ನವದೆಹಲಿ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಐಪಿಎಲ್ನಲ್ಲಿ ಕಳೆದ ಎರಡು ವರ್ಷದಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಆದರೂ ಐಪಿಎಲ್ನಲ್ಲಿ ಚೊಚ್ಚಲ ಪ್ರವೇಶ ಮಾಡಿಲ್ಲ.
2021ರಲ್ಲಿ ಗಾಯದ ಸಮಸ್ಯೆಯಿಂದ ಅರ್ಜುನ್ ಹೊರಗುಳಿದಿದ್ದರು. 2022ರಲ್ಲಿ ಐಪಿಎಲ್ನಲ್ಲಿ ಕಳಪೆ ಸಾಧನೆಯಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ನಿರ್ಗಮಿಸಿದರೂ ಯಾವೊಂದು ಪಂದ್ಯದಲ್ಲೂ ಅರ್ಜುನ್ಗೆ ಅವಕಾಶ ನೀಡಲಿಲ್ಲ. ನಾಳೆಯಿಂದ ದೇಶದಲ್ಲಿ ಐಪಿಎಲ್ ಹಬ್ಬ ಶುರುವಾಗಲಿದ್ದು, ಈಗಾಗಲೇ ಎಲ್ಲ ತಂಡಗಳು ಅಭ್ಯಾಸದಲ್ಲಿ ನಿರತರಾಗಿವೆ. ಅರ್ಜುನ್ ಕೂಡ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಬಾರಿಯಾದರೂ ಅವರಿಗೆ ಅವಕಾಶ ಸಿಗುತ್ತದೆಯೇ? ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮರನ್ನು ಪ್ರಶ್ನೆ ಮಾಡಲಾಗಿದ್ದು, ಒಂದೇ ಪದದಲ್ಲಿ ರೋಹಿತ್ ಉತ್ತರ ನೀಡಿದ್ದಾರೆ.
ಒಳ್ಳೆಯ ಪ್ರಶ್ನೆ. ಆಶಾದಾಯಕವಾಗಿ ಎಂದು ಉತ್ತರಿಸುವ ಮೂಲಕ ಈ ಬಾರಿ ಅವಕಾಶ ನೀಡುವ ಸುಳಿವನ್ನು ರೋಹಿತ್ ನೀಡಿದ್ದಾರೆ. ಪಂದ್ಯಾವಳಿಯ ಪೂರ್ವಭಾವಿ ಪತ್ರಿಕಾಗೋಷ್ಠಿಯ ವೇಳೆ ಸುದ್ದಿಗಾರರಿಂದ ಬಂದ ಪ್ರಶ್ನೆಗೆ ರೋಹಿತ್ ಈ ರೀತಿ ಉತ್ತರ ನೀಡಿದ್ದಾರೆ. ಇದು ಅರ್ಜುನ್ ಅಭಿಮಾನಿಗಳಿಗೆ ಹಾಗೂ ಯುವ ಕ್ರಿಕೆಟಿಗರಿಗೆ ಖುಷಿ ತರಿಸಿದೆ. ರೋಹಿತ್ ಉತ್ತರ ವೈರಲ್ ಸಹ ಆಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮುಂಬೈ ತಂಡದ ಮುಖ್ಯ ತರಬೇತುದಾರ ಮಾರ್ಕ್ ಬೌಚರ್ ಕೂಡ ಉಪಸ್ಥಿತರಿದ್ದರು ಮತ್ತು ಅರ್ಜುನ್ ತಮ್ಮ ಬೌಲಿಂಗ್‌ನಿಂದ ಹಲವರನ್ನು ಮೆಚ್ಚಿಸಿದ್ದಾರೆ ಮತ್ತು ಅವರು ಸಂಪೂರ್ಣ ಸಿದ್ಧರಾಗಿದ್ದರೆ. ಹೀಗಾಗಿ ಅವರನ್ನು ಆಯ್ಕೆಗೆ ಖಂಡಿತವಾಗಿ ಪರಿಗಣಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ವರ್ಷಾಂತ್ಯದಲ್ಲಿ ಭಾರತ ಏಕದಿನ ವಿಶ್ವಕಪ್ ಆಡಲಿರುವುದರಿಂದ ಪಂದ್ಯಾವಳಿಯ ಅವಧಿಯಲ್ಲಿ ರೋಹಿತ್‌ಗೆ ಕೆಲವು ಪಂದ್ಯಗಳಿಗೆ ವಿಶ್ರಾಂತಿ ನೀಡುವ ಸಾಧ್ಯತೆಯ ಬಗ್ಗೆಯೂ ಬೌಚರ್ ಹೇಳಿದರು.
ಐಪಿಎಲ್ 16ನೇ ಆವೃತ್ತಿಯ ಅಧಿಕೃತ ಟೆಲಿವಿಷನ್ ಪ್ರಸಾರ ಹಕ್ಕನ್ನು ಸ್ಟಾರ್ಸ್ಪೋರ್ಟ್ಸ್ ವಾಹಿನಿ ಪಡೆದುಕೊಂಡಿದೆ. ಇಂಗ್ಲಿಷ್ ಹಾಗೂ ಹಿಂದಿ ಮಾತ್ರವಲ್ಲದೆ, ಕನ್ನಡ, ತೆಲುಗು, ಮರಾಠಿ, ಮಲಯಾಳಂ, ಗುಜರಾತಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಐಪಿಎಲ್ 16ನೇ ಆವೃತ್ತಿಯನ್ನು ಸ್ಟಾರ್ಸ್ಪೋರ್ಟ್ಸ್ ಪ್ರಸ್ತುತಪಡಿಸುತ್ತಿದೆ. (ಏಜೆನ್ಸೀಸ್)