ಕೋಲ್ಕತ: ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಪದಕ ಜಯಿಸಿ ಇತಿಹಾಸ ಬರೆದಿದ್ದ ಭಾರತದ ಅಥ್ಲೆಟಿಕ್ಸ್ ತಾರೆ ಸ್ವಪ್ನಾ ಬರ್ಮನ್ ಅವರು ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಲಾಕ್ಡೌನ್ ನಡುವೆ ಹೊಸ ಮನೆಯನ್ನು ನಿಮಿರ್ಸುತ್ತಿದ್ದ ಪಶ್ಚಿಮ ಬಂಗಾಳದ ಹೆಪ್ಟಾಥ್ಲಾನ್ ತಾರೆ ಸ್ವಪ್ನಾ, ಅವರ ಮನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರು ಅಕ್ರಮವಾಗಿ ಮರದ ದಿಮ್ಮಿಗಳನ್ನು ಇಟ್ಟುಕೊಂಡಿರುವ ಆರೋಪ ಎದುರಿಸಿದ್ದಾರೆ.
ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಕಾಲಿಯಗಂಜ್ನಲ್ಲಿ 24 ವರ್ಷದ ಸ್ವಪ್ನಾ ಬರ್ಮನ್, ನಿಮಿರ್ಸುತ್ತಿದ್ದ ಮನೆಗೆ ವೈಕುಂಠಪುರ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮವಾಗಿ ಇಟ್ಟುಕೊಂಡಿದ್ದರು ಎನ್ನಲಾದ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ. ಅವರಿಗೆ ನೋಟಿಸ್ ಕೂಡ ನೀಡಿರುವ ಅಧಿಕಾರಿಗಳು, ಉತ್ತರಿಸಲು 30 ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ ಸ್ವಪ್ನಾ ಬರ್ಮನ್ ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ ಗೊಂದಲದ ನಡುವೆ ಬಿಬಿಎಲ್ ವೇಳಾಪಟ್ಟಿ ಸಿದ್ಧ!
ಸರ್ಚ್ ವಾರಂಟ್ ಇದ್ದರೂ ನಮಗೆ ಮನೆಯನ್ನು ಪ್ರವೇಶಿಸಲು ಸ್ವಪ್ನಾ ಬರ್ಮನ್ ಅವರ ಕುಟುಂಬ ಅಡ್ಡಿ ಪಡಿಸಿತ್ತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈಗ ಇರುವ ಅವರ ಮನೆಯ ಪಕ್ಕದಲ್ಲೇ ಹೊಸ ಮನೆಯನ್ನು ನಿಮಿರ್ಸಲಾಗುತ್ತಿದೆ. ಅವರ ಬಳಿ ಇದ್ದ ಮರದ ದಿಮ್ಮಿಗಳಿಗೆ ಸೂಕ್ತ ದಾಖಲೆಗಳು ಇರಲಿಲ್ಲ ಎಂದು ಅರಣ್ಯಾಧಿಕಾರಿಗಳು ದೂರಿದ್ದಾರೆ. ಆದರೆ ಸ್ವಪ್ನಾ ಬರ್ಮನ್ ಅವರು ನಾವು ಆ ಮರದ ದಿಮ್ಮಿಗಳನ್ನು ಕದ್ದು ತಂದಿದ್ದಲ್ಲ. ಮನೆಗೆ ಸೂಕ್ತ ಉಪಕರಣಗಳನ್ನು ಸಿದ್ಧಪಡಿಸುವ ಸಲುವಾಗಿ ಸ್ಥಳಿಯ ವ್ಯಕ್ತಿಯಿಂದ 3 ಮರದ ದಿಮ್ಮಿಗಳನ್ನು ಖರೀದಿಸಿದ್ದೆವು. ಇಲ್ಲಿನ ತೀಸ್ತಾ ನದಿಯಲ್ಲಿ ಮರದ ದಿಮ್ಮಿಗಳು ಹರಿದು ಬರುತ್ತವೆ. ಅವುಗಳನ್ನು ಸ್ಥಳಿಯರು ತೆಗೆದಿಟ್ಟು ಬಳಸಿಕೊಳ್ಳುತ್ತಾರೆ. ನಾವು ಸ್ಥಳಿಯ ವ್ಯಕ್ತಿಯಿಂದ ಸೂಕ್ತ ಬೆಲೆ ನೀಡಿಯೇ ಅವುಗಳನ್ನು ಖರೀದಿಸಿದ್ದೇವೆ. ಅಲ್ಲದೆ ಅದರ ಶೇ. 50ರಷ್ಟು ಹಣವನ್ನು ಮಾತ್ರ ನೀಡಲಾಗಿದೆ. ಕದ್ದು ತಂದಿದ್ದಾಗಿದ್ದರೆ ನಾನೇಕೆ ಅದನ್ನು ಮನೆಯಲ್ಲಿಟ್ಟುಕೊಂಡು ನನ್ನ ವರ್ಚಸ್ಸು ಕೆಡಿಸಿಕೊಳ್ಳಬೇಕಾಗಿತ್ತು ಎಂದು ಸ್ವಪ್ನಾ ಬರ್ಮನ್ ಅಳಲು ತೋಡಿಕೊಂಡಿದ್ದಾರೆ.
2018ರ ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಪದಕ ಜಯಿಸುವ ಮೂಲಕ ಹೆಪ್ಟಾಥ್ಲಾನ್ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿದ್ದ ಸ್ವಪ್ನಾ ಬರ್ಮನ್, ಅರ್ಜುನ ಪ್ರಶಸ್ತಿ ಪುರಸತೆಯೂ ಆಗಿದ್ದಾರೆ. ಅವರ ತಂದೆ ರಿಕ್ಷಾ ಡೆವರ್ ಆಗಿದ್ದರೆ, ತಾಯಿ ಸ್ಥಳಿಯ ಚಹಾದ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಾರೆ. ಸ್ವಪ್ನಾ ಅವರು ಕಾಲಿನಲ್ಲಿ ತಲಾ 6 ಬೆರಳು ಹೊಂದಿರುವ ಕಾರಣದಿಂದಲೂ ಗಮನ ಸೆಳೆದಿದ್ದರು. ಇದಕ್ಕಾಗಿ ಅವರಿಗೆ ವಿಶೇಷ ಶೂಗಳನ್ನು ಕಂಪನಿಯೊಂದು ತಯಾರಿಸಿಕೊಟ್ಟಿತ್ತು.
ರಾಜಕೀಯ ತಿರುವು?
ಸ್ವಪ್ನಾ ಅವರು ಇತ್ತೀಚೆಗೆ ಬಿಜೆಪಿ ಪಕ್ಕೆ ಹತ್ತಿರವಾಗಿದ್ದಾರೆ. ಹೀಗಾಗಿ ಅವರಿಗೆ ತೊಂದರೆ ನೀಡುವ ಸಲುವಾಗಿಯೇ ರಾಜ್ಯದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ನ ಕುಮ್ಮಕ್ಕಿನಿಂದ ಈ ದಾಳಿ ನಡೆದಿದೆ ಎಂದು ಸ್ಥಳಿಯ ಬಿಜೆಪಿ ನಾಯಕರು ದೂರಿದ್ದಾರೆ. ನಮ್ಮ ಪರಿಸರದಲ್ಲಿ ಎಲ್ಲರ ಮನೆಯಲ್ಲೂ ಮರದ ದಿಮ್ಮಿಗಳಿರುವುದು ಸಾಮಾನ್ಯ. ಆದರೆ ಸ್ವಪ್ನಾ ಅವರ ಮನೆಗೆ ಮಾತ್ರ ಯಾಕೆ ದಾಳಿ ನಡೆದಿದೆ ಎಂದು ಬಿಜೆಪಿ ನಾಯಕರೊಬ್ಬರು ಪ್ರಶ್ನಿಸಿದ್ದಾರೆ. ಸ್ವಪ್ನಾ ಅವರು ಕೂಡ, ಯಾರೋ ಉದ್ದೇಶಪೂರ್ವಕವಾಗಿ ಅರಣ್ಯಾಧಿಕಾರಿಗಳಿಂದ ನಮ್ಮ ಮನೆಗೆ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.