ಐಪಿಎಲ್​ ಗೊಂದಲದ ನಡುವೆ ಬಿಬಿಎಲ್​ ವೇಳಾಪಟ್ಟಿ ಸಿದ್ಧ!

bbl
Published on

ಮೆಲ್ಬೋರ್ನ್​: ಕರೊನಾ ಹಾವಳಿ ಮುಂದುವರಿದಿರುವ ನಡುವೆ ಆಸ್ಟ್ರೆಲಿಯಾದಲ್ಲಿ ವರ್ಷಾಂತ್ಯದ ಟಿ20 ಹಬ್ಬಕ್ಕೆ ವೇಳಾಪಟ್ಟಿ ಸಿದ್ಧಗೊಂಡಿದೆ. 10ನೇ ಆವೃತ್ತಿಯ ಬಿಗ್​ ಬಾಷ್​ ಲೀಗ್​ (ಬಿಬಿಎಲ್​) ಟಿ20 ಟೂರ್ನಿಯನ್ನು ಡಿಸೆಂಬರ್​ 3ರಿಂದ ಆಯೋಜಿಸಲು ಕ್ರಿಕೆಟ್​ ಆಸ್ಟ್ರೆಲಿಯಾ (ಸಿಎ) ಸಿದ್ಧವಾಗಿದ್ದು, 61 ಪಂದ್ಯಗಳ ವೇಳಾಪಟ್ಟಿಯನ್ನು ಬುಧವಾರ ಘೋಷಿಸಿದೆ. ಇದೇ ಸಮಯದಲ್ಲಿ ಭಾರತ ತಂಡ ಬಹುನಿರೀಕ್ಷಿತ ಆಸ್ಟ್ರೆಲಿಯಾ ಪ್ರವಾಸದಲ್ಲಿ ಇರುತ್ತದೆ ಎಂಬುದು ಗಮನಾರ್ಹ. ಅನಿದಿರ್ಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಐಪಿಎಲ್​ ಟೂನಿರ್ಯ ಭವಿಷ್ಯ ಇನ್ನೂ ಗೊಂದಲದಲ್ಲಿರುವ ನಡುವೆ ಬಿಬಿಎಲ್​ ವೇಳಾಪಟ್ಟಿಯನ್ನು ಸಿಎ ಸಿದ್ಧಪಡಿಸಿದೆ.

ಅಡಿಲೇಡ್​ನಲ್ಲಿ ನಡೆಯಲಿರುವ ಸ್ರೈಕರ್ಸ್​ ಮತ್ತು ರೆನೆಗೇಡ್ಸ್​ ತಂಡಗಳ ನಡುವಿನ ಪಂದ್ಯದ ಮೂಲಕ ಬಿಬಿಎಲ್​ಗೆ ಚಾಲನೆ ಸಿಗಲಿದೆ. ಬ್ರಿಸ್ಬೇನ್​ನಲ್ಲಿ ಭಾರತ-ಆಸ್ಟ್ರೆಲಿಯಾ ನಡುವಿನ ಮೊದಲ ಟೆಸ್ಟ್​ ಪಂದ್ಯದ ಮೊದಲ ದಿನದಾಟದಂದೇ ಈ ಪಂದ್ಯ ನಡೆಯಲಿದೆ. ಟೂನಿರ್ಯ ಫೈನಲ್​ ಪಂದ್ಯ 2021ರ ಫೆಬ್ರವರಿ 6ರಂದು ನಡೆಯಲಿದೆ. ಮಹಿಳೆಯರ ಬಿಬಿಎಲ್​ ಟೂರ್ನಿ ಅಕ್ಟೋಬರ್​ 17ರಿಂದ ನವೆಂಬರ್​ 29ರವರೆಗೆ ನಿಗದಿಯಾಗಿದ್ದು, ಒಟ್ಟು 59 ಪಂದ್ಯಗಳು ಇರಲಿವೆ. ಅಕ್ಟೋಬರ್​-ನವೆಂಬರ್​ನಲ್ಲಿ ಆಸ್ಟ್ರೆಲಿಯಾದಲ್ಲೇ ನಿಗದಿಯಾಗಿರುವ ಟಿ20 ವಿಶ್ವಕಪ್​ ಟೂನಿರ್ಯ ಭವಿಷ್ಯ ಇನ್ನೂ ಸ್ಪಷ್ಟವಾಗಿಲ್ಲ.

ಕೋವಿಡ್​-19 ಹಾವಳಿ ನಮ್ಮ ಬೇಸಗೆಯ ಕ್ರಿಕೆಟ್​ ಋತುವಿಗೆ ಅಡ್ಡಿಪಡುವ ಸಾಧ್ಯತೆ ಇದೆ. ಇದರ ನಡುವೆಯೂ ನಾವು 61 ಪಂದ್ಯಗಳ ಪೂರ್ಣ ಬಿಬಿಎಲ್​ ಆಯೋಜಿಸಲು ಬದ್ಧರಾಗಿದ್ದು, ಅದರ ವೇಳಾಪಟ್ಟಿಯನ್ನು ಇಂದು ಬಿಡುಗಡೆಗೊಳಿಸುತ್ತಿದ್ದೇವೆ. ಫೈವ್​ ಟೀಮ್ಸ್​ ಫೈನಲ್ಸ್​ ಫಾರ್ಮಾಟ್​ ಕೂಡ ಮರಳಲಿದೆ ಎಂದು ಸಿಎ ಪ್ರಕಟಣೆಯಲ್ಲಿ ತಿಳಿಸಿದೆ. ಬಿಬಿಎಲ್​ ಆರಂಭಗೊಂಡ ಬಳಿಕ ಮೊದಲ 8 ದಿನಗಳಲ್ಲಿ ರಾತ್ರಿಯ ವೇಳೆ ಪಂದ್ಯಗಳು ನಡೆಯಲಿವೆ. ಬಳಿಕ ಡಿಸೆಂಬರ್​ 11ರಿಂದ 15ರವರೆಗೆ ಅಡಿಲೇಡ್​ನಲ್ಲಿ ಭಾರತ-ಆಸ್ಟ್ರೆಲಿಯಾ ನಡುವೆ ಅಹರ್ನಿಶಿ ಟೆಸ್ಟ್​ ಪಂದ್ಯ ನಿಗದಿಯಾಗಿರುವ ಕಾರಣ, ರಾತ್ರಿಯ ವೇಳೆ ಬಿಬಿಎಲ್​ ಪಂದ್ಯಗಳು ನಡೆಯುವುದಿಲ್ಲ.

ಭಾರತ-ಆಸ್ಟ್ರೆಲಿಯಾ ನಡುವಿನ ಬಾರ್ಡರ್​-ಗಾವಸ್ಕರ್​ ಸರಣಿಯ 3ನೇ ಟೆಸ್ಟ್​ ಡಿಸೆಂಬರ್​ 26ರಿಂದ 30ರವರೆಗೆ ಮೆಲ್ಬೋರ್ನ್​ನಲ್ಲಿ ನಿಗದಿಯಾಗಿದ್ದರೆ, ಅಂತಿಮ ಟೆಸ್ಟ್​ ಪಂದ್ಯ ಜನವರಿ 3ರಿಂದ 7ರವರೆಗೆ ಸಿಡ್ನಿಯಲ್ಲಿ ನಡೆಯಲಿದೆ. ಆಸ್ಟ್ರೆಲಿಯಾದಲ್ಲಿ ಇದುವರೆಗೆ 9 ಸಾವಿರಕ್ಕೂ ಅಧಿಕ ಕರೊನಾ ವೈರಸ್​ ಪ್ರಕರಣಗಳು ದಾಖಲಾಗಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ. ಆಟಗಾರರು, ಅಧಿಕಾರಿಗಳು ಮತ್ತು ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದೇವೆ. ಸರ್ಕಾರದ ಮಾರ್ಗಸೂಚಿಯ ಅನ್ವಯ ಮುನ್ನಡೆಯಲಿದ್ದೇವೆ ಎಂದು ಕ್ರಿಕೆಟ್​ ಆಸ್ಟ್ರೆಲಿಯಾದ ಬಿಬಿಎಲ್​ ಮುಖ್ಯಸ್ಥ ಅಲಿಸ್ಟೈರ್​ ಡಬ್ಸನ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net