ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್  
ಏಷ್ಯನ್​ ಗೇಮ್ಸ್

ಏಷ್ಯನ್ ಗೇಮ್ಸ್ ಕುಸ್ತಿಯಲ್ಲಿ ಇತಿಹಾಸ ಬರೆದ ಅಮನ್: 57 KG ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಸ್ವರ್ಣ ಪದಕ, 20ಕ್ಕೇರಿದ ಚಿನ್ನದ ಬೇಟೆ! Aman Sehrawat

ಭಾರತೀಯ ಕುಸ್ತಿ ಇತಿಹಾಸದಲ್ಲಿ ಈ ಜಯವು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ, ಏಕೆಂದರೆ ಪುರುಷರ 57 ಕೆಜಿ ವಿಭಾಗದಲ್ಲಿ ಭಾರತೀಯ ಕುಸ್ತಿಪಟುವೊಬ್ಬ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು.

ಐಚಿ-ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ( Aman Sehrawat ) ಐತಿಹಾಸಿಕ ಸಾಧನೆ ಮಾಡಿದ್ದು, ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತದ ಚಿನ್ನದ ಪದಕದ ಸಂಖ್ಯೆ 20ಕ್ಕೇರಿದೆ. ಫೈನಲ್ ಪಂದ್ಯದಲ್ಲಿ ಉತ್ತರ ಕೊರಿಯಾದ ಚಾಂಗ್ ಸೋಂಗ್ ಹಾನ್ ಅವರನ್ನು 11-7 ಅಂತರದಿಂದ ಮಣಿಸಿದ ಅಮನ್, ದೇಶದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ.

ಭಾರತೀಯ ಕುಸ್ತಿ ಇತಿಹಾಸದಲ್ಲಿ ಈ ಜಯವು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ, ಏಕೆಂದರೆ ಪುರುಷರ 57 ಕೆಜಿ ವಿಭಾಗದಲ್ಲಿ ಭಾರತೀಯ ಕುಸ್ತಿಪಟುವೊಬ್ಬ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು. ಈ ತೂಕದ ವಿಭಾಗದಲ್ಲಿ ಭಾರತವು ಈ ಹಿಂದೆ ಪದಕಗಳನ್ನು ಗೆದ್ದಿದ್ದರೂ (ಉದಾಹರಣೆಗೆ 2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಅಮನ್ ಪಡೆದಿದ್ದ ಕಂಚು), ಚಿನ್ನದ ಪದಕ ಮಾತ್ರ ದಕ್ಕಿರಲಿಲ್ಲ.

ಈ ಐತಿಹಾಸಿಕ ಹಾದಿಯಲ್ಲಿ ಅಮನ್ ಅತ್ಯಂತ ಅದ್ಭುತ ಪ್ರದರ್ಶನ ನೀಡುತ್ತಾ ಫೈನಲ್‌ ಪ್ರವೇಶಿಸಿದ್ದರು. ಪ್ರಿ-ಕ್ವಾರ್ಟರ್ ಹಂತದಲ್ಲಿ ಜಪಾನ್​ನ ಯಮಾತೊ ಒಗಾವಾ ವಿರುದ್ಧ 20-0 ಅಂತರದ ಭರ್ಜರಿ ಜಯ ಸಾಧಿಸಿದ ಅವರು, ಕ್ವಾರ್ಟರ್ ಫೈನಲ್‌ನಲ್ಲಿ ಕಜಕಿಸ್ಥಾನದ ನುರ್ದಾನತ್ ಐತಾನೋವ್ ಅವರನ್ನು 12-1 ಅಂತರದಿಂದ ಸುಲಭವಾಗಿ ಮಣಿಸಿದ್ದರು.

ಆದರೆ ಸೆಮಿಫೈನಲ್ ಪಂದ್ಯವು ಅವರಿಗೆ ತೀವ್ರ ಕಠಿಣ ಸವಾಲನ್ನು ಒಡ್ಡಿತ್ತು. ಮೊದಲಾರ್ಧದ ಮುಕ್ತಾಯದ ವೇಳೆಗೆ ತಜಿಕಿಸ್ತಾನದ ಅಯಾಲ್ ಬೆಲೋಲ್ಯುಬ್ಸ್ಕಿ ವಿರುದ್ಧ 2-6 ಹಿನ್ನಡೆಯಲ್ಲಿದ್ದ ಅಮನ್, ದ್ವಿತೀಯಾರ್ಧದಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿ 12 ಅಂಕಗಳನ್ನು ಕಲೆಹಾಕುವ ಮೂಲಕ 14-8ರ ಅಂತರದಿಂದ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟರು.

ಈ ಚಾರಿತ್ರಿಕ ಗೆಲುವಿನೊಂದಿಗೆ ಅಮನ್ ತಮ್ಮ ಅಂತಾರಾಷ್ಟ್ರೀಯ ಸಾಧನೆಗಳ ಪಟ್ಟಿಗೆ ಮತ್ತೊಂದು ಗರಿಮೆ ಸೇರಿಸಿಕೊಂಡಿದ್ದಾರೆ. ಅವರು ಈಗಾಗಲೇ ಪ್ಯಾರಿಸ್ 2024 ಒಲಿಂಪಿಕ್ಸ್‌ನಲ್ಲಿ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ವಿಜೇತರಾಗಿದ್ದಾರೆ. ಇನ್ನು ಇದೇ ಏಷ್ಯನ್ ಗೇಮ್ಸ್‌ನಲ್ಲಿ ಸುಜೀತ್ ಕಲ್ಕಲ್ ಕೂಡ ಪುರುಷರ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಕುಸ್ತಿ ಅಭಿಯಾನವನ್ನು ಮತ್ತಷ್ಟು ಬೆಳಗಿಸಿದ್ದಾರೆ.

20ಕ್ಕೇರಿದ ಚಿನ್ನದ ಬೇಟೆ

ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಒಟ್ಟಾರೆಯಾಗಿ 5ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತವು ಈ ಕ್ರೀಡಾಕೂಟದಲ್ಲಿ ಅತ್ಯುತ್ತಮ ಹೋರಾಟ ನಡೆಸಿ ಒಟ್ಟು 82 ಪದಕಗಳನ್ನು ತನ್ನಾಗಿಸಿಕೊಂಡಿದೆ. 82 ಪದಕಗಳಲ್ಲಿ 20 ಚಿನ್ನ, 26 ಬೆಳ್ಳಿ ಮತ್ತು 36 ಕಂಚಿನ ಪದಕಗಳು ಸೇರಿವೆ, (ಏಜೆನ್ಸೀಸ್​).