ಹೈದರಾಬಾದ್: ವಿಕೆಟ್ ಕೀಪರ್-ಆರಂಭಿಕ ಸಂಜು ಸ್ಯಾಮ್ಸನ್ (111 ರನ್, 47 ಎಸೆತ, 11 ಬೌಂಡರಿ, 8 ಸಿಕ್ಸರ್) ಚೊಚ್ಚಲ ಶತಕ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (75 ರನ್, 35 ಎಸೆತ, 8 ಬೌಂಡರಿ, 5 ಸಿಕ್ಸರ್) ಬಿರುಸಿನ ಆಟದ ನೆರವಿನಿಂದ ಬೌಂಡರ್-ಸಿಕ್ಸರ್ಗಳ ಸುರಿಮಳೆಗೈದು ರನ್ಪ್ರವಾಹ ಹರಿಸಿದ ಟಿ20 ವಿಶ್ವ ಚಾಂಪಿಯನ್ ಭಾರತದ ಯುವಪಡೆ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 133 ರನ್ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಸೂರ್ಯಕುಮಾರ್ ಪಡೆ 3 ಪಂದ್ಯಗಳ ಸರಣಿಯಲ್ಲಿ 3-0 ಕ್ಲೀನ್ಸ್ವೀಪ್ ಸಾಧಿಸಿದೆ. ಜತೆಗೆ ಟೀಮ್ ಇಂಡಿಯಾ ತನ್ನ ಸತತ ಗೆಲುವಿನ ಓಟವನ್ನು 10ನೇ ಪಂದ್ಯಕ್ಕೆ ವಿಸ್ತರಿಸಿದೆ.
ಆರ್ಜಿಐ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ, ಎಡಗೈ ಆರಂಭಿಕ ಅಭಿಷೇಕ್ ಶರ್ಮ (4) ವಿಕೆಟ್ ಬೇಗನೆ ಕಳೆದುಕೊಂಡಿತು. ಆಗ ಜತೆಯಾದ ಸ್ಯಾಮ್ಸನ್ -ಸೂರ್ಯ ನಡೆಸಿದ ಬಿರುಸಿನ ಜತೆಯಾಟ ಹಾಗೂ ಸ್ಲಾಗ್ ಓವರ್ಗಳಲ್ಲಿ ರಿಯಾನ್ ಪರಾಗ್ (34 ರನ್, 13 ಎಸೆತ, 1 ಬೌಂಡರಿ, 4 ಸಿಕ್ಸರ್)- ಹಾರ್ದಿಕ್ ಪಾಂಡ್ಯ (47 ರನ್, 18 ಎಸೆತ, 4 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಬಲದಿಂದ 6 ವಿಕೆಟ್ಗೆ 297 ರನ್ ಪೇರಿಸಿತು. 25 ಬೌಂಡರಿ, 22 ಸಿಕ್ಸರ್ ಸಿಡಿಸಿದರೂ, ಕೇವಲ 3 ರನ್ಗಳಿಂದ 300 ರನ್ ಸಾಧನೆಯಿಂದ ವಂಚಿತವಾದ ಭಾರತ, ಟಿ20 ಕ್ರಿಕೆಟ್ನಲ್ಲಿ ಟೆಸ್ಟ್ ರಾಷ್ಟ್ರಗಳ ಪೈಕಿ ಸರ್ವಾಧಿಕ ಮೊತ್ತದ ದಾಖಲೆ ಬರೆಯಿತು. ಪ್ರತಿಯಾಗಿ ಸೋಲಿನ ಅಂತರ ತಗ್ಗಿಸಲಷ್ಟೇ ಹೋರಾಡಿದ ಬಾಂಗ್ಲಾ, 7 ವಿಕೆಟ್ಗೆ 164 ರನ್ಗಳಿಸಲಷ್ಟೇ ಶಕ್ತಗೊಂಡಿತು.
ಅಬ್ಬರಿಸಿದ ಸಂಜು-ಸೂರ್ಯ: ಆರಂಭಿಕ 2 ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸಲು ವಿಫಲವಾಗಿದ್ದ ಸಂಜು ಸ್ಯಾಮ್ಸನ್ 3ನೇ ಪಂದ್ಯದಲ್ಲಿ ಲಯಕ್ಕೆ ಮರಳಿದರು. ಟಸ್ಕಿನ್ ಅಹ್ಮದ್ ಎಸೆದ ಮೊದಲ ಓವರ್ನಲ್ಲಿ ಸತತ 4 ಬೌಂಡರಿ ಗಳಿಸಿದ ಸ್ಯಾಮ್ಸನ್ ಆಕ್ರಮಣಕಾರಿ ಆಟಕ್ಕಿಳಿದರು. ಮರು ಓವರ್ನಲ್ಲಿ ಅಭಿಷೇಕ್ ಡಗೌಟ್ ಸೇರಿದರು. ಆಗ ಸಂಜು ಜತೆಯಾದ ಸೂರ್ಯಕುಮಾರ್ ಬಾಂಗ್ಲಾ ಬೌಲರ್ಗಳನ್ನು ಬೆಂಡೆತ್ತುವ ಮೂಲಕ ರನ್ವುಳೆ ಸುರಿಸಿದರು. ಇವರಿಬ್ಬರು 2ನೇ ವಿಕೆಟ್ಗೆ ಪ್ರತಿ ಓವರ್ಗೆ 15.04ರ ಸರಾಸರಿಯಂತೆ 70 ಎಸೆತಗಳಲ್ಲಿ 173 ರನ್ ಕಸಿದರು. ಸ್ಯಾಮ್ಸನ್ ಆಟಕ್ಕೆ ಸೂರ್ಯ ಉತ್ತಮ ಬೆಂಬಲ ಒದಗಿಸಿ ಭದ್ರ ಅಡಿಪಾಯ ಹಾಕಿದರು. 7.1 ಓವರ್ಗಳಲ್ಲಿ 100ರ ಗಡಿ ದಾಟಿಸಿದ ಇವರಿಬ್ಬರು ರನ್ಗತಿಗೆ ಮತ್ತಷ್ಟು ಚುರುಕು ನೀಡಿದರು. 40 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿದ ಸಂಜು ಆರಂಭಿಕ ಸ್ಥಾನವನ್ನು ಸಮರ್ಥಿಸಿಕೊಂಡರು. ಸೂರ್ಯ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಜೋಡಿಯನ್ನು ಮುಸ್ತಾಫಿಜುರ್ ಬೇರ್ಪಡಿಸಿದರು. 14 ಓವರ್ಗೆ ಟೀಮ್ ಇಂಡಿಯಾ 2 ವಿಕೆಟ್ಗೆ 201 ರನ್ಗಳಿಸಿತು.
ಸತತ 5 ಸಿಕ್ಸರ್ ಚಚ್ಚಿದ ಸ್ಯಾಮ್ಸನ್: ಇನಿಂಗ್ಸ್ನ 10ನೇ ಓವರ್ನಲ್ಲಿ ಏಕಾಂಗಿಯಾಗಿ 30 ರನ್ ಕಸಿದ ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್ನ ಒಂದೇ ಓವರ್ನಲ್ಲಿ ಎರಡನೇ ಗರಿಷ್ಠ ರನ್ ಪೇರಿಸಿದ ಭಾರತೀಯ ಬ್ಯಾಟರ್ ಎನಿಸಿದರು. ಯುವರಾಜ್ ಸಿಂಗ್ (36) ಮೊದಲಿಗರು. ರಿಷದ್ ಹೊಸೈನ್ ಎಸೆದ ಓವರ್ನ ಮೊದಲ ಎಸೆತದಲ್ಲಿ ಒಂದೂ ರನ್ಗಳಿಸದ ಸಂಜು, ನಂತರದ 5 ಎಸೆತಗಳಲ್ಲಿ ಸತತವಾಗಿ ಸಿಕ್ಸರ್ ಬಾರಿಸಿದರು. ಇದರಿಂದ ಭಾರತ 10 ಓವರ್ಗಳಲ್ಲೇ 150 ರನ್ ಪೂರೈಸಿತು.
ಮೊತ್ತ ಏರಿಸಿದ ಹಾರ್ದಿಕ್-ಪರಾಗ್: ಸೂರ್ಯ ನಿರ್ಗಮನದ ಬಳಿಕ ಜತೆಯಾದ ರಿಯಾನ್ ಪರಾಗ್ ಹಾಗೂ ಹಾರ್ದಿಕ್ ಪಾಂಡ್ಯ ಬಾಂಗ್ಲಾ ಬೌಲರ್ಗಳನ್ನು ಕಾಡಿದರು. ರನ್ಗಳಿಕೆಗೆ ಚುರುಕು ನೀಡಿದ ಇವರಿ ಬ್ಬರು 4ನೇ ವಿಕೆಟ್ಗೆ 26 ಎಸೆತಗಳಲ್ಲಿ 70 ರನ್ ಬಾರಿಸಿದರು. ಸ್ಲಾಗ್ ಓವರ್ಗಳಲ್ಲಿ ಅಬ್ಬರಿಸಿದ ಇವರಿಬ್ಬರು ಪ್ರತಿ ಓವರ್ಗೆ ಸರಾಸರಿ 14 ರನ್ ಕಲೆಹಾಕಿದರು. ತಂಜಿಮ್ ಸಕೀಬ್ ಎಸೆದ 16ನೇ ಓವರ್ನಲ್ಲಿ 21 ರನ್ ಕಸಿದ ಹಾರ್ದಿಕ್ 300 ಪ್ಲಸ್ ರನ್ ಪೇರಿಸುವ ನಿರೀಕ್ಷೆ ಮೂಡಿಸಿದರು. ಕೊನೇ 2 ಓವರ್ಗಳಲ್ಲಿ ತಲಾ 15 ರನ್ಗಳಿಸಿದರೂ ಭಾರತ ತ್ರಿಶತಕ ತಪ್ಪಿಸಿಕೊಂಡಿತು.
297: ಟಿ20 ಕ್ರಿಕೆಟ್ ಇತಿಹಾಸದ 2ನೇ ಸರ್ವಾಧಿಕ ಮೊತ್ತ ಇದಾಗಿದೆ. 2023ರಲ್ಲಿ ನೇಪಾಳ ಏಷ್ಯನ್ ಗೇಮ್ಸ್ನಲ್ಲಿ ಮಂಗೋಲಿಯಾ ಎದುರು 3 ವಿಕೆಟ್ಗೆ 314 ರನ್ ಸಿಡಿಸಿದ್ದು ಸರ್ವಾಧಿಕ. ಟೆಸ್ಟ್ ದೇಶಗಳ ಪೈಕಿ ಅಫ್ಘಾನಿಸ್ತಾನ 2019ರಲ್ಲಿ 3 ವಿಕೆಟ್ಗೆ 278 ರನ್ ಗಳಿಸಿದ್ದು ಹಿಂದಿನ ಗರಿಷ್ಠ.
2ನೇ ವೇಗದ ಶತಕ: ಸಂಜು ಸ್ಯಾಮ್ಸನ್ 40 ಎಸೆತಗಳಲ್ಲೇ ಟಿ20 ಅಂತಾ ರಾಷ್ಟ್ರೀಯ ಕ್ರಿಕೆಟ್ನ ಚೊಚ್ಚಲ ಶತಕ ಸಿಡಿಸಿದರು. ಈ ಮೂಲಕ ಭಾರತದ 2ನೇ ಅತಿವೇಗದ ಶತಕ ಸಾಧಕ ಎನಿಸಿದರು. 2017ರಲ್ಲಿ ರೋಹಿತ್ ಶರ್ಮ 35 ಎಸೆತಗಳಲ್ಲೇ ಶತಕ ಸಿಡಿಸಿದ್ದು ದಾಖಲೆ. ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್-ಬ್ಯಾಟರ್.