ಬರ್ಮಿಂಗ್ಹ್ಯಾಂ: 22ನೇ ಆವೃತ್ತಿಯ ಕಾಮನ್ವೆಲ್ತ್ ಕ್ರೀಡಾಕೂಟದ ಅಂತಿಮ ದಿನವಾದ ಇಂದು ಕೂಡ ಭಾರತ ಪದಕಗಳ ಬೇಟೆಯಾಡುತ್ತಿದ್ದು, ಬ್ಯಾಡ್ಮಿಂಟನ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಪಿ.ವಿ.ಸಿಂಧು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಕೆನಡಾದ ಮಿಶೈಲ್ ವಿರುದ್ಧ ಸೆಣಸಾಡಿದ ಸಿಂಧು, ಮೊದಲ ಸುತ್ತಿನಲ್ಲಿ 21-15, 2ನೇ ಸುತ್ತಿನಲ್ಲಿ 21-13 ಅಂತರದಲ್ಲಿ ಜಯಭೇರಿ ಬಾರಿಸಿದರು.
22ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ನ ಸಮಾರೋಪ ಸಮಾರಂಭ ಇಂದು(ಸೋಮವಾರ) ರಾತ್ರಿ ಬರ್ಮಿಂಗ್ಹ್ಯಾಂನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಭಾನುವಾರವೂ ಭರ್ಜರಿ ಬಂಗಾರದ ಪದಕಗಳನ್ನು ಬೇಟೆಯಾಡಿದ್ದರು. ಬಾಕ್ಸಿಂಗ್ನಲ್ಲಿ 3, ಪ್ಯಾರಾ ಟೇಬಲ್ ಟೆನಿಸ್ ಮತ್ತು ಅಥ್ಲೆಟಿಕ್ಸ್ನಲ್ಲಿ ತಲಾ 1 ಚಿನ್ನದ ಸಂಭ್ರಮ ಕಂಡಿತ್ತು. ಜತೆಗೆ 2 ಬೆಳ್ಳಿ, 5 ಕಂಚು ಒಲಿಸಿಕೊಂಡಿತ್ತು. ಇದುವರೆಗೆ ಒಟ್ಟಾರೆ 51 (18 ಚಿನ್ನ, 13 ಬೆಳ್ಳಿ, 20 ಕಂಚು) ಪದಕ ಗೆದ್ದಿದೆ.