ಕ್ರೀಡೆ

ಮೊದಲ ಓವರ್​ನಲ್ಲೇ 4 ವಿಕೆಟ್​: ವಿಶ್ವದಾಖಲೆ ಬರೆದ ಪಾಕ್​ ವೇಗಿ ಶಾಹೀನ್ ಶಾ​ ಅಫ್ರಿದಿ

ಲಂಡನ್​: ಮೊದಲ ಓವರ್​ನಲ್ಲೇ 4 ವಿಕೆಟ್​ ಕಬಳಿಸುವ ಮೂಲಕ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ 20 ಬ್ಲ್ಯಾಸ್ಟ್​ ಸರಣಿಯಲ್ಲಿ ಪಾಕಿಸ್ತಾನದ ವೇಗಿ ಶಾಹೀನ್​ ಅಫ್ರಿದಿ ವಿಶ್ವದಾಖಲೆ ಬರೆದಿದ್ದಾರೆ.

ಟಿ 20 ಬ್ಲ್ಯಾಸ್ಟ್​ ಸರಣಿಯಲ್ಲಿ ನಾಟ್ಟಿಂಗ್​ಹ್ಯಾಮ್​ಶೈರ್ ಪರ ಆಡುತ್ತಿರುವ ಶಾಹೀನ್​ ಅಫ್ರಿದಿ ಶುಕ್ರವಾರ ಬರ್ಮಿಂಗ್​ಹ್ಯಾಮ್​ ಬಿಯರ್ಸ್​ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಈ ಗಮನಾರ್ಹ ಸಾಧನೆ ಮಾಡಿದ್ದಾರೆ. ಮೊದಲ ಓವರ್​ನಲ್ಲೇ 4 ವಿಕೆಟ್​ ಪಡೆದರೂ ನಾಟ್ಟಿಂಗ್​ಹ್ಯಾಮ್​ಶೈರ್ ತಂಡ ಎರಡು ವಿಕೆಟ್​ಗಳ ಅಂತರದಲ್ಲಿ ಪಂದ್ಯವನ್ನು ಕೈಚೆಲ್ಲಿತು.

ರಾಬ್​ ಯೇಟ್ಸ್ (46 ಎಸೆತ 65 ರನ್​) ಅವರ ಅಬ್ಬರ ಆಟದ ನೆರವಿನಿಂದ ಬರ್ಮಿಂಗ್​ಹ್ಯಾಮ್​ ಬಿಯರ್ಸ್​ ತಂಡ ವಿಜಯೋತ್ಸವ ಆಚರಿಸಿತು. ರೋಚಕ ಪಂದ್ಯದಲ್ಲಿ ಸೋಲುಂಡ ನಾಟ್ಟಿಂಗ್​ಹ್ಯಾಮ್​ಶೈರ್ ಕ್ವಾರ್ಟರ್​ಫೈನಲ್​ ಪ್ರವೇಶಿಸಲು ವಿಫಲವಾಯಿತು. ಆದರೂ ಶಾಹೀನ್​ ಅವರ ಬೌಲಿಂಗ್​ ಮಾತ್ರ ಎಲ್ಲರ ಗಮನ ಸೆಳೆಯಿತು.

ಮೊದಲ ಓವರ್​ನಲ್ಲಿ ಅಲೆಕ್ಸ್​ ಡೆವಿಸ್​ (0), ಕ್ರಿಸ್​ ಬೆಂಜಮಿನ್​ (0), ಡಾನ್ ಮೌಸ್ಲಿ (1) ಮತ್ತು ಎಡ್​ ಬರ್ನಾರ್ಡ್​ (0) ಅವರನ್ನು ಔಟ್​ ಮಾಡಿದರು. ಎರಡನೇ ಇನ್ನಿಂಗ್ಸ್​ನ ಮೊದಲ ಎಸೆತದಲ್ಲಿ ಯಾರ್ಕರ್​ ಮೂಲಕ ಶಾಹೀನ್​, ಡೆವಿಸ್​ ಅವರನ್ನು ಎಲ್​ಬಿ ಡಬ್ಲ್ಯು ಬಲೆಗೆ ಬೀಳಿಸಿದರು. ಇದರ ಬೆನ್ನಲ್ಲೇ ಬೆಂಜಮಿನ್​ ಬೋಲ್ಡ್​ ಆಗುವ ಮೂಲಕ ವಿಕೆಟ್​ ಒಪ್ಪಿಸಿದರು. ಓವರ್​ನ ಐದನೇ ಎಸೆತದಲ್ಲಿ ನೌಸ್ಲಿ ಕ್ಯಾಚಿತ್ತು ನಿರ್ಗಮಿಸಿದರು ಮತ್ತು ಓವರ್​ನ ಕೊನೆಯ ಎಸೆತದಲ್ಲಿ ಬರ್ನಾರ್ಡ್​ ಕ್ಲೀನ್​ ಬೋಲ್ಡ್​ ಆಗಿ ಡಗೌಟ್​ ಕಡೆ ತೆರಳಿದರು.

ಶಾಹೀನ್​ ನಾಲ್ಕು ವಿಕೆಟ್​ ಪಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಶಾಹೀನ್​ ಪ್ರಯತ್ನ ಕೈಗೂಡಲಿಲ್ಲ ಎಂಬ ಬೇಸರವೂ ಇದೆ. ಶಾಹೀನ್​ ಪ್ರಯತ್ನವನ್ನು ಮಧ್ಯಮ ಕ್ರಮಾಂಕದಲ್ಲಿ ಬಂದ ಯೇಟ್ಸ್​ ವಿಫಲಗೊಳಿಸಿದರು. ಮೊದಲು ಬ್ಯಾಟ್​ ಮಾಡಿದ ನಾಟ್ಟಿಂಗ್​ಹ್ಯಾಮ್​ಶೈರ್ ತಂಡ 169 ರನ್​ ಗಳಿಸಿತ್ತು ಮತ್ತು ಬರ್ಮಿಂಗ್​ಹ್ಯಾಮ್​ ಬಿಯರ್ಸ್​ ತಂಡ 8 ವಿಕೆಟ್​ ನಷ್ಟದೊಂದಿಗೆ ಗುರಿ ಮುಟ್ಟಿತು. (ಏಜೆನ್ಸೀಸ್​)