ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿನ್ನೆ (ಅ.12) ಸಂಜು ಸ್ಯಾಮ್ಸನ್ ( Sanju Samson ) ಬ್ಯಾಟಿಂಗ್ ಆರ್ಭಟಕ್ಕೆ ಸಾಕ್ಷಿಯಾಯಿತು. ಮೊದಲ ಟಿ20 ಪಂದ್ಯದಲ್ಲಿ ತನ್ನನ್ನು ಔಟ್ ಮಾಡಿದ್ದ ಬಾಂಗ್ಲಾದ ರಿಷದ್ ಹೊಸೈನ್ ಅವರಿಗೆ ಮೂರನೇ ಅಥವಾ ಅಂತಿಮ ಟಿ20 ಪಂದ್ಯದಲ್ಲಿ ಸಂಜು ಬೆವರಿಸಿಳಿಸಿದರು. ಲೆಗ್ ಸ್ಪಿನ್ನರ್ ಎಸೆದ ಸತತ ಐದು ಎಸೆತಗಳನ್ನು ಬೃಹತ್ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸಂಜು ತಮ್ಮ ಉಗ್ರರೂಪವನ್ನು ಪ್ರದರ್ಶಿಸಿದರು. ಈ ಓವರ್‌ನಲ್ಲಿ 30 ರನ್‌ಗಳು ಬಂದವು.
ರಿಷದ್ ಎಸೆದ 10ನೇ ಓವರ್‌ನ ಮೊದಲ ಎಸೆತದಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಎರಡನೇ ಎಸೆತದಲ್ಲಿ ಚೆಂಡು ಬೌಲರ್‌ನ ತಲೆಯ ಮೇಲೆಯೇ ಬೌಂಡರಿಗೆ ಹಾರಿತು. ಮೂರನೇ ಎಸೆತದಲ್ಲಿ ಲಾಂಗ್ ಆಫ್ ಸಿಕ್ಸರ್ ಬಾರಿಸಿದ ಸಂಜು, ನಾಲ್ಕನೇ ಎಸೆತವನ್ನು ನೇರವಾಗಿ ಬೌಂಡರಿ ಗೆರೆಯನ್ನು ದಾಟಿಸಿದರು. ಐದನೇ ಎಸೆತದಲ್ಲಿ ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು. 6ನೇ ಎಸೆತಕ್ಕೂ ಮುನ್ನ ರಿಷದ್ ತಮ್ಮ ಬೌಲಿಂಗ್ ಸ್ಥಾನವನ್ನು ಬದಲಾಯಿಸಿದರು. ಆದರೆ, ಫಲಿತಾಂಶ ಬದಲಾಗಲಿಲ್ಲ. ಚೆಂಡು ಮಿಡ್ ವಿಕೆಟ್ ಮೇಲೆ ಹಾರಿ ಐದನೇ ಸಿಕ್ಸರ್ಗೆ ಬೌಂಡರಿ ರೋಪ್ ದಾಟಿತು. ಇದಕ್ಕೆ ಸಂಬಂಧಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಂಜು ಬ್ಯಾಟಿಂಗ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
22ರ ಹರೆಯದ ರಿಷದ್, ಮೊದಲ ಓವರ್‌ನಲ್ಲಿ ಕೇವಲ 16 ರನ್‌ಗಳನ್ನು ನೀಡಿದ್ದರು. ಆದರೆ, ಎರಡನೇ ಓವರ್‌ನ ಅಂತ್ಯಕ್ಕೆ 46 ರನ್ ಬಿಟ್ಟುಕೊಟ್ಟರು. ಇದಾದ ಬಳಿಕ ಬಾಂಗ್ಲಾದೇಶ ನಾಯಕ ನಜ್ಮುಲ್ ಹೊಸೈನ್ ಶಾಂಟೋ, ರಿಷದ್ಗೆ ಮತ್ತೆ ಓವರ್ ನೀಡಲಿಲ್ಲ. 12ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್, ಕನ್ನಿ ಮುಸ್ತಫಿಜುರ್ ಎಸೆತವನ್ನು ಬೌಂಡರಿ ಬಾರಿಸುವ ಮೂಲಕ ಚೊಚ್ಚಲ ಶತಕ ಪೂರೈಸಿದರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಆರ್ಜಿಐ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ, ಎಡಗೈ ಆರಂಭಿಕ ಅಭಿಷೇಕ್ ಶರ್ಮ (4) ವಿಕೆಟ್ ಬೇಗನೆ ಕಳೆದುಕೊಂಡಿತು. ಆಗ ಜತೆಯಾದ ಸಂಜು ಸ್ಯಾಮ್ಸನ್ (111 ರನ್, 47 ಎಸೆತ, 11 ಬೌಂಡರಿ, 8 ಸಿಕ್ಸರ್) ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (75 ರನ್, 35 ಎಸೆತ, 8 ಬೌಂಡರಿ, 5 ಸಿಕ್ಸರ್) ಬಿರುಸಿನ ಜತೆಯಾಟ ಹಾಗೂ ಸ್ಲಾಗ್ ಓವರ್ಗಳಲ್ಲಿ ರಿಯಾನ್ ಪರಾಗ್ (34 ರನ್, 13 ಎಸೆತ, 1 ಬೌಂಡರಿ, 4 ಸಿಕ್ಸರ್)- ಹಾರ್ದಿಕ್ ಪಾಂಡ್ಯ (47 ರನ್, 18 ಎಸೆತ, 4 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಬಲದಿಂದ 6 ವಿಕೆಟ್ಗೆ 297 ರನ್ ಪೇರಿಸಿತು. 25 ಬೌಂಡರಿ, 22 ಸಿಕ್ಸರ್ ಸಿಡಿಸಿದರೂ, ಕೇವಲ 3 ರನ್ಗಳಿಂದ 300 ರನ್ ಸಾಧನೆಯಿಂದ ವಂಚಿತವಾದ ಭಾರತ, ಟಿ20 ಕ್ರಿಕೆಟ್ನಲ್ಲಿ ಟೆಸ್ಟ್ ರಾಷ್ಟ್ರಗಳ ಪೈಕಿ ಸರ್ವಾಧಿಕ ಮೊತ್ತದ ದಾಖಲೆ ಬರೆಯಿತು. ಪ್ರತಿಯಾಗಿ ಸೋಲಿನ ಅಂತರ ತಗ್ಗಿಸಲಷ್ಟೇ ಹೋರಾಡಿದ ಬಾಂಗ್ಲಾ, 7 ವಿಕೆಟ್ಗೆ 164 ರನ್ಗಳಿಸಲಷ್ಟೇ ಶಕ್ತಗೊಂಡಿತು.
ಅಬ್ಬರಿಸಿದ ಸಂಜು-ಸೂರ್ಯ: ಆರಂಭಿಕ 2 ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸಲು ವಿಫಲವಾಗಿದ್ದ ಸಂಜು ಸ್ಯಾಮ್ಸನ್ 3ನೇ ಪಂದ್ಯದಲ್ಲಿ ಲಯಕ್ಕೆ ಮರಳಿದರು. ಟಸ್ಕಿನ್ ಅಹ್ಮದ್ ಎಸೆದ ಮೊದಲ ಓವರ್‌ನಲ್ಲಿ ಸತತ 4 ಬೌಂಡರಿ ಗಳಿಸಿದ ಸ್ಯಾಮ್ಸನ್ ಆಕ್ರಮಣಕಾರಿ ಆಟಕ್ಕಿಳಿದರು. ಮರು ಓವರ್‌ನಲ್ಲಿ ಅಭಿಷೇಕ್ ಡಗೌಟ್ ಸೇರಿದರು. ಆಗ ಸಂಜು ಜತೆಯಾದ ಸೂರ್ಯಕುಮಾರ್ ಬಾಂಗ್ಲಾ ಬೌಲರ್ಗಳನ್ನು ಬೆಂಡೆತ್ತುವ ಮೂಲಕ ರನ್ವುಳೆ ಸುರಿಸಿದರು. ಇವರಿಬ್ಬರು 2ನೇ ವಿಕೆಟ್ಗೆ ಪ್ರತಿ ಓವರ್ಗೆ 15.04ರ ಸರಾಸರಿಯಂತೆ 70 ಎಸೆತಗಳಲ್ಲಿ 173 ರನ್ ಕಸಿದರು. ಸ್ಯಾಮ್ಸನ್ ಆಟಕ್ಕೆ ಸೂರ್ಯ ಉತ್ತಮ ಬೆಂಬಲ ಒದಗಿಸಿ ಭದ್ರ ಅಡಿಪಾಯ ಹಾಕಿದರು. 7.1 ಓವರ್ಗಳಲ್ಲಿ 100ರ ಗಡಿ ದಾಟಿಸಿದ ಇವರಿಬ್ಬರು ರನ್ಗತಿಗೆ ಮತ್ತಷ್ಟು ಚುರುಕು ನೀಡಿದರು. 40 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿದ ಸಂಜು ಆರಂಭಿಕ ಸ್ಥಾನವನ್ನು ಸಮರ್ಥಿಸಿಕೊಂಡರು. ಸೂರ್ಯ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಜೋಡಿಯನ್ನು ಮುಸ್ತಾಫಿಜುರ್ ಬೇರ್ಪಡಿಸಿದರು. 14 ಓವರ್ಗೆ ಟೀಮ್ ಇಂಡಿಯಾ 2 ವಿಕೆಟ್ಗೆ 201 ರನ್ಗಳಿಸಿತು. (ಏಜೆನ್ಸೀಸ್)