ಕ್ರೀಡೆ

ಎಬಿ ಡಿವಿಲಿಯರ್ಸ್​ ಪ್ಲೀಸ್​ ಸಹಾಯ ಮಾಡಿ... ದಿಗ್ಗಜ ಆಟಗಾರನ ಬಳಿ ಸೂರ್ಯಕುಮಾರ್ ವಿಶೇಷ​ ಮನವಿ! Suryakumar Yadav

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ಸೂರ್ಯಕುಮಾರ್ ಯಾದವ್ ( Suryakumar Yadav ) ತಮ್ಮ 30ನೇ ವಯಸ್ಸಿನಲ್ಲಿ ಭಾರತೀಯ ಕ್ರಿಕೆಟ್‌ ತಂಡಕ್ಕೆ ಪಾದಾರ್ಪಣೆ ಮಾಡಿದರು. ಲೇಟ್​ ಆದರು ಕೂಡ ತಂಡದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿರುವ ಎಸ್​ಕೆವೈ, ಪ್ರಸ್ತುತ ಟಿ20 ತಂಡದ ನಾಯಕರಾಗಿದ್ದಾರೆ. ಆದರೆ, ಏಕದಿನ ಪಂದ್ಯಗಳಲ್ಲಿ ತಮ್ಮ ಖದರ್​ ತೋರಿಸಲು ಇನ್ನೂ ಸಾಧ್ಯವಾಗಿಲ್ಲ.

2021 ರಲ್ಲಿ ಭಾರತ ಪರ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಸೂರ್ಯಕುಮಾರ್​ಗೆ ಬಿಸಿಸಿಐ ಆಯ್ಕೆದಾರರು ಸಾಕಷ್ಟು ಅವಕಾಶಗಳನ್ನು ನೀಡಿದರು. ಆದರೆ, ಟೀಮ್​ ಇಂಡಿಯಾದ ಮಿಸ್ಟರ್ 360 ಬಂದ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದುವರೆಗೆ 37 ಏಕದಿನ ಪಂದ್ಯಗಳನ್ನು ಆಡಿರುವ ಸೂರ್ಯ, 25.77 ರ ಸರಾಸರಿಯಲ್ಲಿ ಕೇವಲ 773 ರನ್ ಗಳಿಸಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, 2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿಯೂ ಅವಕಾಶ ಸಿಕ್ಕಿತ್ತು. ಆದರೆ, ಅಲ್ಲಿಯೂ ಎಸ್​ಕೆವೈ ಸಂಪೂರ್ಣ ವಿಫಲರಾದರು.

ಸತತವಾಗಿ ವಿಫಲರಾದ್ದರಿಂದ ಆಯ್ಕೆದಾರರು ಸೂರ್ಯಕುಮಾರ್​ ಅವರನ್ನು ಏಕದಿನ ತಂಡದಿಂದಲೇ ಕೈಬಿಟ್ಟರು. ಪ್ರಸ್ತುತ ಅವರನ್ನು ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಅಂತ ಪರಿಗಣಿಸಲಾಗಿದೆ. ಆದಾಗ್ಯೂ, ಸೂರ್ಯಕುಮಾರ್​ ಇತ್ತೀಚಿನ ಸಂದರ್ಶನವೊಂದರಲ್ಲಿ ಏಕದಿನ ಪಂದ್ಯಗಳಲ್ಲಿ ಮತ್ತೆ ಆಡಲು ಬಯಸಿರುವುದಾಗಿ ಬಹಿರಂಗಪಡಿಸಿದ್ದಾರೆ. ಅಲ್ಲದೆ, ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ ಎಬಿ ಡಿವಿಲಿಯರ್ಸ್ ಅವರಿಂದ ಏಕದಿನ ಮತ್ತು ಟಿ20 ಸ್ವರೂಪಗಳನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಕಲಿಯುವುದಾಗಿ ಹೇಳಿದ್ದಾರೆ.

ನಾನು ಎಬಿ ಡಿವಿಲಿಯರ್ಸ್ ಅವರನ್ನು ಭೇಟಿಯಾದರೆ, ಟಿ20 ಮತ್ತು ಏಕದಿನ ಎರಡನ್ನೂ ಅವರು ಹೇಗೆ ನಿಭಾಯಿಸುತ್ತಿದ್ದರು ಎಂಬುದನ್ನು ತಿಳಿಯಲು ಬಯಸುತ್ತೇನೆ. ನನಗೆ ಎರಡನ್ನೂ ನಿರ್ವಹಿಸಲು ಸಾಧ್ಯವಾಗಲಿಲ್ಲ. ನಾನು ಏಕದಿನ ಪಂದ್ಯಗಳನ್ನೂ ಟಿ20ಯಂತೆ ಆಡಬೇಕೆಂದು ಭಾವಿಸಿದ್ದೆ. ಆದರೆ ನಾನು ಅಂದುಕೊಂಡಂತೆ ಆಗಲಿಲ್ಲ ಎಂದು ಸೂರ್ಯಕುಮಾರ್​ ಹೇಳಿದರು.

ಎಬಿ, ನೀವು ಈ ಸಂದರ್ಶನವನ್ನು ನೋಡಿದರೆ, ದಯವಿಟ್ಟು ನನ್ನನ್ನು ಬೇಗನೆ ಸಂಪರ್ಕಿಸಿ. ಏಕೆಂದರೆ ನನ್ನ ವೃತ್ತಿಜೀವನದಲ್ಲಿ ಇನ್ನೂ ಮೂರಿಂದ ನಾಲ್ಕು ವರ್ಷಗಳು ಮಾತ್ರ ಉಳಿದಿವೆ. ನಾನು ಏಕದಿನ ಪಂದ್ಯಗಳಿಗೆ ಮತ್ತೆ ಪ್ರವೇಶಿಸಲು ಬಯಸುತ್ತೇನೆ. ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಟಿ20 ಮತ್ತು ಏಕದಿನ ಪಂದ್ಯಗಳನ್ನು ಒಟ್ಟಿಗೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಮಲ್ ಕುಮಾರ್ ಪಾಡ್‌ಕ್ಯಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಸೂರ್ಯ ಹೇಳಿದರು.

ಸೂರ್ಯ ಪ್ರಸ್ತುತ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಏರಿಳಿತಗಳನ್ನು ಎದುರಿಸುತ್ತಿದ್ದಾರೆ. ಈ ವರ್ಷ ಸೂರ್ಯ ಅವರು ಇದುವರೆಗೆ T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅರ್ಧಶತಕದ ಗಡಿ ದಾಟಲು ಸಾಧ್ಯವಾಗಿಲ್ಲ. ನಾಯಕನಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರೂ, ವೈಯಕ್ತಿಕ ಪ್ರದರ್ಶನದ ವಿಷಯದಲ್ಲಿ ಸೂರ್ಯ ನಿರಾಶಾದಾಯಕವಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲೂ ಸೂರ್ಯ ಇನ್ನು ತಮ್ಮ ಹಳೆಯ ಖದರ್​ ಅನ್ನು ತೋರಿಸಿಲ್ಲ. (ಏಜೆನ್ಸೀಸ್​)