ಕ್ರೀಡೆ

ಈ ಮೂವರು ಆರ್​ಸಿಬಿ ಬೌಲರ್​ಗಳಿಗೆ ಪರ್ಪಲ್​ ಕ್ಯಾಪ್​ ಪಡೆಯುವ ಸಾಮರ್ಥ್ಯವಿದೆ! ಹೀಗಿದೆ IPL 2025ರ ಲೆಕ್ಕಾಚಾರ | Purple Cap

ಬೆಂಗಳೂರು: ಈ ಬಾರಿ ನಡೆದ ಎರಡು ದಿನಗಳ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್​ ಹಾಗೂ ಯುವ ಆಟಗಾರರನ್ನೇ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್​ ನಂತರದಲ್ಲಿ ಉತ್ತಮ ಖರೀದಿಯನ್ನು ಮಾಡಿದ ಟೀಮ್ ಎಂಬ ಪಟ್ಟಿಗೆ ಸೇರ್ಪಡೆಗೊಂಡಿತು. ಒಂದೆಡೆ ಆರ್​ಸಿಬಿ ಆಯ್ದುಕೊಂಡ ಆಟಗಾರರು ಫ್ಯಾನ್ಸ್​ಗಳ ಲೆಕ್ಕಾಚಾರವನ್ನು ಮೊದಲಿಗೆ ದಿಕ್ಕರಿಸಿದ್ದೇ ಆದರೂ ಅಂತಿಮ ಪಟ್ಟಿಯಲ್ಲಿ ಖುಷಿ ನೀಡಿತು. ಏಕೆಂದೆರೆ, ಆಕ್ಷನ್​ನ ಎರಡನೇ ದಿನದ ಅಂತ್ಯದಲ್ಲಿ ಮ್ಯಾನೇಜ್​ಮೆಂಟ್​ ಬಹುನಿರೀಕ್ಷಿತ ಕ್ರಿಕೆಟಿಗರನ್ನೇ ತಮ್ಮ ತೆಕ್ಕೆಗೆ ಖರೀದಿ ಮಾಡಿಕೊಂಡಿತು. ಸದ್ಯ 2025ರ ಏಪ್ರಿಲ್​ನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಿಗಾಗಿ ಕಾತರ ಹೊರಹಾಕಿರುವ ಫ್ಯಾನ್ಸ್​ಗಳು, ಯಾರು 18ನೇ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುತ್ತಾರೆ, ಯಾರ ಮುಡಿಗೆ ಆರೆಂಜ್ ಮತ್ತು ಪರ್ಪಲ್​ ಕ್ಯಾಪ್ (Purple Cap)​ ಹೋಗಲಿದೆ ಎಂಬ ಲೆಕ್ಕಾಚಾರವನ್ನು ಇಂದಿನಿಂದಲೇ ಆರಂಭಿಸಿದ್ದಾರೆ. ಈ ಬಗ್ಗೆ ಒಂದಷ್ಟು ವರದಿಗಳು ಕೂಡ ಹೊರಬಿದ್ದಿವೆ.

ಐಪಿಎಲ್​ ಆವೃತ್ತಿಯ ಅಂತ್ಯದಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರರಿಗೆ ಆರೆಂಜ್​ ಕ್ಯಾಪ್​ ದೊರಕಿದರೆ, ಅತಿ ಹೆಚ್ಚು ವಿಕೆಟ್​ಗಳನ್ನು ಕಬಳಿಸಿದ ಬೌಲರ್​ಗೆ ಪರ್ಪಲ್​ ಕ್ಯಾಪ್ ನೀಡಲಾಗುವುದು. ಸದ್ಯ ಮುಂಬರುವ ಐಪಿಎಲ್​ 18ನೇ ಸೀಸನ್​ನಲ್ಲಿ ಆರ್​ಸಿಬಿಯ ಈ ಮೂವರು ಬೌಲರ್​ಗಳು ಪರ್ಪಲ್​ ಕ್ಯಾಪ್​ ಗಳಿಸುವ ಅವಕಾಶವಿದೆ ಎಂದು ಕ್ರಿಕೆಟ್​ ವರದಿಯೊಂದು ಉಲ್ಲೇಖಿಸಿದೆ. 2008ರಿಂದ 2024ರವರೆಗೆ ಒಂದು ಬಾರಿಯೂ ಐಪಿಎಲ್​ ಟ್ರೋಫಿ ಎತ್ತದ ಆರ್​ಸಿಬಿಗೆ 2025ರಲ್ಲಿ ಕಪ್​ ಗೆಲ್ಲಲು ಈ ಮೂವರು ಸ್ಟಾರ್​ ಬೌಲರ್​ಗಳು ಸಹಾಯ ಮಾಡಲಿದ್ದಾರೆ ಎಂಬುದು ಸದ್ಯ ಅಭಿಮಾನಿಗಳ ಮಹಾದಾಸೆ.

ಪ್ರತಿಬಾರಿ ಬ್ಯಾಟಿಂಗ್​ ಲೈನ್ ಮಾತ್ರ​ ಬಲಿಷ್ಠ ಪಡಿಸುತ್ತಿದ್ದ ಫ್ರಾಂಚೈಸಿ, ಈ ಬಾರಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡನ್ನು ಗಟ್ಟಿಗೊಳಿಸಿದೆ. ಇದು ಫ್ಯಾನ್ಸ್​ಗಳಲ್ಲಿ ಅಪಾರ ಭರವಸೆ ಮತ್ತು ನಿರೀಕ್ಷೆಗಳನ್ನು ಮೂಡಿಸಿದೆ. ಪ್ರಸ್ತುತ ಆರ್​ಸಿಬಿ ತಂಡದಲ್ಲಿರುವ ಮೂವರು ಬಲಿಷ್ಠ ಬೌಲರ್​ಗಳು ಜೋಶ್ ಹೆಜಲ್‌ವುಡ್, ಭುವನೇಶ್ವರ್ ಕುಮಾರ್ ಮತ್ತು ನುವಾನ್ ತುಸಾರ. ಇವರೆಲ್ಲರೂ ಕೂಡ ವೇಗಿಗಳೇ ಆಗಿರುವುದು ಸದ್ಯ ಆರ್​ಸಿಬಿಗೆ ಬೌಲಿಂಗ್​ ಯೂನಿಟ್​ಗೆ ಆನೆಬಲ ನೀಡಿದಂತಾಗಿದೆ.

ಪರ್ಪಲ್​ ಕ್ಯಾಪ್ ಮುಡಿಗೆ

ಕಳೆದ ಆವೃತ್ತಿಯಲ್ಲಿ ಅತ್ಯಧಿಕ ರನ್​ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್​ ಪಡೆದ ವಿರಾಟ್​ ಕೊಹ್ಲಿ, ಸೀಸನ್ ಪೂರ ತಮ್ಮ ಬ್ಯಾಟಿಂಗ್​ ಪ್ರದರ್ಶನವನ್ನು ಕಳಪೆ ಮಟ್ಟಕ್ಕೆ ಕೊಂಡೊಯ್ಯಲಿಲ್ಲ. ಪಂದ್ಯಗಳಲ್ಲಿ ಸೋಲು ಕಂಡರೂ ವಿರಾಟ್​ ಬ್ಯಾಟಿಂಗ್ ಅಬ್ಬರಕ್ಕೆ ಮಾತ್ರ ಯಾವುದೇ ಅಡೆ-ತಡೆ ಇರಲಿಲ್ಲ. ಆವೃತ್ತಿ ಪೂರ ಅತ್ಯಧಿಕ ರನ್​ ಗಳಿಸಿದ ಮೇರೆಗೆ ವಿರಾಟ್​ ಆರೆಂಜ್​ ಕ್ಯಾಪ್​ಗೆ ಭಾಜನರಾದರು. ಇದೀಗ ಈ ಮೂವರು ಫಾಸ್ಟ್​ ಬೌಲರ್​ಗಳು ಪರ್ಪಲ್ ಕ್ಯಾಪ್​ ಅನ್ನು ತಮ್ಮ ಮುಡಿಗೇರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಇತರೆ ತಂಡದ ಬೌಲರ್​ಗಳ ಜತೆ ಉತ್ತಮ ಸ್ಪರ್ಧೆ ಮಾಡಬಹುದು ಎಂಬ ನಿರೀಕ್ಷೆಯಿದೆ,(ಏಜೆನ್ಸೀಸ್).