R Ashwin : ಕಳೆದ ಎರಡು ದಿನಗಳಿಂದ ನಾನು ತುಂಬಾ ಗೊಂದಲಕ್ಕೆ ಒಳಗಾಗಿದ್ದೇನೆ. ಏನು ಹೇಳಬೇಕು? ಹೇಗೆ ಪ್ರಾರಂಭಿಸಬೇಕೆಂಬುದು ನನಗೆ ತಿಳಿದಿಲ್ಲ. ನನ್ನ ಲೈಫ್ಟೈಮ್ ನೆಚ್ಚಿನ ಕ್ರಿಕೆಟಿಗನಿಗೆ ನಾನು ಗೌರವ ಅರ್ಪಿಸಬೇಕೇ? ಅಥವಾ ನಾನು ಅವನನ್ನು ಜೀವನ ಸಂಗಾತಿ ಎಂದು ಭಾವಿಸಬೇಕೆ? ಅಥವಾ ನಾನು ಮಹಿಳಾ ಅಭಿಮಾನಿ ಪ್ರೇಮ ಪತ್ರ ಬರೆಯಬೇಕೇ? ಇದಿಷ್ಟು ಟೀಮ್ ಇಂಡಿಯಾ ಮಾಜಿ ಸ್ಪಿನ್ ಮಾಂತ್ರಿಕ ಅಶ್ವಿನ್ ಕುರಿತು ಅವರ ಪತ್ನಿ ಪ್ರೀತಿ ಆಡಿದ ಭಾವುಕ ಮಾತುಗಳು.
ಅಶ್ವಿನ್ ಅವರು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದು ಗೊತ್ತೇ ಇದೆ. ಈ ಹಿನ್ನಲೆಯಲ್ಲಿ ಅವರ ಪತ್ನಿ ಪ್ರೀತಿ ಅವರು ಭಾವುಕ ಮಾತುಗಳನ್ನಾಡಿದ್ದಾರೆ. ಅಶ್ವಿನ್ ಅವರ ಪತ್ರಿಕಾಗೋಷ್ಠಿಯನ್ನು ನೋಡಿದಾಗ ಎಲ್ಲ ನೆನಪುಗಳು ಮರಳಿ ಬಂದವು. ಕಳೆದ 13 ರಿಂದ 14 ವರ್ಷಗಳಲ್ಲಿ ನಾವು ಅನೇಕ ವಿಷಯಗಳನ್ನು ಅನುಭವಿಸಿದ್ದೇವೆ. ದೊಡ್ಡ ಗೆಲುವುಗಳು, ಸರಣಿ ಶ್ರೇಷ್ಠ ಪ್ರಶಸ್ತಿಗಳು, ಸೋಲು ಎದುರಾದಾಗ ರೂಮಿನಲ್ಲಿ ಮೌನಕ್ಕೆ ಜಾರುವುದು, ಪಂದ್ಯಕ್ಕೆ ತಯಾರಿ ನಡೆಸುವಾಗ ಬೋರ್ಡಿನ ಮೇಲೆ ಬರೆಯುವುದು ಹೀಗೆ ಹಲವು ನೆನಪುಗಳು ಮನದಲ್ಲಿ ಮೂಡುತ್ತವೆ.
ಚಾಂಪಿಯನ್ಸ್ ಟ್ರೋಫಿ ಫೈನಲ್, ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಗೆಲುವು, ಸಿಡ್ನಿಯಲ್ಲಿ ಡ್ರಾ, ಗಬ್ಬಾದಲ್ಲಿ ಗೆಲುವು, ಟಿ20ಯಲ್ಲಿ ಪುನರಾಗಮನ ಇವೆಲ್ಲವುಗಳಿಂದ ನಾವು ಅನುಭವಿಸಿದ ಆನಂದ ವರ್ಣಿಸಲಾಗದು. ಅದೇ ಸಮಯದಲ್ಲಿ, ಸೋಲುಗಳಿಂದ ನಮ್ಮ ಹೃದಯಗಳು ಮುರಿದಾಗ ಭಯಾನಕ ಮೌನವು ಕೂಡ ನನಗೆ ನೆನಪಿದೆ.
ಆತ್ಮೀಯ ಅಶ್ವಿನ್, ಆರಂಭದಲ್ಲಿ ನನಗೆ ಕ್ರಿಕೆಟ್ ಕಿಟ್ ಬ್ಯಾಗ್ ಪ್ಯಾಕ್ ಮಾಡುವುದು ಹೇಗೆ ಎಂದು ತಿಳಿದಿರಲಿಲ್ಲ. ನಾನು ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ. ನೀವು ನನ್ನನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ್ದೀರಿ. ನೀವೂ ನನ್ನಲ್ಲಿ ಆಟದ ಪ್ರೀತಿಯನ್ನು ಹುಟ್ಟು ಹಾಕಿದ್ದೀರಿ. ನಿಮ್ಮ ಉತ್ಸಾಹ, ಶಿಸ್ತು, ಕಠಿಣ ಪರಿಶ್ರಮ... ಇವುಗಳಿಗೆ ಯಾವುದೂ ಸಾಟಿಯಿಲ್ಲ. ನಿಮ್ಮ ವೃತ್ತಿ ಜೀವನದಲ್ಲಿ ಅತ್ಯುತ್ತಮ ಅಂಕಿಅಂಶಗಳು, ಅಪರೂಪದ ದಾಖಲೆಗಳು, ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು...ಆದರೆ ನೀವು ಪ್ರತಿ ಪಂದ್ಯಕ್ಕೂ ಮುನ್ನ ನಿಮ್ಮ ಕೌಶಲ್ಯಗಳನ್ನು ಸಿದ್ಧಪಡಿಸುವ ಮತ್ತು ಅಭಿವೃದ್ಧಿಪಡಿಸುವ ವಿಧಾನವನ್ನು ನಾನು ಹೇಗೆ ವಿವರಿಸಬಹುದು? ನಿಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಅದ್ಭುತವಾಗಿದೆ. ಇದೀಗ ನಿಮ್ಮ ಮೇಲಿರುವ ಭಾರವನ್ನು ಇಳಿಸುವ ಸಮಯ ಬಂದಿದೆ. ನಿಮ್ಮ ಹೊಸ ಜೀವನವನ್ನು ನೀವು ಇಷ್ಟಪಡುವ ರೀತಿಯಲ್ಲಿ ಜೀವಿಸಿ. ನಿಮಗೆ ಇಷ್ಟವಾದ ಆಹಾರವನ್ನು ಸೇವಿಸಿ. ನಿಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ನಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಅಶ್ವಿನ್ ಅವರ ಮಡದಿ ಪ್ರೀತಿ ನಾರಾಯಣನ್ ಅವರು ಸುದೀರ್ಘ ಪತ್ರದ ಮೂಲಕ ಭಾವುಕರಾಗಿದ್ದಾರೆ.
ತಮ್ಮ ಪತಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರೀತಿ ಈ ಭಾವನಾತ್ಮಕ ಬರಹವನ್ನು ಹಂಚಿಕೊಂಡಿದ್ದಾರೆ. ಇನ್ನು ಮುಂದೆ ಅಶ್ವಿನ್ ತಮಗೆ ಇನ್ನಷ್ಟು ಹತ್ತಿರವಾಗುತ್ತಾರೆ ಎಂದು ಪತ್ನಿಯಾಗಿ ಸಂತಸದಲ್ಲಿದ್ದರೆ, ಮತ್ತೊಂದೆಡೆ ಅಭಿಮಾನಿಯಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ನಂತರ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಆದರೆ, ಟೆಸ್ಟ್ ಕ್ರಿಕೆಟ್ನ ರಾಜನಾಗಿ ಆಳಿದ ಅಶ್ವಿನ್ಗೆ ಕೊನೆಯಲ್ಲಿ ಸರಿಯಾದ ಬೀಳ್ಕೊಡುಗೆ ಸಿಗದಿರುವುದು ನಿಜ. ಇದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ. ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ನಂತರ ನಾಯಕ ರೋಹಿತ್ ಶರ್ಮ ಅವರೊಂದಿಗೆ ಪತ್ರಿಕಾಗೋಷ್ಠಿಗೆ ಬಂದಿದ್ದ ಅಶ್ವಿನ್ ತಮ್ಮ ನಿರ್ಧಾರವನ್ನು ಪ್ರಕಟಿಸಿ ನಿರ್ಗಮಿಸಿದರು.
ಇನ್ನು ಅಶ್ವಿನ್ ಅವರು ಇಂತಹ ನಿರ್ಧಾರವನ್ನು ದಿಢೀರ್ ಎಂದು ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಿಸಿಸಿಐ ವಿರುದ್ಧದ ಅತೃಪ್ತಿಯಿಂದ ವಿದಾಯ ಹೇಳಿದ್ದಾರೆ ಎಂಬ ಅಭಿಪ್ರಾಯಗಳಿವೆ. ಅದೇನೆ ಇರಲಿ ಅಶ್ವಿನ್ ಒಂದು ಗೌರವ ಸಿಗಲೇಬೇಕು. ಏಕೆಂದರೆ, ಕ್ರಿಕೆಟ್ನಲ್ಲಿ ಅವರ ಸಾಧನೆ ಕಡಿಮೆಯೇನಲ್ಲ! ಟೀಮ್ ಇಂಡಿಯಾ ಟೆಸ್ಟ್ ಪಂದ್ಯದಲ್ಲಿ 537, ಏಕದಿನದಲ್ಲಿ 156 ಹಾಗೂ ಟಿ20ಯಲ್ಲಿ 72 ವಿಕೆಟ್ ಪಡೆದಿರುವ ಆಲ್ ರೌಂಡರ್ ಅಶ್ವಿನ್ ಆಯಾ ಮಾದರಿಯಲ್ಲಿ 3503, 707 ಹಾಗೂ 184 ರನ್ ಗಳಿಸಿದ್ದಾರೆ. (ಏಜೆನ್ಸೀಸ್)