ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಭಾರತ (Team India) ಹಾಗೂ ನ್ಯೂಜಿಲೆಂಡ್ (Newzealand) ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ತವರು ನೆಲದಲ್ಲಿ ಐತಿಹಾಸಿಕ ಸೋಲು ಕಂಡಿದ್ದು, 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಕಿವೀಸ್ ಪಡೆ ಹೊಸ ದಾಖಲೆ ಬರೆದಿದೆ. ಗೌತಮ್ ಗಂಭೀರ್ ಟೀಮ್ ಇಂಡಿಯಾದ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೂರನೇ ಸರಣಿ ಇದಾಗಿದ್ದು, ಭಾರತದ (Team India) ಸೋಲಿಗೆ ಹಲವು ಕಾರಣಗಳನ್ನು ಉಲ್ಲೇಖಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಸೋಲಿಗೆ ಕಾರಣವಾದ ಮೂರು ಅಂಶಗಳನ್ನು ನೋಡೋಣ ಬನ್ನಿ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 25ನೇ ಟೆಸ್ಟ್ ಪಂದ್ಯ ಇದಾಗಿದ್ದು, ಮೊದಲ ದಿನದಾಟ ಮಳೆಯಿಂದಾಗಿ ಸಂಪೂರ್ಣ ರದ್ದುಗೊಂಡಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ರೋಹಿತ್ ಶರ್ಮ (Rohit Sharma) ದೊಡ್ಡ ತಪ್ಪು ಮಾಡಿದ್ದಾರೆ ಎಂದು ಹೇಳಲಾಗಿದೆ. ಏಕೆಂದರೆ ಬ್ಯಾಟಿಂಗ್ಗೆ ಪಿಚ್ ಹೆಚ್ಚು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ರೋಹಿತ್ ಈ ನಿರ್ಧಾರ ಕೈಗೊಂಡಿದ್ದು, ಟೀಮ್ ಇಂಡಿಯಾ ಪಾಲಿಗೆ ಮೊದಲ ಮುಳುವಾಗಿ ಪರಿಣಮಿಸಿತು. ಮಳೆ ಬರುವ ಮುನ್ಸೂಚನೆ ಇದ್ದರೂ ನಾಯಕ ರೋಹಿತ್ ಶರ್ಮ ಬ್ಯಾಟಿಂಗ್ ಆಯ್ದುಕೊಂಡಿದ್ದು, ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿತು.
ಏಕೆಂದರೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ (Test Series) ಎರಡನೇ ಪಂದ್ಯ ಮಳೆಬಾಧಿತವಾದರೂ ಟೀಮ್ ಇಂಡಿಯಾ (Team India) ಪಾಲಿಗೆ ವರದಾನವಾಗಿತ್ತು. ಇದರ ಸಂಪೂರ್ಣ ಲಾಭ ಪಡೆದ ಭಾರತ ತಂಡವು ಪ್ರವಾಸಿ ತಂಡದ ಎದುರು ಗೆದ್ದು ಬೀಗಿತ್ತು. ಹೀಗಾಗಿ ರೋಹಿತ್ ಶರ್ಮ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತಾದರೂ ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಹಿಟ್ಮ್ಯಾನ್ ಅಚ್ಚರಿ ಮೂಡಿಸಿದ್ದರು.
ನಾಲ್ಕನೇ ದಿನದಾಟ ಆರಂಭದಲ್ಲಿ ನ್ಯೂಜಿಲೆಂಡ್ ಬ್ಯಾಟರ್ಗಳಿಗೆ ಇನ್ನಿಲ್ಲದಂತೆ ಕಾಡಿದ ಭಾರತದ (Team India) ಬೌಲರ್ಗಳು ತಿರುಗೇಟು ನೀಡಲು ಯತ್ನಿಸಿದರು. ಆದರೆ, ಈ ವೇಳೆ ಜತೆಯಾದ ರಚಿನ್ (Rachin) ಹಾಗೂ ಮಾಜಿ ನಾಯಕ ಟಿಮ್ ಸೌಥಿ (Tim Southee) ಭಾರತೀಯ ಬೌಲರ್ಗಳಿಗೆ ಸವಾಲೊಡ್ಡಿದರು. ಸ್ಪಿನ್ನರ್ ಹಾಗೂ ವೇಗಿಗಳ ಎದುರು ದಿಟ್ಟ ಬ್ಯಾಟಿಂಗ್ ನಡೆಸಿ ರಚಿನ್ ಮಿಂಚಿದರು. ಇವರಿಬ್ಬರು 8ನೇ ವಿಕೆಟ್ಗೆ ಈ ಜೋಡಿ 132 ಎಸೆತಗಳಲ್ಲಿ 137 ರನ್ ಕಸಿದರು. ರಚಿನ್ ತಾನೆದುರಿಸಿದ 124ನೇ ಎಸೆತದಲ್ಲಿ ಬೌಂಡರಿ ಬಾರಿಸಿ ಶತಕದ ಸಂಭ್ರಮ ಕಂಡರು. ಭೋಜನಾ ವಿರಾಮದ ನಂತರ ಈ ಜೋಡಿಯನ್ನು ಸಿರಾಜ್ ಬೇರ್ಪಡಿಸಿದರು. ರಚಿನ್ ಔಟ್ ಆಗುವುದರೊಂದಿಗೆ ಕಿವೀಸ್ ಮೊದಲ ಇನಿಂಗ್ಸ್ ಮುಗಿಸಿತು.
ಸರ್ಫರಾಜ್ ಹಾಗೂ ಪಂತ್ ಔಟಾದ ಬಳಿಕ ಭಾರತದ ಬ್ಯಾಟ್ಸ್ಮನ್ಗಳು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಈ ವೇಳೆ ಕನ್ನಡಿಗ ಕೆ.ಎಲ್. ರಾಹುಲ್ (12) ಅತ್ಯಲ್ಪ ಮೊತ್ತಕ್ಕೆ ಔಟಾಗಿದ್ದು, ಇದಲ್ಲದೆ ರವೀಂದ್ರ ಜಡೇಜಾ (5), ಆರ್.ಅಶ್ವಿನ್ (15), ಜಸ್ಪ್ರೀತ್ ಬುಮ್ರಾ (0) ಹಾಗೂ ಮೊಹಮದ್ ಸಿರಾಜ್ (0) ಔಟಾಗುವುದರೊಂದಿಗೆ ಭಾರತದ ಬ್ಯಾಟರ್ಗಳ ಹೋರಾಟ ಅಂತ್ಯಗೊಂಡಿತು. 107 ರನ್ಗಳ ಗುರಿಯನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡವು 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಗೆಲುವಿನ ನಗೆ ಬೀರಿತು. ಈ ಮೂರು ಅಂಶಗಳು ಭಾರತದ (Team India) ಸೋಲಿಗೆ ಪ್ರಮುಖ ಕಾರಣ ಎಂದು ಹೇಳಬಹುದಾಗಿದೆ.