ಕ್ರೀಡೆ

ಇದೊಂದೆ ಬೇಸರದ ಸಂಗತಿ… ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಭಾರತೀಯರನ್ನು ಕೆಣಕಿದ ಅಫ್ರಿದಿ!

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) 17ನೇ ಸೀಸನ್​ ಮುಗಿದಿದೆ. ಒಂದೂವರೆ ತಿಂಗಳ ಕಾಲ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ ಕ್ಯಾಶ್ ರಿಚ್ ಲೀಗ್​ಗೆ ವಿದ್ಯುಕ್ತ ತೆರೆ ಬಿದ್ದಿದೆ. ಈ ಬಾರಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​) ಚಾಂಪಿಯನ್ ಆಗಿ ಹೊರಹೊಮ್ಮಿತು. ಇದೀಗ ಎಲ್ಲರ ಗಮನ ಟಿ20 ವಿಶ್ವಕಪ್​ನತ್ತ ನೆಟ್ಟಿದೆ. ಈ ಮೆಗಾ ಟೂರ್ನಿ ಆರಂಭಕ್ಕೆ ಇನ್ನು ಐದು ದಿನಗಳು ಮಾತ್ರ ಬಾಕಿ ಉಳಿದಿವೆ. ಬಹುತೇಕ ಎಲ್ಲ ತಂಡಗಳು ಈಗಾಗಲೇ ಅಮೆರಿಕ ತಲುಪಿವೆ. ಎಲ್ಲ ಆಟಗಾರರು ಅಭ್ಯಾಸದಲ್ಲಿ ಮಗ್ನರಾಗಿದ್ದಾರೆ. ಅಮೆರಿಕದ ಹವಾಮಾನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಮುಖ್ಯ ಪಂದ್ಯಗಳಿಗೂ ಮೊದಲು ಅಭ್ಯಾಸ ಪಂದ್ಯಗಳನ್ನು ಆಡುವ ಮೂಲಕ ಮೆಗಾ ಟೂರ್ನಿಗೆ ರೆಡಿಯಾಗುತ್ತಿದ್ದಾರೆ. ಈ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರೋಚಕವಾಗಿರಲಿದೆ. ಹೀಗಾಗಿ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಜೂನ್ 9ಕ್ಕಾಗಿ ಎದುರು ನೋಡುತ್ತಿವೆ.

ಕ್ರಿಕೆಟ್​ ಪ್ರೇಮಿಗಳೆಲ್ಲ ಭಾರತ-ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅದ್ಭುತ ದಾಖಲೆ ಹೊಂದಿದೆ. ಐಸಿಸಿ ಟೂರ್ನಮೆಂಟ್‌ಗಳಲ್ಲಿ ನಮ್ಮ ಸಾಂಪ್ರದಾಯಿಕ ಎದುರಾಳಿಗೆ ಟಕ್ಕರ್​ ಕೊಡುವುದು ನಮಗೆ ಸಾಮಾನ್ಯವಾಗಿದೆ. ಇತ್ತೀಚಿನ ಏಷ್ಯಾಕಪ್‌ನಿಂದ ಏಕದಿನ ವಿಶ್ವಕಪ್-2023ರವರೆಗೆ ಪಾಕಿಸ್ತಾನ ಎದುರಾದಾಗಲೆಲ್ಲ ಭಾರತ ತನ್ನ ಬಲ ಪ್ರದರ್ಶನ ಮಾಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ವಿಶ್ವದ ಅತ್ಯುತ್ತಮ ಆಟಗಾರರು ತಂಡದಲ್ಲಿದ್ದು, ನಮ್ಮೊಂದಿಗೆ ಆಡಲು ಪಾಕ್ ಕ್ರಿಕೆಟಿಗರು ಹೆದರುತ್ತಾರೆ.

ಆದರೆ, ಪ್ರತಿಬಾರಿ ಯಾವುದಾದರೊಂದು ಮೆಗಾ ಟೂರ್ನಿ ಆರಂಭವಾದಾಗ ಪಾಕ್​ ಕ್ರಿಕೆಟಿಗರು ಅಥವಾ ಮಾಜಿ ಕ್ರಿಕೆಟಗರು ಬೇಕಂತಲೇ ಟೀಮ್​ ಇಂಡಿಯಾವನ್ನು ಕೆಣಕುತ್ತಾರೆ. ಈ ಮೂಲಕ ಪ್ರಚೋದಿಸಲು ಯತ್ನಿಸುತ್ತಾರೆ. ಪಾಕಿಸ್ತಾನದ ದಿಗ್ಗಜ ಆಟಗಾರ ಶಾಹಿದ್ ಅಫ್ರಿದಿ ಇದೀಗ ಭಾರತ ತಂಡವನ್ನು ಲೇವಡಿ ಮಾಡಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತ 5-1 ಅಂತರದಲ್ಲಿ ಮೇಲುಗೈ ಸಾಧಿಸಿರುವ ಟ್ರ್ಯಾಕ್​ ರೆಕಾರ್ಡ್​ ಇದೆ. ಆದರೆ, 2021ರ ಚುಟುಕು ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪಾಕ್​ ಎದುರು ಸೋತಿತ್ತು. ಅದನ್ನೇ ಹೈಲೈಟ್ ಮಾಡುವ ಮೂಲಕ ಅಫ್ರಿದಿ, ಭಾರತೀಯರನ್ನು ಕೆರಳಿಸಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ನಾನು ಸಾಕಷ್ಟು ಸಾಧನೆ ಮಾಡಿದ್ದೇನೆ. ಎಷ್ಟೇ ಚೆನ್ನಾಗಿ ಆಡಿದರೂ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಇದು ಹತಾಶ ಬಯಕೆಯಾಗಿ ಉಳಿದಿದೆ. ಆದರೆ, ದುಬೈನಲ್ಲಿ ನಡೆದ ಟಿ20 ವಿಶ್ವಕಪ್-2021ರಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಗೆದ್ದಿತ್ತು. ನಾನು ಆ ಅವಕಾಶವನ್ನು ಕಳೆದುಕೊಂಡೆ, ಆ ತಂಡದಲ್ಲಿ ನಾನಿರಲಿಲ್ಲ ಎಂಬ ಬೇಸರವಿದೆ ಎಂದು ಅಫ್ರಿದಿ ಹೇಳಿದ್ದಾರೆ.

ಅಫ್ರಿದಿ ಅವರ ಈ ಕಾಮೆಂಟ್​ಗಳನ್ನು ಕೇಳಿದ ನೆಟ್ಟಿಗರು ಅಫ್ರಿದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೆಗಾ ಟೂರ್ನಿಗಳಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಹಲವು ಬಾರಿ ಸೋತಿದೆ. ಅದರ ಬಗ್ಗೆ ಮಾತನಾಡುವ ಧೈರ್ಯ ಅಫ್ರಿದಿ ಅವರಿಗಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಎಷ್ಟೇ ಅತಿಯಾಗಿ ಆಡಿದರು ಈ ಬಾರಿಯೂ ಪಾಕ್​ಗೆ ಸೋಲು ಅನಿವಾರ್ಯ. ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಭಾರತವೇ ಗೆಲುವು ಸಾಧಿಸಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. (ಏಜೆನ್ಸೀಸ್​)