ಕ್ರೀಡೆ

ಗೆರೆ ದಾಟಬೇಡಿ.. ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಫ್ಯಾನ್ಸ್, ಆಟಗಾರರಿಗೆ ಅಕ್ರಂ ಎಚ್ಚರಿಕೆ | Asia Cup 2025

Asia Cup 2025: ಇದೇ ಸೆ.09ರಿಂದ ಆರಂಭಗೊಳ್ಳಲಿರುವ ಏಷ್ಯಾ ಕಪ್ ಟಿ20 ಟೂರ್ನಿ ದುಬೈನಲ್ಲಿ ನಡೆಯಲಿದೆ. ಇದರ ಬೆನ್ನಲ್ಲೇ ಭಾರತ ತಂಡ ಕೂಡ ಪ್ರಕಟವಾಗಿದೆ. ಈ ಟೂರ್ನಿಯಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿರುವ ಭಾರತ-ಪಾಕ್ ಪಂದ್ಯ ಸದ್ಯ ಜಾಲತಾಣಗಳಲ್ಲಿ ಭಾರೀ ಚರ್ಚೆ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ವೈರಿ ರಾಷ್ಟ್ರ ಪಾಕಿಸ್ತಾನದೊಂದಿಗೆ ಏಷ್ಯಾ ಕಪ್ ಪಂದ್ಯವಾಡುವುದು ಬೇಡ ಎಂಬ ಮಾತು ವ್ಯಾಪಕವಾಗಿ ಕೇಳಿಬಂದಿತ್ತು. ಇದೆಲ್ಲದರ ನಡುವೆ ಪಂದ್ಯ ನಡೆಯಲಿದ್ದು, ಎರಡು ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.

ಸೆ.14ರಂದು ದುಬೈ ಕ್ರೀಡಾಂಗಣದಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ಭಾರತ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಆಟಗಾರರಿಗೆ ಮತ್ತು ಕ್ರಿಕೆಟ್​ ಅಭಿಮಾನಿಗಳಿಗೆ ಪಾಕ್​ ಮಾಜಿ ವೇಗಿ ವಾಸಿಮ್ ಅಕ್ರಂ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. "ಭಾರತ-ಪಾಕ್​​ ಪಂದ್ಯದ ವೇಳೆ ಎರಡೂ ತಂಡದ ಆಟಗಾರರು ಮತ್ತು ಅಭಿಮಾನಿಗಳು ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರ ಬಗ್ಗೆ ಗಮನವಿರಲಿ" ಎಂದಿದ್ದಾರೆ.

"ಈ ಪಂದ್ಯ ಒಳ್ಳೆಯ ಪೈಪೋಟಿಯಿಂದ ಕೂಡಿರುತ್ತದೆ ಎಂಬ ಭಾವನೆ ನನ್ನದು. ಎಲ್ಲಾ ಪಂದ್ಯಗಳಂತೆ ಭಾರತ ಮತ್ತು ಪಾಕಿಸ್ತಾನ ಪಂದ್ಯವಿರಲಿದೆ. ಆಟಗಾರರು ಮತ್ತು ಅಭಿಮಾನಿಗಳು ಶಿಸ್ತುಬದ್ಧರಾಗಿರಬೇಕು ಮತ್ತು ಗೆರೆಯನ್ನು ದಾಟಿ ಹೋಗಬಾರದು ಎಂದು ನಾನು ಭಾವಿಸುವೆ. ವೈಯಕ್ತಿಕವಾಗಿ, ನಾನು ಬಾಬರ್ ಅಜಂರನ್ನು ತಂಡದಲ್ಲಿ ನೋಡಲು ಬಯಸಿದ್ದೆ. ಆದರೆ, ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅವರನ್ನು ಆಯ್ಕೆ ಮಾಡದೆ ತಂಡದಿಂದ ಕೈಬಿಟ್ಟಿದೆ" ಎಂದು ಅಕ್ರಮ್ ಟೆಲಿಕಾಂ ಏಷ್ಯಾ ಸ್ಪೋರ್ಟ್‌ಗೆ ತಿಳಿಸಿದ್ದಾರೆ,(ಏಜೆನ್ಸೀಸ್).