ಕ್ರೀಡೆ

ಸೆಂಚುರಿ ಬಾರಿಸಿ ಪಲ್ಟಿ ಹೊಡೆದು ಪಂತ್​ ಸಂಭ್ರಮಾಚರಣೆ: ಅನುಷ್ಕಾ ಶರ್ಮಾ ಪ್ರತಿಕ್ರಿಯೆ ವೈರಲ್​! Anushka Sharma

Anushka Sharma: ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಸತತ ಬ್ಯಾಟಿಂಗ್​ ವೈಫಲ್ಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಲಖನೌ ಸೂಪರ್​ಜೈಂಟ್ಸ್​ ತಂಡದ ನಾಯಕ ರಿಷಭ್​ ಪಂತ್ ಮತ್ತೆ ತಮ್ಮ ಬ್ಯಾಟಿಂಗ್​ನಲ್ಲಿ ಲಯ ಕೊಂಡುಕೊಂಡಿದ್ದಾರೆ.​ ಐಪಿಎಲ್​ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಎಲ್​ಎಸ್​ಜಿ ತಂಡಕ್ಕೆ ಬಿಕರಿಯಾಗುವ ಮೂಲಕ ಐಪಿಎಲ್​ ಇತಿಹಾಸದಲ್ಲೇ ದುಬಾರಿ ಆಟಗಾರನೆಂಬ ದಾಖಲೆಗೆ ಪಂತ್​ ಪಾತ್ರರಾಗಿದ್ದರು. ಆದರೆ, ಕಳಪೆ ಬ್ಯಾಟಿಂಗ್​ನಿಂದಾಗಿ ಭಾರಿ ಟೀಕೆಗೆ ಗುರಿಯಾಗಿದ್ದರು. ಆದರೆ, ನಿನ್ನೆ (ಮೇ 27) ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ನಡೆದ ಸ್ಫೋಟಕ ಸೆಂಚುರಿ ಬಾರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಮೊದಲು ಬ್ಯಾಟಿಂಗ್​ ಆರಂಭಿಸಿದ ಎಲ್​ಎಸ್​ಜಿ ಪರ ರಿಷಭ್​ ಪಂತ್​ ಅಬ್ಬರಿಸಿ ಬೊಬ್ಬಿರಿದರು. ಕೇವಲ 61 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್​ ನೆರವಿನಿಂದ 118 ರನ್​ ಕಲೆಹಾಕಿದರು. ಬರೋಬ್ಬರಿ 193.44ರ ಸ್ಟ್ರೈಕ್​ರೇಟ್​ನಲ್ಲಿ ಪಂತ್​ ಬ್ಯಾಟ್​ ಬೀಸಿದರು. ಟೂರ್ನಿಯ ಆರಂಭದಿಂದಲೂ ನೀರಸ ಪ್ರದರ್ಶನ ತೋರಿದ್ದ ಪಂತ್​ ಕೊನೆಯ ಲೀಗ್​ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದರು. ಈ ವೇಳೆ ಅವರು ಸಂಭ್ರಮಿಸಿದ ರೀತಿ ಎಲ್ಲರ ಗಮನ ಸೆಳೆಯಿತು.

ಶತಕ ಬಾರಿಸಿದ ಬೆನ್ನಲ್ಲೇ ಹೆಲ್ಮೆಟ್​ ಮತ್ತು ಕೈಗಳಿಂದ ಗ್ಲೌಸ್​ ತೆಗೆದಿಟ್ಟು ಮೈದಾನದಲ್ಲಿ ಪಲ್ಟಿ ಹೊಡೆದು ಸಂಭ್ರಮಿಸಿದರು. ಇದನ್ನು ನೋಡಿದ ಲಖನೌ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಎದ್ದು ನಿಂತು, ಚಪ್ಪಾಳೆ ತಟ್ಟಿ ಸಂಭ್ರಮಾಚರಣೆ ಮಾಡಿದರು. ಆದರೆ, ಈ ಸಂಭ್ರಮಾಚರಣೆ ಅನುಷ್ಕಾ ಶರ್ಮಾಗೆ ಖುಷಿ ಕೊಡಲಿಲ್ಲ. ಏಕೆಂದರೆ, ಮೈದಾನದಲ್ಲಿ ಬೌಂಡರಿ, ಸಿಕ್ಸರ್​ಗಳ ಮಳೆ ಸುರಿಸುತ್ತಾ, ಆರ್​ಸಿಬಿ ಬೌಲರ್​ಗಳಿಗೆ ಪಂತ್​ ಬೆವರಿಳಿಸಿದ್ದನ್ನು ನೋಡಿ ಅನುಷ್ಕಾ ಶರ್ಮಾ ಬೇಸರಗೊಂಡಿದ್ದರು. ಹೀಗಾಗಿ ಪಂತ್​ ಶತಕ ಅವರಿಗೆ ಖುಷಿ ಕೊಡಲಿಲ್ಲ. ಅನಷ್ಕಾ ಶರ್ಮಾರ ಬೇಸರ ಅವರ ಮುಖದಲ್ಲಿ ಕಾಣುತ್ತಿತ್ತು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ನಾಯಕ ರಿಷಭ್ ಪಂತ್ (ಅಜೇಯ 118 ರನ್​, 61 ಎಸೆತ, 11 ಬೌಂಡರಿ, 8 ಸಿಕ್ಸರ್) ಭರ್ಜರಿ ಶತಕ, ಮಿಚೆಲ್ ಮಾರ್ಷ್ (67 ರನ್​, 37 ಎಸೆತ, 4 ಬೌಂಡರಿ, 5 ಸಿಕ್ಸರ್) ಅವರ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 227 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಆರ್‌ಸಿಬಿ ಬೌಲರ್‌ಗಳಲ್ಲಿ ನುವಾನ್​ ತುಷಾರ, ಭುವನೇಶ್ವರ್ ಕುಮಾರ್​ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.

ಬೃಹತ್​ ಗುರಿ ಬೆನ್ನತ್ತಿದ ಆರ್​ಸಿಬಿ, ಜಿತೇಶ್ ಶರ್ಮಾ (ಅಜೇಯ 85 ರನ್​, 33 ಎಸೆತ 8 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ (54 ರನ್​, 30 ಎಸೆತ, 10 ಬೌಂಡರಿ) ಮತ್ತು ಮಾಯಾಂಕ್ ಅಗರ್ವಾಲ್ (ಅಜೇಯ 41 ರನ್​, 23 ಎಸೆತಗಳಲ್ಲಿ 5 ಬೌಂಡರಿ) ಭರ್ಜರಿ ಬ್ಯಾಟಿಂಗ್​ ಪ್ರದರ್ಶನದೊಂದಿಗೆ 18.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಲಖನೌ ಬೌಲರ್‌ಗಳಲ್ಲಿ ವಿಲಿಯಂ ಒ ರೂರ್ಕ್ ಎರಡು ವಿಕೆಟ್ ಪಡೆದರೆ, ಆಕಾಶ್ ಮಹಾರಾಜ್ ಸಿಂಗ್ ಮತ್ತು ಆವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಆರ್​ಸಿಬಿ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಕ್ಕೇರಿದೆ. ಕ್ವಾಲಿಫೈಯರ್-1 ರಲ್ಲಿ ಸ್ಥಾನ ಪಡೆದುಕೊಂಡಿದ್ದು, ಮೇ 29 ರಂದು ಮುಲ್ಲನ್ಪುರದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ರಲ್ಲಿ ಟೇಬಲ್-ಟಾಪರ್ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. (ಏಜೆನ್ಸೀಸ್​)