

ಚೆನ್ನೈ: ಪದೇಪದೆ ಕೇಳಿಬರುತ್ತಿರುವ ಡಿವೋರ್ಸ್ ವದಂತಿಯಿಂದ ಬೇಸತ್ತಿರುವ ನಟಿ ಕಂ ರಾಜಕಾರಣಿ ನಮಿತಾ, ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡುತ್ತಿರುವವರ ವಿರುದ್ಧ ಕಿಡಿಕಾರಿದ್ದು, ನಾವಿಬ್ಬರು ಬೇರೆಯಾಗಿದ್ದೇವೆ ಅಂತ ಯಾವ ಆಧಾರದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಈ ಸುದ್ದಿ ನೋಡಿದಾಗಲೆಲ್ಲ ನಗು ಬರುತ್ತೆ
ಡಿವೋರ್ಸ್ ವದಂತಿ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ನಮಿತಾ, ಗಂಡನ ಜತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್ ಮಾಡಿದರೂ ಕೂಡ ಈ ಡಿವೋರ್ಸ್ ವದಂತಿ ಏಕೆ ಬರುತ್ತಿದೆ ಎಂಬುದು ನನಗೆ ತಿಳಿಯುತ್ತಿಲ್ಲ. ಡಿವೋರ್ಸ್ ವದಂತಿ ಹರಡುವ ಮುಂಚೆಯೂ ನಾನು ಗಂಡನ ಜತೆಯಿರುವ ಫೋಟೋವನ್ನು ಪೋಸ್ಟ್ ಮಾಡಿದ್ದೇನೆ. ಆದಾಗ್ಯೂ, ಈ ವದಂತಿ ಹರಡುತ್ತಲೇ ಇದೆ. ಯಾವ ಆಧಾರದ ಮೇಲೆ ಈ ವದಂತಿ ಹಬ್ಬಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾನೊಬ್ಬ ನಟಿಯಾಗಿ ಅನೇಕ ವದಂತಿಗಳನ್ನು ಎದುರಿಸಿದ್ದೇನೆ. ಇದೆಲ್ಲ ನಮಗೆ ಹೊಸದಲ್ಲ, ನಾನು ಮತ್ತು ನನ್ನ ಪತಿ ಈ ವಿಚ್ಛೇದನದ ವದಂತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಸುದ್ದಿ ನೋಡಿದಾಗಲೆಲ್ಲ ನಮಗೆ ನಗು ಬರುತ್ತದೆ ಎಂದು ನಮಿತಾ ಸ್ಪಷ್ಟಪಡಿಸಿದ್ದಾರೆ.
ಸದ್ಯ ನಮಿತಾ ಅವರು ಸಿನಿಮಾದಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದು, ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ನೀಲಗಿರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪರವಾಗಿ ಕಣಕ್ಕಿಳಿದಿರುವ ಎಲ್.ಮುರುಗನ್ ಅವರ ಪರ ನಮಿತಾ, ತಿರುಪುರ ಜಿಲ್ಲೆಯ ತಿರುಮುರುಗನ್ ಬಂಡಿ ಪ್ರದೇಶದಲ್ಲಿ ಮತಯಾಚನೆ ಮಾಡಿದ್ದರು.
ನಮಿತಾ ಕನ್ನಡಿಗರಿಗೂ ಪರಿಚಿತ
ಅಂದಹಾಗೆ ನಟಿ ನಮಿತಾ ಅವರನ್ನು ಕನ್ನಡಿಗರಿಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ನೀಲಕಂಠ ಸಿನಿಮಾ ಮೂಲಕ ನಮಿತಾ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮೊದಲ ಕನ್ನಡ ಸಿನಿಮಾದಲ್ಲೇ ತಮ್ಮ ಬೋಲ್ಡ್ ಅವತಾರ ಮೂಲಕ ಸದ್ದು ಮಾಡಿದರು. “ಅಮ್ಮಮ್ಮಮ್ಮೋ ವಯ್ಯಾರಮ್ಮಮ್ಮಮ್ಮೋ” ಹಾಡು ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಮನೆ ಮಾಡಿದೆ. ನೀಲಕಂಠ ಬಳಿಕ ನಮಿತಾ, ಸ್ಟಾರ್ ನಟ ದರ್ಶನ್ ಜತೆಗೆ ಇಂದ್ರ ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಗುಮ್ ಗುಮ್ ಗುಮ್ತಾನೆ ಮತ್ತು ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ ಹಾಡು ಸಿಕ್ಕಾಪಟ್ಟೆ ಹಿಟ್ ಆಯಿತು. ಇದಿಷ್ಟೇ ಅಲ್ಲದೆ, ‘ಹೂ’ ಸಿನಿಮಾದಲ್ಲಿ ಮತ್ತೆ ರವಿಚಂದ್ರನ್ ಜತೆಯಾದರು. ಬೆಂಕಿ ಬಿರುಗಾಳಿ ನಮಿತಾ ನಟನೆಯ ಕೊನೆಯ ಕನ್ನಡ ಸಿನಿಮಾ ಆಗಿದೆ. ನಟಿಸಿದ್ದು ನಾಲ್ಕೇ ಸಿನಿಮಾವಾದರೂ ಕನ್ನಡಿಗರ ಮನದಲ್ಲೂ ನಮಿತಾ ಮನೆ ಮಾಡಿದ್ದಾರೆ. ತಮ್ಮ ಬೋಲ್ಡ್ ಪಾತ್ರಗಳಿಂದಲೇ ಹೆಚ್ಚು ಸುದ್ದಿ ಮಾಡಿದ ನಮಿತಾ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಫೇವರಿಟ್ ಆಗಿದ್ದರು.
ಗುಜರಾತ್ ಮೂಲದ ನಮಿತಾ ಆರಂಭದಲ್ಲಿ ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಮಿತಾ ಸೊಂಟಂ ಹೆಸರಿನ ತೆಲುಗು ಸಿನಿಮಾಕ್ಕೆ ಮೊದಲು ಬಣ್ಣ ಹಚ್ಚಿದರು. ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಮಿತಾ, ಮಲಯಾಳಂ, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಆದರೆ, ಸಿನಿಮಾ ಅವಕಾಶಗಳು ಕಡಿಮೆಯಾದಾಗ ದಿಢೀರನೇ ತೂಕ ಹೆಚ್ಚಿಸಿಕೊಂಡ ನಮಿತಾ ಕೆಲವು ಐಟಂ ಸಾಂಗ್ಗಳಿಯೂ ಕಾಣಿಸಿಕೊಂಡರು.
ಸಿನಿಮಾ ಅವಕಾಶ ಸಂಪೂರ್ಣ ನಿಂತಾಗ ಕಿರುತೆರೆ ಕಡೆ ಮುಖ ಮಾಡಿದ ನಮಿತಾ, ಕಾವಂದೆ ಮಯಿಲಾಡ ಕಾರ್ಯಕ್ರಮದ ಜಡ್ಜ್ ಆಗಿ ಅನೇಕ ವರ್ಷಗಳವರೆಗೆ ಶೋ ನಡೆಸಿಕೊಟ್ಟರು. ತಮಿಳು ಬಿಗ್ಬಾಸ್ ಸೀಸನ್ 1ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ನಮಿತಾ 28 ದಿನಕ್ಕೆ ಮನೆಯಿಂದ ಹೊರಬಂದರು. ಹೀಗೆ ಬಣ್ಣದ ಜಗತ್ತಿನೊಂದಿಗೆ ನಂಟು ಬೆಳೆಸಿಕೊಂಡಿದ್ದ ನಮಿತಾ, ನಿರ್ಮಾಪಕ ವೀರೇಂದ್ರ ಚೌಧರಿ ಎಂಬುವರನ್ನು ಪ್ರೀತಿಸಿ 2017ರಲ್ಲಿ ಮದುವೆ ಮಾಡಿಕೊಂಡರು. ದಂಪತಿಗೆ ಅವಳಿ ಮಕ್ಕಳಿದ್ದಾರೆ. (ಏಜೆನ್ಸೀಸ್)