

ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ 3ನೇ ಬಾರಿ ತಂದೆಯಾಗಿದ್ದಾರೆ. 36 ವರ್ಷದ ಆಟಗಾರ ಡಿವಿಲಿಯರ್ಸ್ ಅವರ ಪತ್ನಿ ಡೇನಿಯಲ್ ಡಿವಿಲಿಯರ್ಸ್ 3ನೇ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಪುತ್ರರನ್ನು ಹೊಂದಿರುವ ಡಿವಿಲಿಯರ್ಸ್ ದಂಪತಿ ಈ ಬಾರಿ ಹೆಣ್ಣು ಮಗುವಿನ ಜನನದ ನಿರೀಕ್ಷೆಯಲ್ಲಿದ್ದಾರೆ. 'ಹಲೋ ಬೇಬಿ ಗರ್ಲ್' ಎಂದು ಡೇನಿಯಲ್ ಡಿವಿಲಿಯರ್ಸ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ದೀರ್ಘಕಾಲದ ಗೆಳತಿ ಡೇನಿಯಲ್ ಅವರಿಗೆ 2012ರಲ್ಲಿ ಆಗ್ರಾದ ಪ್ರೇಮಸೌಧ ತಾಜ್ಮಹಲ್ ಎದುರು ಪ್ರೇಮ ನಿವೇದನೆ ಮಾಡಿದ್ದ ಡಿವಿಲಿಯರ್ಸ್, 2013ರ ಮಾರ್ಚ್ನಲ್ಲಿ ವಿವಾಹವಾಗಿದ್ದರು. ದಂಪತಿಗೆ 2015ರಲ್ಲಿ ಮೊದಲ ಮತ್ತು 2017ರಲ್ಲಿ 2ನೇ ಪುತ್ರ ಜನಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ ಹೆಚ್ಚಿನ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಿದ್ದ ಎಬಿ ಡಿವಿಲಿಯರ್ಸ್, ಐಪಿಎಲ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿದು ಉತ್ತಮ ನಿರ್ವಹಣೆ ತೋರಿದರೆ, ಟಿ20 ವಿಶ್ವಕಪ್ನಲ್ಲಿ ಮತ್ತೆ ದಕ್ಷಿಣ ಆಫ್ರಿಕಾ ಪರ ಆಡುವ ಯೋಜನೆಯಲ್ಲಿದ್ದರು. ಆದರೆ ಐಪಿಎಲ್ ಅನಿದಿರ್ಷ್ಟಾವಧಿಗೆ ಮುಂದೂಡಲ್ಪಟ್ಟರೆ, ಟಿ20 ವಿಶ್ವಕಪ್ ಅನಿಶ್ಚಿತತೆಯಲ್ಲಿದೆ. ಈ ನಡುವೆ ಜುಲೈ 18ರಂದು ಅವರು ದಕ್ಷಿಣ ಆಫ್ರಿಕಾದ ವಿನೂತನ 3ಟಿ ಕ್ರಿಕೆಟ್ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.
ಶುಭಾಶಯ ಸಲ್ಲಿಸಿದ ಅನುಷ್ಕಾ ಶರ್ಮ
ಹೆಣ್ಣು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಡೇನಿಯಲ್ ಡಿವಿಲಿಯರ್ಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬೆನ್ನಲ್ಲೇ ಬಾಲಿವುಡ್ ನಟಿ ಅನುಷ್ಕಾ ಶರ್ಮ ಶುಭಾಶಯ ತಿಳಿಸಿದ್ದಾರೆ. ಅಭಿನಂದನೆಗಳು ಡೇನಿಯಲ್ ಮತ್ತು ಎಬಿ, 'ಎಂಥಾ ಶುಭ ಸುದ್ದಿ ನೀಡಿದ್ದೀರಿ' ಎಂದು ಅನುಷ್ಕಾ ಕಮೆಂಟ್ ಹಾಕಿದ್ದಾರೆ. ಅನುಷ್ಕಾ ಶರ್ಮ ಅವರ ಪತಿ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ಆರ್ಸಿಬಿಯಲ್ಲಿ ಸಹ-ಆಟಗಾರರಾಗಿದ್ದು, ಉತ್ತಮ ಸ್ನೇಹ ಹೊಂದಿದ್ದಾರೆ. ಎಬಿಡಿ ದಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಮತ್ತು 78 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆರ್ಸಿಬಿ ಪರ ಆಡುವ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದಾರೆ. ಮೈದಾನದ ಮೂಲೆಮೂಲೆಗೆ ಚೆಂಡು ಅಟ್ಟುವ ಸಾಮರ್ಥ್ಯದಿಂದಾಗಿ ಅವರು 'ಮಿಸ್ಟರ್ 360' ಬ್ಯಾಟ್ಸ್ಮನ್ ಎಂದೂ ಅವರು ಜನಪ್ರಿಯರು.