲಿ ಆಸೀಸ್‌ಗೆ ಸೋಲುಣಿಸುವಲ್ಲಿ ಸಲವಾಗಿವೆ.

ಈ ಅಂಕಿ-ಅಂಶಗಳೇನೇ ಇದ್ದರೂ, ಅಡಿಲೇಡ್ ಸೋಲಿನ ಬಳಿಕ ಮೆಲ್ಬೋರ್ನ್, ಸಿಡ್ನಿಯಲ್ಲಿ ದಿಟ್ಟ ನಿರ್ವಹಣೆ ತೋರಿರುವ ರಹಾನೆ ಸಾರಥ್ಯದ ‘ನವಭಾರತ’, ಬ್ರಿಸ್ಬೇನ್ ಅಗ್ನಿಪರೀಕ್ಷೆಯನ್ನೂ ಗೆದ್ದುಬರುವ ನಿರೀಕ್ಷೆ ಭಾರತೀಯ ಕ್ರಿಕೆಟ್ ಪ್ರೇಮಿಗಳದ್ದಾಗಿದೆ.

ತರಬೇತಿ ಆರಂಭಿಸಿದ ಭಾರತ

ಗಾಯದ ಸಮಸ್ಯೆ ನಡುವೆ ಸಮರ್ಥ ಆಡುವ ಹನ್ನೊಂದರ ಬಳಗವನ್ನು ಕಣಕ್ಕಿಳಿಸಲು ಪರದಾಡುತ್ತಿರುವ ಭಾರತ ತಂಡ ಬುಧವಾರ ಗಾಬಾದಲ್ಲಿ ಅಭ್ಯಾಸ ಆರಂಭಿಸಿತು. ರೋಹಿತ್ ಶರ್ಮ, ಶುಭಮಾನ್ ಗಿಲ್, ನಾಯಕ ಅಜಿಂಕ್ಯ ರಹಾನೆ ಮತ್ತಿತರರು ಅಭ್ಯಾಸ ನಡೆಸಿದರು. ತಂಡದ ವೇಗಿಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಗಾಯದಿಂದಾಗಿ ಅಂತಿಮ ಟೆಸ್ಟ್‌ಗೆ ಅಲಭ್ಯರಾಗಿರುವ ವೇಗಿ ಜಸ್‌ಪ್ರೀತ್ ಬುಮ್ರಾ ಹಾಜರಿದ್ದರೂ, ಅಭ್ಯಾಸ ನಡೆಸಲಿಲ್ಲ.

ಗಾಯಗಳಿಗೆ ಐಪಿಎಲ್ ಕಾರಣ ಎಂದ ಲ್ಯಾಂಗರ್

ಭಾರತ-ಆಸೀಸ್ ತಂಡಗಳು ಎದುರಿಸುತ್ತಿರುವ ಗಾಯದ ಸಮಸ್ಯೆಗಳಿಗೆ ಆತಿಥೇಯ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್, ಐಪಿಎಲ್ ಟೂರ್ನಿಯನ್ನು ದೂರಿದ್ದಾರೆ. ಐಪಿಎಲ್ ಟೂರ್ನಿ ಈ ಬಾರಿ ತಡವಾಗಿ ನಡೆದ ಕಾರಣ ಈ ಮಹತ್ವದ ಸರಣಿಗೆ ಮುನ್ನ ಆಟಗಾರರು ಹೆಚ್ಚಿನ ದಣಿವು ಎದುರಿಸಬೇಕಾಯಿತು ಎಂದು ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ. ‘ಐಪಿಎಲ್ ಟೂರ್ನಿಯನ್ನು ನಾನೂ ಇಷ್ಟಪಡುತ್ತೇನೆ. ನಮ್ಮ ದೇಶದ ಕ್ರಿಕೆಟಿಗರ ಬೆಳವಣಿಗೆಗೆ ಕೌಂಟಿ ಕ್ರಿಕೆಟ್‌ನಂತೆ ಐಪಿಎಲ್ ಕೂಡ ನೆರವಾಗಿದೆ. ಆದರೆ ಈ ಬಾರಿ ಟೂರ್ನಿ ನಡೆದ ಸಮಯ ಸರಿಯಾಗಿರಲಿಲ್ಲ. ಇದರಿಂದ ಉಭಯ ತಂಡಗಳೂ ಗಾಯದ ಸಮಸ್ಯೆ ಎದುರಿಸುವಂತಾಯಿತು’ ಎಂದು ಲ್ಯಾಂಗರ್ ಹೇಳಿದ್ದಾರೆ.

ಆಸೀಸ್‌ಗೂ ಗಾಯದ ಸಮಸ್ಯೆ

ಭಾರತ ಮಾತ್ರವಲ್ಲ ಆತಿಥೇಯ ಆಸೀಸ್ ಕೂಡ ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ಗಾಯದ ಸಮಸ್ಯೆಯಲ್ಲಿ ಸಿಲುಕಿದೆ. ಆರಂಭಿಕ ವಿಲ್ ಪುಕೋವ್‌ಸ್ಕಿ ಭುಜದ ಗಾಯದಿಂದ ಬಳಲುತ್ತಿದ್ದು, ಬ್ರಿಸ್ಬೇನ್ ಟೆಸ್ಟ್‌ಗೆ ಫಿಟ್ ಆಗುವುದು ಅನುಮಾನವೆನಿಸಿದೆ. ಅವರು ಆಡದಿದ್ದರೆ ಮಾರ್ಕಸ್ ಹ್ಯಾರಿಸ್ ಕಣಕ್ಕಿಳಿಯುವ ನಿರೀಕ್ಷೆ ಇದೆ. ಮತ್ತೋರ್ವ ಆರಂಭಿಕ ಡೇವಿಡ್ ವಾರ್ನರ್ ಗಾಯದಿಂದಾಗಿ ಸರಣಿಯ ಮೊದಲೆರಡು ಟೆಸ್ಟ್ ತಪ್ಪಿಸಿಕೊಂಡಿದ್ದರು.