ಕಿಂಗ್ಸ್ಟನ್: ಇಲ್ಲಿನ ಅರ್ನೋಸ್ ವೇಲ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ನ ಸೂಪರ್ 08 ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಅಫ್ಘಾನಿಸ್ತಾನ ತಂಡವು ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದು, ಮಾಜಿ ಚಾಂಪಯನ್ನರಿಗೆ ರಶೀದ್ ಪಡೆ ದೊಡ್ಡ ಶಾಕ್ ನೀಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನದ ಆರಂಭಿಕರಾದ ರೆಹಮಾನುಲ್ಲಾ ಗುರ್ಬಾಜ್ (60 ರನ್, 49 ಎಸೆತ, 4 ಬೌಂಡರಿ, 4 ಸಿಕ್ಸರ್), ಇಬ್ರಾಹಿಂ ಜರ್ದಾನ್ (51 ರನ್, 48 ಎಸೆತ, 6 ಬೌಂಡರಿ) ಆರ್ಧಶತಕಗಳ ಫಲವಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್ (4-0-28-3), ಆ್ಯಡಂ ಜಂಪಾ (4-0-28-2), ಮಾರ್ಕಸ್ ಸ್ಟೋಯಿನಿಸ್ (2-0-19-1), ಗ್ಲೆನ್ ಮ್ಯಾಕ್ಸ್ವೆಲ್ (2-0-12-0), ಆಶ್ಟನ್ ಅಗರ್ (4-1-17-0), ಜೋಶ್ ಹೇಜಲ್ವುಡ್ (4-0-39-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಆತ ಒಬ್ಬ ಪ್ರಮುಖ ಆಟಗಾರ; ಬಾಂಗ್ಲಾ ವಿರುದ್ಧ ಗೆಲುವಿನ ಬಳಿಕ ಹಾರ್ದಿಕ್ ಪಾಂಡ್ಯರನ್ನು ಹಾಡಿಹೊಗಳಿದ ರೋಹಿತ್ ಶರ್ಮಾ
ಸುಲಭ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವನ್ನು ಇನ್ನಿಲ್ಲದಂತೆ ಕಾಡಿದ ಅಫ್ಘಾನಿಸ್ತಾನ ವೇಗಿಗಳು ಎದುರಾಳಿಗಳನ್ನು 19.2 ಓವರ್ಗಳಲ್ಲಿ 127 ಓವರ್ಗಳಿಗೆ ಆಲೌಟ್ ಮಾಡುವ ಮೂಲಕ ಗೆಲುವಿನ ನಗೆ ಬೀರಿದರು. ತಂಡಕ್ಕೆ ಆಸರೆಯಾದ ಗ್ಲೆನ್ ಮ್ಯಾಕ್ಸ್ವೆಲ್ ( 59 ರನ್, 41 ಎಸೆತ, 6 ಬೌಂಡರಿ, 4 ಸಿಕ್ಸರ್) ಎದುರಾಳಿ ತಂಡದ ಬೌಲರ್ಗಳನ್ನು ದಂಡಿಸಿ ಗುಲ್ಬದ್ದೀನ್ಗೆ ವಿಕೆಟ್ ಒಪ್ಪಿಸಿದರು. ಮ್ಯಾಕ್ಸ್ವೆಲ್ ಔಟಾಗುತ್ತಿದ್ದಂತೆ ಆಸ್ಟ್ರೇಲಿಯಾದ ಸೋಲು ಖಚಿತವಾಯಿತು.
ಅಫ್ಘಾನಿಸ್ತಾನ ಪರ ನವೀನ್ ಉಲ್ ಹಕ್ (4-0-20-3), ಗುಲ್ಬದ್ದೀನ್ ನಯಬ್ (4-0-20-4), ಅಜ್ಮತುಲ್ಲಾ ಓಮರ್ಟ್ಝೈ (1.2-0-10-1), ಮೊಹಮ್ಮದ್ ನಬಿ (1--0-1-1), ರಶೀದ್ ಖಾನ್ (4-0-23-1) ರನ್ ನೀಡಿ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭಾರತ ವಿರುದ್ಧ 47 ರನ್‌ಗಳಿಂದ ಸೋತಿರುವ ರಶೀದ್ ಖಾನ್ ಪಡೆಯು ಟೂರ್ನಿಯಲ್ಲಿ ಮುಂದಿನ ಹಾದಿಯನ್ನು ಜೀವಂತವಾಗಿರಿಸಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಅದರಂತೆ ಈಗ ಪಂದ್ಯವನ್ನು ಗೆಲ್ಲುವ ಮೂಲಕ ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.