ಕ್ರೀಡೆ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಆಸೀಸ್​ಗೆ ಅಗ್ರಸ್ಥಾನ: ಭಾರತಕ್ಕೆ ಯಾವಸ್ಥಾನ?

ನವದೆಹಲಿ: ಪಾಕಿಸ್ತಾನ ವಿರುದ್ಧದ ಮೂರು ಟೆಸ್ಟ್‌ಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ನಂತರ ಆಸ್ಟ್ರೇಲಿಯಾ ಅದೇ ವೇಗವನ್ನು ಮುಂದುವರೆಸಿದ್ದು, ಇತ್ತೀಚೆಗೆ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ಅನ್ನು 10 ವಿಕೆಟ್‌ಗಳಿಂದ ಸೋಲಸಿತ್ತು. ಇದರೊಂದಿಗೆ ಪಂದ್ಯ ಮೂರು ದಿನಗಳಲ್ಲಿ ಕೊನೆಗೊಂಡಿತ್ತು. ಇದರೊಂದಿಗೆ ಆಸೀಸ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ 2023-2025) ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಲುಪಿದೆ. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಟ್ರಾವಿಸ್ ಹೆಡ್ ‘ಪಂದ್ಯದ ಆಟಗಾರ’ ಪ್ರಶಸ್ತಿಗೆ ಭಾಜನರಾದರು.

ಪ್ರಸ್ತುತ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಆಸೀಸ್ ಒಂಬತ್ತು ಟೆಸ್ಟ್ ಪಂದ್ಯಗಳನ್ನು ಆಡಿದೆ. ಆರು ಗೆಲುವು, ಎರಡು ಸೋಲು ಮತ್ತು ಒಂದು ಡ್ರಾದೊಂದಿಗೆ ಆಕ್ರಮಣಕಾರಿ ತಂಡವಾಗಿಯೇ ಗುರುತಿಸಿಕೊಂಡಿದೆ. ಒಟ್ಟಾರೆ ಶೇ.61.11ರಷ್ಟು ಯಶಸ್ಸಿನೊಂದಿಗೆ ಈ ತಂಡ ಮೊದಲ ಸ್ಥಾನದಲ್ಲಿದೆ.

ಇದರೊಂದಿಗೆ ಟೀಂ ಇಂಡಿಯಾ ಎರಡನೇ ಸ್ಥಾನಕ್ಕೆ ಕುಸಿದಿದೆ. ಭಾರತ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು, ಒಂದು ಸೋಲು ಮತ್ತು ಒಂದು ಡ್ರಾದೊಂದಿಗೆ 54.16 ಶೇಕಡಾ ಸಾಧನೆ ದಾಖಲಿಸಿದೆ. ದಕ್ಷಿಣ ಆಫ್ರಿಕಾ (ಶೇ. 50), ನ್ಯೂಜಿಲೆಂಡ್ (ಶೇ. 50) ಮತ್ತು ಬಾಂಗ್ಲಾದೇಶ (ಶೇ. 50) ನಂತರದ ಸ್ಥಾನಗಳಲ್ಲಿ ಮುಂದುವರಿದಿವೆ.

ಟೀಂ ಇಂಡಿಯಾಗೆ ಇಂಗ್ಲೆಂಡ್ ಸರಣಿ ನಿರ್ಣಾಯಕ: ಮೂರನೇ ಬಾರಿಗೆ ಡಬ್ಲ್ಯೂಟಿಸಿ ಫೈನಲ್ ತಲುಪಲು ಸೀಸನ್​ ಪೂರ್ತಿಯಾಗುವ ವೇಳೆಗೆ ಮೊದಲ ಎರಡು ಸ್ಥಾನಗಳಲ್ಲಿ ನಿಲ್ಲಬೇಕು. ಮುಂದೆ ಭಾರತ ಕಠಿಣ ಸವಾಲು ಎದುರಿಸಲಿದೆ. ಟೀಂ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಸರಣಿಗಳನ್ನು ಆಡಲಿದೆ. ಈ ಸರಣಿಯಲ್ಲಿ ಹೆಚ್ಚು ಗೆಲುವು ದಾಖಲಿಸಿದರೆ ಮಾತ್ರ ಭಾರತಕ್ಕೆ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

ಸದ್ಯ ಈ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಏಳನೇ ಸ್ಥಾನದಲ್ಲಿದೆ. ಐದು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಎರಡು ಸೋಲು. ಒಂದು ಡ್ರಾದೊಂದಿಗೆ ಒಂಬತ್ತು ಅಂಕಗಳನ್ನು ಗಳಿಸಿದೆ. ಆ ತಂಡ ಶೇ.15ಕ್ಕೆ ಕುಸಿದಿದೆ.